ಮನೋರಂಜನೆ

ರಹಾನೆ-ಕೊಹ್ಲಿ ‘ವಿರಾಟ’ ಬ್ಯಾಟಿಂಗ್‌: ಮೆಲ್ಬೋರ್ನ್‌ನಲ್ಲಿ ಮೂರನೆ ದಿನ ಆಸ್ಟ್ರೇಲಿಯಕ್ಕೆ ಭಾರತದ ತಿರುಗೇಟು

Pinterest LinkedIn Tumblr

KO--RAINA

ಮೆಲ್ಬೋರ್ನ್, ಡಿ.28: ಉಪ ನಾಯಕ ವಿರಾಟ್ ಕೊಹ್ಲಿ ಮತ್ತು ಮಧ್ಯಮ ಸರದಿಯ ದಾಂಡಿಗ ಅಜಿಂಕ್ಯ ರಹಾನೆ ದಾಖಲೆಯ ಜೊತೆಯಾಟದ ನೆರವಿನಲ್ಲಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಕ್ಕೆ ತಿರುಗೇಟು ನೀಡಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಟೆಸ್ಟ್‌ನ ಮೂರನೆ ದಿನವಾಗಿರುವ ರವಿವಾರ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಶತಕದ ನೆರವಿನಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 126.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 462 ರನ್ ಗಳಿಸಿದ್ದು, ಆಸ್ಟ್ರೇಲಿಯದ ಮೊತ್ತವನ್ನು ಸರಿಗಟ್ಟಲು ಇನ್ನೂ 68 ರನ್ ಸೇರಿಸಬೇಕಾಗಿದೆ.

ಕೊಹ್ಲಿ ಮತ್ತು ರಹಾನೆ ಆಸ್ಟ್ರೇಲಿಯದ ಬೌಲರ್‌ಗಳ ಬೆವರಿಳಿಸಿ ನಾಲ್ಕನೆ ವಿಕೆಟ್‌ಗೆ 262 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಉಬ್ಬಿಸಿದರು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಎರಡು ವರ್ಷಗಳ ಹಿಂದೆ ಶ್ರೀಲಂಕಾ ವಿರುದ್ಧ ಮೈಕಲ್ ಕ್ಲಾರ್ಕ್ ಮತ್ತು ಶೇನ್ ವ್ಯಾಟ್ಸನ್ ನಿರ್ಮಿಸಿದ್ದ 194 ರನ್‌ಗಳ ಜೊತೆಯಾಟವನ್ನು ಮುರಿದರು.

ಕೊಹ್ಲಿ ಸರಣಿಯಲ್ಲಿ ಮೂರನೆ ಶತಕ ದಾಖಲಿಸಿದರು. ಅವರು 380 ನಿಮಿಷಗಳ ಬ್ಯಾಟಿಂಗ್‌ನಲ್ಲಿ 272 ಎಸೆತಗಳನ್ನು ಉತ್ತರಿಸಿ 18 ಬೌಂಡರಿಗಳ ಸಹಾಯದಿಂದ 169 ರನ್ ಗಳಿಸಿದರು. ಮೂರನೆ ದಿನದ ಅಂತಿಮ ಓವರ್‌ನಲ್ಲಿ ಜಾನ್ಸನ್ ಎಸೆತವನ್ನು ಎದುರಿಸುವಲ್ಲಿ ಎಡವಿದ ಕೊಹ್ಲಿ ವಿಕೆಟ್ ಕೀಪರ್ ಬ್ರಾಡ್ ಹಡಿನ್‌ಗೆ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಮೂರನೆ ಆಟ ಕೊನೆಗೊಂಡಿತು. ಆಟ ನಿಂತಾಗ ಮುಹಮ್ಮದ್ ಶಮಿ 9 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

ಕೊಹ್ಲಿ ಮತ್ತು ರಹಾನೆ ಟೆಸ್ಟ್‌ನಲ್ಲಿ ಜೀವನ ಶ್ರೇಷ್ಠ ಪ್ರದರ್ಶನ ನೀಡಿದರು. ಟೆಸ್ಟ್‌ನಲ್ಲಿ 141 ದಾಖಲಿಸಿರುವುದು ಕೊಹ್ಲಿಯ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು. ಈ ಸಾಧನೆಯನ್ನು ಕೊಹ್ಲಿ ಉತ್ತಮಪಡಿಸಿದರು. ಅಜಿಂಕ್ಯ ರಹಾನೆ 4 ಗಂಟೆಗಳ ಕಾಲ ಕ್ರೀಸ್‌ನಲ್ಲಿ ತಳವೂರಿ 171 ಎಸೆತಗಳನ್ನು ಎದುರಿಸಿದರು. 21 ಬೌಂಡರಿಗಳ ಸಹಾಯದಿಂದ 147 ರನ್ ಗಳಿಸಿದ್ದಾಗ ಅವರನ್ನು ನಥನ್ ಲಿನ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ರಹಾನೆಯ ಹಿಂದಿನ ಗರಿಷ್ಠ ವೈಯಕ್ತಿಕ ಸ್ಕೋರ್ 118.

