ಬೆಳಗಾವಿ: 64 ವರ್ಷದ ಕಾಲೇಜು ಪ್ರಾಂಶುಪಾಲರೊಬ್ಬರು ತಮ್ಮ ವಿದ್ಯಾರ್ಥಿಯೊಂದಿಗೆ ಸಲಿಂಗ ಕಾಮ ನಡೆಸಿದ್ದು, ಇದನ್ನು ಉಪಯೋಗಿಸಿಕೊಂಡ ಆತ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸ್ನೇಹಿತರ ನೆರವಿನಿಂದ ಅದನ್ನು ಚಿತ್ರೀಕರಿಸಿಕೊಂಡು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿದೆ.
ಬೆಳಗಾವಿಯ ಅಂಜುಮಾನ್ ಕಾಲೇಜಿನ ಪ್ರಾಂಶುಪಾಲ ಅಶೋಕ ಶಿವಲಿಂಗಪ್ಪ ಬೈಲವಾಡ ಎಂಬವರು ತಮ್ಮ ವಿದ್ಯಾರ್ಥಿ 22 ವರ್ಷದ ರಮೇಶ ನಾಮದೇವ ಲಮಾಣಿ ಜೊತೆ ಅನೈಸರ್ಗಿಕ ಲೈಂಗಿಕ ಸಂಬಂಧ ಹೊಂದಿದ್ದು, ಈಗ ಆತನ ವಿರುದ್ದ ಬ್ಲಾಕ್ ಮೇಲ್ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಪ್ರಾಂಶುಪಾಲರನ್ನೇ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರಲ್ಲದೇ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದ ರಮೇಶ ಮತ್ತವನ ನಾಲ್ವರು ಗೆಳೆಯರನ್ನೂ ಬಂಧಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಈ ಮೊದಲು ಸಿದ್ದರಾಮೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅಶೋಕ ಶಿವಲಿಂಗಪ್ಪ ಬೈಲವಾಡ, ಪಿಯುಸಿ ವಿದ್ಯಾರ್ಥಿಯಾಗಿದ್ದ ರಮೇಶ ನಾಮದೇವ ಲಮಾಣಿಯ ಬಡತನದ ಹಿನ್ನಲೆಯನ್ನು ಉಪಯೋಗಿಸಿಕೊಂಡು ಆತನಿಗೆ ಆರ್ಥಿಕ ಸಹಾಯ ನೀಡುವ ನೆಪದಲ್ಲಿ ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದರು. ಈ ವೇಳೆ ಆತನಿಗೆ 10 ಸಾವಿರ ರೂ. ಹಣವನ್ನು ಸಾಲವಾಗಿ ನೀಡಿದ್ದ ಅಶೋಕ ಬೈಲವಾಡ, ಇದಕ್ಕೆ ಗ್ಯಾರಂಟಿಯಾಗಿ ಆತನಿಂದ ಖಾಲಿ ಚೆಕ್ ಪಡೆದಿದ್ದರು.
ಅಂಜುಮನ್ ಕಾಲೇಜಿನ ಪ್ರಾಂಶುಪಾಲರಾದ ನಂತರ ಅಶೋಕ ಬೈಲವಾಡ ತಮ್ಮ ಸಲಿಂಗ ಕಾಮಿ ಗೆಳೆಯ ರಮೇಶನಿಗೆ ಹಣ ಹಿಂದಿರುಗಿಸುವಂತೆ ಬೆನ್ನು ಬಿದ್ದಿದ್ದರು. ಹಣ ನೀಡದಿದ್ದರೆ ಚೆಕ್ ಬ್ಯಾಂಕಿಗೆ ಹಾಕುವುದಾಗಿಯೂ ಬೆದರಿಸಿದ್ದರು. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಈ ರೀತಿ ಬೆದರಿಕೆ ಹಾಕುತ್ತಿರುವ ಅಶೋಕ ಬೈಲವಾಡ ನಡೆಯಿಂದ ಕೆರಳಿದ ರಮೇಶ ಅವರಿಗೆ ಬುದ್ದಿ ಕಲಿಸುವ ಸಲುವಾಗಿ ತನ್ನ ನಾಲ್ವರು ಸ್ನೇಹಿತರಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದ.
ಇವರೆಲ್ಲರೂ ಕೂಡಿ ಉಪಾಯವೊಂದನ್ನು ಹೂಡಿದ್ದು ಅದರಂತೆ ಡಿಸೆಂಬರ್ 6 ರಂದು ಪ್ರಾಂಶುಪಾಲರನ್ನು ಮಹಾರಾಷ್ಟ್ರದ ವೈಜನಾಥ ಪುರ ದೇವಾಲಯದ ಬಳಿ ರಮೇಶ ಕರೆದೊಯ್ದಿದ್ದು ಅಲ್ಲಿ ಅವರಿಬ್ಬರು ಸಲಿಂಗ ಕಾಮದಲ್ಲಿ ತೊಡಗಿದ್ದ ವೇಳೆ ಇದೆಲ್ಲ ದೃಶ್ಯವನ್ನು ರಮೇಶನ ಗೆಳೆಯರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಪ್ರಾಂಶುಪಾಲರಿಗೆ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಇವರುಗಳ ವಿರುದ್ದ ಬ್ಲಾಕ್ ಮೇಲ್ ದೂರು ನೀಡಲು ಹೋಗಿದ್ದ ಪ್ರಾಂಶುಪಾಲರೇ ಈಗ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಜೊತೆಗೆ ಇವರನ್ನು ಬ್ಲಾಕ್ ಮೇಲ್ ಮಾಡಿದ್ದ ರಮೇಶ ಮತ್ತವನ ಗೆಳೆಯರನ್ನೂ ಬಂಧನಕ್ಕೊಳಪಡಿಸಲಾಗಿದೆ.