ಕನ್ನಡ ವಾರ್ತೆಗಳು

ಡಿ.21ರಂದು ‘ರಾಣಿ ಅಬ್ಬಕ್ಕ ರಂಗದರ್ಶಿನಿ’ ವಿಶೇಷ ಕಾರ್ಯಕ್ರಮ

Pinterest LinkedIn Tumblr

rani_abbakka_photo

ಮಂಗಳೂರು, ಡಿ.16: ಪ್ರಸಕ್ತ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಡಿ.21 ರಂದು ಕಯ್ಯರ ನಮನ, ಅಮೃತಾಭಿನಂದನ ಹಾಗೂ ಸಿಡಿ ಅನಾವರಣಗಳ ‘ರಾಣಿ ಅಬ್ಬಕ್ಕ ರಂಗದರ್ಶಿನಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ, ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಬ್ಬಕ್ಕನ ಚರಿತ್ರೆಗೆ ಸಂಬಂಧಿಸಿ ಯಕ್ಷಗಾನ, ನಾಟಕ, ನೃತ್ಯರೂಪಕ ಪ್ರಕಾರಗಳಲ್ಲಿ ಹೊರತಂದ ತ್ರಿವಳಿ ದೃಶ್ಯ ಕರಂಡಿಕೆಗಳ ಅನಾವರಣ ಹಾಗೂ ಅಮೃತಾಭಿನಂದನ ಕಾರ್ಯಕ್ರಮ ಅಂದು ಮಧ್ಯಾಹ್ನ 1 ಗಂಟೆಗೆ ತೊಕ್ಕೊಟ್ಟು ಕಾಪಿಕಾಡ್‌ನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಕಯ್ಯಿರ ನಮನ ಕಾರ್ಯಕ್ರಮ ಅಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡಿನ ಪೆರಡಾಲದ ಕವಿತಾ ಕುಟೀರದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಖಾದರ್ ವಿವರಿಸಿದರು.

ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಥಾ ಸಂಯೋಜನೆ ಮಾಡಿರುವ ‘ಉಳ್ಳಾಲದ ರಾಣಿ ಅಬ್ಬಕ್ಕ’ ಎಂಬ ಯಕ್ಷಗಾನ ಪ್ರಸಂಗಕ್ಕೆ ಡಾ.ದಿನಕರ ಎಸ್.ಪಚ್ಚನಾಡಿ ಮತ್ತು ಪುತ್ತೂರು ದೇವರಾಜ ಹೆಗ್ಡೆ ಹಾಡುಗಳನ್ನು ರಚಿಸಿದ್ದಾರೆ. ಹವ್ಯಾಸಿ ಬಳಗ ಕದ್ರಿ ಪ್ರಸ್ತುತ ಪಡಿಸಿರುವ ಈ ಯಕ್ಷಗಾನ ಸಿಡಿಯಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ. ಪ್ರಸಿದ್ಧ ನಾಟಕಕಾರ ದಿ.ಬಿ.ರಾಮ ಕಿರೋಡಿ ಯನ್‌ರ ‘ತುಳುನಾಡ ತುಡರ್ ಉಳ್ಳಾಲೊದ ಅಬ್ಬಕ್ಕ’ ತುಳು ನಾಟಕವನ್ನು ಮಂಜುನಾಥ ಕಲಾ ಸಂಪದವು ಸಿಡಿಗೆ ಅಳವಡಿಸಿದೆ. ನಿರಂಜನ ಕೆ. ಸಾಲ್ಯಾನ್ ನಿರ್ದೇಶನ ನೀಡಿದ್ದಾರೆ. ಪ್ರಶಾಂತ್ ಜೈನ್ ಬೆಳುವಾಯಿ ಅವರ ಸಂಯೋಜನೆಯಲ್ಲಿ ತುಳುರಂಗ ಭೂಮಿಯ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.