ಕೊಹ್ಲಿ ಮತ್ತು ರಹಾನೆ ಆಸ್ಟ್ರೇಲಿಯದ ಬೌಲರ್ ಜಾನ್ಸನ್ ಬೆವರಿಳಿಸಿದರು. ರಹಾನೆ ಕಳೆದ ಫೆಬ್ರವರಿಯಲ್ಲಿ ವೆಲ್ಲಿಂಗ್‌ಟನ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 118 ರನ್ ಗಳಿಸಿದ್ದರು. ರವಿವಾರ ಜಾನ್ಸನ್ ಎಸೆತದಲ್ಲಿ ಬೌಂಡರಿ ಬಾರಿಸಿ ಈ ದಾಖಲೆಯನ್ನು ಉತ್ತಮಪಡಿಸಿದರು. ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ಆಸ್ಟ್ರೇಲಿಯದ ಆಟಗಾರರಿಗೆ ದುಬಾರಿಯಾಗಿ ಪರಿಣಮಿಸಿತು. ರಹಾನೆ 70 ರನ್ ಮಾಡಿದ್ದಾಗ ಲಿನ್ ಜೀವದಾನ ನೀಡಿದರು. ಕೊಹ್ಲಿ 88ಕ್ಕೆ ತಲುಪಿದ್ದಾಗ ಜಾನ್ಸನ್ ಓವರ್‌ನಲ್ಲಿ ವ್ಯಾಟ್ಸನ್ ಜೀವದಾನ ನೀಡಿದರು. ಚೊಚ್ಚಲ ಟೆಸ್ಟ್ ಆಡುತ್ತಿರುವ ಕರ್ನಾಟಕದ ಲೋಕೇಶ್ ರಾಹುಲ್‌ಗೆ ಬದಲಿ ಕ್ಷೇತ್ರ ರಕ್ಷಕ ಪೀಟರ್ ಸಿಡ್ಲ್ ಜೀವದಾನ ನೀಡಿದ್ದರು.

ಅದ್ಬುತ ಕ್ಯಾಚ್: ಎರಡನೆ ದಿನದಾಟ ನಿಂತಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 37 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 108 ರನ್ ದಾಖಲಿಸಿದೆ. ಮುರಳಿ ವಿಜಯ್ ಅರ್ಧಶತಕ(55) ಮತ್ತು ಚೇತೇಶ್ವರ ಪೂಜಾರ (25) ರನ್ ಗಳಿಸಿ ಬ್ಯಾಟಿಂಗ್‌ನನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದರು. ಮೂರನೆ ದಿನದಾಟವನ್ನು ಮುರಳಿ ವಿಜಯ್ ಮತ್ತು ಪೂಜಾರ ಮುಂದುವರಿಸಿದರು. ಆದರೆ ಇಂದಿನ ಆಟದ ಮೊದಲನೆ ಓವರ್‌ನ ಎರಡನೆ ಎಸೆತದಲ್ಲಿ ಭಾರತ ಎರಡನೆ ವಿಕೆಟ್ ಕಳೆದುಕೊಂಡಿತು. ಹ್ಯಾರಿಸ್ ಓವರ್‌ನ ಎರಡನೆ ಎಸೆತದಲ್ಲಿ ಬ್ರಾಡ್ ಹಡಿನ್ ತೆಗೆದುಕೊಂಡ ಅಪೂರ್ವ ಕ್ಯಾಚ್ ಚೇತೇಶ್ವರ ಪೂಜಾರಗೆ ಪೆವಿಲಿಯನ್ ಹಾದಿ ತೋರಿಸಿತು. ಶನಿವಾರ ಹಡಿನ್ ಕ್ಯಾಚ್ ಕೈ ಚೆಲ್ಲಿದ್ದರು. ಮೂರನೆ ದಿನದ ಆಟದ ಆರಂಭದಲ್ಲಿ ಒದಗಿಬಂದ ಈ ಅವಕಾಶವನ್ನು ಹಡಿನ್ ಕೈ ಬಿಡಲಿಲ್ಲ. ಪೂಜಾರ ಶನಿವಾರದ ಮೊತ್ತಕ್ಕೆ ನಿರ್ಗಮಿಸಿದರು.

