ಮನೋರಂಜನೆ

ದಿಲೀಪ್ ಕುಮಾರ್ ಮೊಮ್ಮಗಳು ಬಾಲಿವುಡ್‌ಗೆ

Pinterest LinkedIn Tumblr

sayesha

ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಹಾಗೂ ಸಾಯಿರಾ ಬಾನು ಅವರ ಮೊಮ್ಮಗಳು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಲಾವಿದರರಾದ ಸುಮೀತ್ ಸೈಗಲ್ ಹಾಗೂ ಶಹೀನ್ ದಂಪತಿ ಪುತ್ರಿಯಾದ ಸಯೇಶಾ ಇದೀಗ ಬಣ್ಣ ಹಚ್ಚಲಿರುವ ಯುವನಟಿ. ಈಗಾಗಲೇ ಎರಡು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಲು ಸಹಿ ಹಾಕಿದ 18ರ ಹರೆಯದ ಸಯೇಶಾ ಆರಂಭದಲ್ಲೇ ಭಾರಿ ಸುದ್ದಿ ಮಾಡಲು ಹೊರಟಿದ್ದಾರೆ.

ಲ್ಯಾಟಿನೋ ಹಾಗೂ ಕಥಕ್ ಡ್ಯಾನ್ಸ್‌ನಲ್ಲಿ ಪರಿಣಿತರಾಗಿರುವುದರಿಂದ ಸಯೇಶಾಗೆ ಚಿತ್ರರಂಗಕ್ಕೆ ಕಾಲಿಡಲು ಹೆಚ್ಚು ಕಷ್ಟವಾಗಲಿಲ್ಲ. ಶ್ರೇಷ್ಠ ಡ್ಯಾನ್ಸರ್ ಆಗಿರುವುದು ಸಯೇಶಾಗೆ ಪ್ಲಸ್ ಪಾಯಿಂಟ್ ಆಯಿತು.

ಎರಡು ಪ್ರಾಜೆಕ್ಟ್:
ವಿಶೇಷವೆಂದರೆ ಆರಂಭದಲ್ಲೇ ಎರಡು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ ಈ ಸಯೇಶಾ. ಮೊದಲಿಗೆ ಅಜಯ್ ದೇವಗನ್ ಲೀಡ್ ರೋಲ್‌ನಲ್ಲಿರುವ ‘ಶಿವಾಯ್’ ಚಿತ್ರಕ್ಕೆ ಸಹಿ ಹಾಕಿದ್ದರೆ, ಇದೀಗ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಪ್ರಧಾನ ಭೂಮಿಕೆಯಲ್ಲಿರುವ ಏಕ್ತಾ ಕಪೂರ್ ನಿರ್ಮಾಣದ, ರೆಮೋ ಡಿಸೋಜ ನಿರ್ದೇಶನದ ಇನ್ನೂ ಹೆಸರಿಡದ 3ಡಿ ಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ರೆಮೋ ಡಿಸೋಜ ನಿರ್ದೇಶನ ಎಂದ ಮೇಲೆ ಅಲ್ಲಿ ಡ್ಯಾನ್ಸ್‌ಗೆ ಪ್ರಾಧಾನ್ಯತೆ ಇದ್ದೇ ಇರುತ್ತದೆ. ಹೀಗಾಗಿ ರೆಮೋ ಡಿಸೋಜ ಕೂಡ ಡ್ಯಾನ್ಸರ್ ಕಂ ನಟಿ ಹಾಗೂ ನಟನನ್ನೇ ಚಿತ್ರಕ್ಕೆ ಹುಡುಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಶ್ರೇಷ್ಠ ಡ್ಯಾನ್ಸರ್ ಆಗಿರುವ ಟೈಗರ್ ಶ್ರಾಫ್ ಅವರನ್ನು ನಟನಾಗಿ ಆಯ್ಕೆ ಮಾಡಿದರೆ, ವೃತ್ತಿಪರ ಡ್ಯಾನ್ಸರ್ ಆಗಿರುವುದು ಸಯೇಶಾಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು.

ಡೇಟ್ ಕ್ಲ್ಯಾಶ್:
ಎರಡೂ ಪ್ರಾಜೆಕ್ಟ್‌ಗಳಿಗೆ ಒಪ್ಪಿದ್ದರಿಂದ ಈಗ ಶೂಟಿಂಗ್ ಡೇಟ್ ಕ್ಲ್ಯಾಶ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ‘ಶಿವಾಯ್’ ಚಿತ್ರದ ಚಿತ್ರೀಕರಣ ಮಾಡಲು ಸಯೇಶಾ ನಿರ್ಧರಿಸಿದ್ದಾರೆ. ‘ಶಿವಾಯ್’ ಚಿತ್ರದ ಶೂಟಿಂಗ್ ಕೆನಡಾ, ಪೊಲಂಡ್‌ಗಳಲ್ಲಿ ನಡೆಯಲಿರುವುದರಿಂದ 2015ರ ಮೊದಲರ್ಧ ಭಾಗ ವಿದೇಶದಲ್ಲೇ ಕಳೆಯಬೇಕಾಗಬಹುದು. ಆ ಬಳಿಕವಷ್ಟೇ ತನ್ನ ಎರಡನೇ ಪ್ರಾಜೆಕ್ಟ್‌ನತ್ತ ದೃಷ್ಟಿ ಹರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಎರಡೂ ಪ್ರಾಜೆಕ್ಟ್‌ಗಳನ್ನು ಜತೆಜತೆಯಾಗಿ ಚಿತ್ರೀಕರಿಸುವ ಪ್ಲ್ಯಾನ್ ಕೂಡ ಇದೆ. ಒಟ್ಟಾರೆ ಹಿರಿಯ ನಟ ದಿಲೀಪ್ ಮನೆತನದ ಕುಡಿಯೊಂದು ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿಯೆ.
(* ಮಹೇಶ್ ಪಟ್ಟಾಜೆ)

Write A Comment