ಹಿರಿಯ ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ವಿರಚಿತ ‘ವೀರರಾಣಿ ಅಬ್ಬಕ್ಕ’ ಕನ್ನಡ ನೃತ್ಯ ರೂಪಕವನ್ನು ನಾಟ್ಯ ನಿಕೇತನ ಕೋಟೆಕಾರ್ ದೃಶ್ಯ ಕರಂಡಿಕೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ವಿದುಷಿ ರಾಜಶ್ರೀ ಉಳ್ಳಾಲ ನೃತ್ಯ ನಿರ್ದೇಶಿಸಿ, ಅಬ್ಬಕ್ಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಗುತ್ತಿಗೆ ವೈದ್ಯರ ಗೊಂದಲ ನಿವಾರಣೆಗೆ ಕ್ರಮ

ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಎದುರಿಸುತ್ತಿದ್ದ ಅಭದ್ರತೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ವೈದ್ಯರ ವೇತನವನ್ನು 28,000 ರೂ.ಗಳಿಗೆ ಪ್ರಸ್ತುತ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮುಂದೆ ವೈದ್ಯರ ವೇತನ ಪರಿಷ್ಕರಣೆ ಸಂದರ್ಭ ಗುತ್ತಿಗೆ ವೈದ್ಯರ ವೇತನವನ್ನು 45,000 ರೂ.ಗಳಿಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದ್ದು, ಈ ಕುರಿತಾದ ಕಡತ ಸದ್ಯ ಹಣಕಾಸು ಸಮಿತಿ ಹಂತದಲ್ಲಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ವೈದ್ಯರ 3ವರ್ಷಗಳ ಸೇವೆಯ ಬಳಿಕ ಅವರನ್ನು ಇಲಾಖೆಯಲ್ಲಿ ಖಾಯಂಗೊಳಿಸಲಾಗುವುದು. ಹಾಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ವೈದ್ಯ ರಿಗೆ ಆಹ್ವಾನ ನೀಡುತ್ತಿರುವುದಾಗಿ ಅವರು ಹೇಳಿದರು.

ಇದೇ ವೇಳೆ ಇಲಾಖೆಯ ಎಂಬಿಬಿಎಸ್ ವೈದ್ಯರ ವೇತನವನ್ನು 52,000 ರೂ.ಗಳಿಂದ 70,000 ರೂ.ಗಳಿಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಎಆರ್‌ಎಚ್‌ಎಂನಡಿ ಗುತ್ತಿಗೆ ಆಧಾರದ ವೈದ್ಯರಿಗೆ ವೇತನವನ್ನು 28,000 ರೂ.ಗಳಿಂದ 45 ಸಾವಿರ ರೂ.ಗಳಿಗೆ ಏರಿಕೆ ಮಾಡಲು ರಾಜ್ಯದಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಈ ಯೋಜನೆಯಡಿ ನಿಗದಿಪಡಿಸಲಾ ಗುವ ವೇತನವನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಖಾದರ್ ನುಡಿದರು.

ಎತ್ತಿನಹೊಳೆ ಯೋಜನೆ: ದ.ಕ.ದಲ್ಲಿ ಜನವರಿಯೊಳಗೆ ಸಭೆ:  ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಯೋಜನೆಯ ಸಾಧಕ ಬಾಧಕಗಳ ಕುರಿತಂತೆ ಜನವರಿಯೊಳಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಸಭೆಯ ದಿನಾಂಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿಗದಿಪಡಿ ಸಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳ ನಿಲುವಿನ ಕುರಿತಂತೆ ಸುದ್ದಿಗಾರರ ತೀಕ್ಷ್ಣವಾದ ಪ್ರಶ್ನೆಗಳಿಗೆ ಸಚಿವರು ಈ ಭರವಸೆ ನೀಡಿದ್ದಾರೆ.

ಕೋಲಾರದ ಉಸ್ತುವಾರಿ ಸಚಿವನಾಗಿ ಈಗಾಗಲೇ ಅಲ್ಲಿ ನೀಡಿರುವ ಭರವಸೆ ಯಂತೆ ಆ ಜಿಲ್ಲೆಯಲ್ಲಿ ಕೆರೆಗಳ ಅತಿಕ್ರಮಣವನ್ನು ತೆರವುಗೊಳಿಸಿ ಪುನರುಜ್ಜೀವನ ಗೊಳಿಸುವ ಕೆಲಸ ಆಗುತ್ತಿದೆ ಎಂದವರು ಹೇಳಿದರು.

Write A Comment