ಮುರಳಿ ವಿಜಯ್ 68 ರನ್ ಗಳಿಸಿ ವ್ಯಾಟ್ಸನ್ ಎಸೆತದಲ್ಲಿ ಮಾರ್ಷ್‌ಗೆ ಕ್ಯಾಚ್ ನೀಡಿದರು. ವಿಜಯ್ 63 ರನ್ ಗಳಿಸಿದ್ದಾಗ ಅವರ ಹೆಲ್ಮೆಟ್‌ಗೆ ಜಾನ್ಸನ್ ಎಸೆದ ಬೌನ್ಸರ್ ಬಡಿದಿತ್ತು. ಆದರೆ ವಿಜಯ್ ಅಪಾಯದಿಂದ ಪಾರಾಗಿದ್ದರು.

ಕೊಹ್ಲಿ -ರಹಾನೆ ಆಟ: ರಹಾನೆ ಕ್ರೀಸ್‌ಗೆ ಆಗಮಿಸಿದಾಗ ಭಾರತದ ಸ್ಕೋರ್ 49.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 147 ಆಗಿತ್ತು. ತಂಡದ ಬ್ಯಾಟಿಂಗನ್ನು ಮುನ್ನಡೆಸಿದ ಈ ಜೋಡಿ ಸ್ಕೋರನ್ನು 409ಕ್ಕೆ ತಲುಪಿಸಿತು. ಭೋಜನ ವಿರಾಮದ ವೇಳೆಗೆ ಭಾರತ 66 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 224 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 66 ರನ್ ಮತ್ತು ರಹಾನೆ 43 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ರಹಾನೆಯ 3ನೆ ಶತಕ: ಕೊಹ್ಲಿ ಮತ್ತು ರಹಾನೆ ಬ್ಯಾಟಿಂಗ್ ಮುಂದುವರಿಸಿ ಆಸ್ಟ್ರೇಲಿಯದ ಬೌಲರ್‌ಗಳ ಬೆವರಿಳಿಸಿದರು. 89.4ನೆ ಓವರ್‌ನಲ್ಲಿ ರಹಾನೆ ವ್ಯಾಟ್ಸನ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ತನ್ನ ಮೂರನೆ ಶತಕ ದಾಖಲಿಸಿದರು. 13ನೆ ಟೆಸ್ಟ್ ಆಡುತ್ತಿರುವ ರಹಾನೆ 127 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ಶತಕ ತಲುಪಿದರು. ಇದು 2014ರಲ್ಲಿ ದಾಖಲಾದ ಅವರ 3ನೆ ಶತಕ. ಸರಣಿಯಲ್ಲಿ ಕೊಹ್ಲಿಯ 3ನೆ ಶತಕ: ವಿರಾಟ್ ಕೊಹ್ಲಿ 93.1ನೆ ಓವರ್‌ನಲ್ಲಿ ಲಿನ್ ಎಸೆತದಲ್ಲಿ ಬೌಂಡರಿ ಬಾರಿಸಿ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ 3ನೆ ಶತಕ ದಾಖಲಿಸಿದರು. 166 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಲ್ಲಿ ಕೊಹ್ಲಿ ಶತಕ ಮುಟ್ಟಿದರು. 32ನೆ ಟೆಸ್ಟ್‌ನಲ್ಲಿ ಕೊಹ್ಲಿ ತನ್ನ ಶತಕದ ಸಂಖ್ಯೆಯನ್ನು 9ಕ್ಕೆ ಏರಿಸಿದರು.

ರಹಾನೆ ನಿರ್ಗಮನದ ಬಳಿಕ ತಂಡ ಒತ್ತಡಕ್ಕೆ ಸಿಲುಕಿತು. ಚೊಚ್ಚಲ ಟೆಸ್ಟ್ ಆಡುತ್ತಿರುವ ಲೋಕೇಶ್ ರಾಹುಲ್ 8 ಎಸೆತಗಳಲ್ಲಿ 3 ರನ್ ಕಾಣಿಕೆ ನೀಡಿ ವಾಪಸಾದರು. ನಾಯಕ ಧೋನಿ (11) ಮತ್ತು ರವಿಚಂದ್ರನ್ ಅಶ್ವಿನ್(0) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಎಂಟನೆ ವಿಕೆಟ್‌ಗೆ ಕೊಹ್ಲಿ ಮತ್ತು ಮುಹಮ್ಮದ್ ಶಮಿ 8 ಓವರ್‌ಗಳಲ್ಲಿ 28 ರನ್ ಸೇರಿಸಿದರು.

ಆಸ್ಟ್ರೇಲಿಯದ ಬೌಲರ್‌ಗಳಾದ ಹ್ಯಾರಿಸ್ 69ಕ್ಕೆ 4, ನಥನ್ ಲಿನ್ 108ಕ್ಕೆ 2, ಜಾನ್ಸನ್ 133ಕ್ಕೆ 1, ವ್ಯಾಟ್ಸನ್ 65ಕ್ಕೆ 1 ವಿಕೆಟ್ ಹಂಚಿಕೊಂಡರು.

Write A Comment