ಕರ್ನಾಟಕ

ಟ್ವಿಟರ್‌ ಸಂವಾದದಲ್ಲಿ ಪ್ರಶ್ನೆಗಳ ಸರಮಾಲೆ: ಪ್ರೇಕ್ಷಕರ ಪ್ರಶ್ನೆಗಳಿಂದ ಇಕ್ಕಟ್ಟಿಗೆ ಸಿಲುಕಿದ ಸುರೇಶ್‌ ಕುಮಾರ‍್, ಸಿ.ಟಿ.ರವಿ

Pinterest LinkedIn Tumblr

pvec08dec14hTWITTER-02

ಬೆಂಗಳೂರು: ಬಿಜೆಪಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಘಟಕ­ಗಳು ಆಯೋಜಿಸಿದ್ದ ‘ಟ್ವಿಟರ್‌ ಸಭೆ’ ಸಂವಾದ ಕಾರ್ಯಕ್ರಮ­ದಲ್ಲಿ ಪ್ರೇಕ್ಷಕರು ಕೇಳಿದ ಪ್ರಶ್ನೆಗಳಿಂದ ಶಾಸಕರಾದ ಸುರೇಶ್ ಕುಮಾರ್‌ ಮತ್ತು ಸಿ.ಟಿ. ರವಿ ಇಕ್ಕಟ್ಟಿಗೆ ಸಿಲುಕಿದರು. ಸಭಿಕರ ಮೊನಚು ಪ್ರಶ್ನೆಗಳಿಂದ ಪೇಚಿಗೆ ಸಿಲುಕಿದ ಶಾಸಕರು ನೇರವಾಗಿ ಉತ್ತರ ನೀಡದೆ ಜಾರಿಕೊಂಡರು.

300ಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಪರ ಒಲವಿರುವ  ಯುವ ಸಮೂಹದಲ್ಲಿ ಕೆಲವರು ಪಕ್ಷದ ಸಚಿವರ ಮತ್ತು ಮುಖಂಡರ ನಡೆಯನ್ನೇ ಪ್ರಶ್ನಿಸಿದರು. ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಕುಲಾಂತರಿ ತಳಿಗಳ ಪರವಾಗಿ ಮಾತನಾಡಿರುವುದು ಮತ್ತು ಕೇಂದ್ರ ಸರ್ಕಾರವು ನದಿಗಳ ಜೋಡಣೆಗೆ ಮುಂದಾಗಿರುವುದಕ್ಕೆ ಪ್ರಮೋದ್‌ ಎಂಬುವವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಎರಡೂ ಯೋಜನೆಗಳು ದೇಶದ ಪಾಲಿಗೆ ಅಪಾಯಕಾರಿ ಎಂದು ವಾದಿಸಿದರು.

ಪ್ರಮೋದ್‌ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌, ‘ನಿಮ್ಮ ಕಾಳಜಿ ನಮಗೆ ಅರ್ಥ ಆಗುತ್ತದೆ.   ನಿಮ್ಮ ಅನಿಸಿಕೆಯನ್ನು ಕೇಂದ್ರದ ನಾಯಕರ ಮುಂದೆ ಇಡುತ್ತೇವೆ’ ಎಂದಷ್ಟೇ ಹೇಳಿದರು. ಆನಂದ ವಾಜಪೇಯಿ ಎಂಬ ಹಿರಿಯರು, ‘ನಾನು ಟ್ವಿಟರ್‌ ಸೇರಿದಂತೆ, ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿದ್ದೇನೆ. ಆದರೆ, ಯಾವುದಾ­ದರೂ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ ಅಥವಾ ಪರಿಹಾರಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಲಹೆ ನೀಡಿದರೆ ಪಕ್ಷದ ಮುಖಂಡ­ರಾಗಲೀ, ಸಚಿವ­ರಾಗಲೀ ಪ್ರತಿಕ್ರಿಸುತ್ತಿಲ್ಲ’ ಎಂದು ದೂರಿದರು.

‘ದ್ವಿಮುಖ ಸಂವಹನ ಇದ್ದರಷ್ಟೇ ಸಾಮಾಜಿಕ ಮಾಧ್ಯಮಗಳಿಗೆ ಅರ್ಥ­ವಿರುತ್ತದೆ. ಪ್ರತಿಕ್ರಿಯೆ ನೀಡ­ದಿರುವುದು ತಪ್ಪು. ಅವರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿ ಆನಂದ ವಾಜಪೇಯಿ ಅವರನ್ನು ಸಮಾಧಾನ ಮಾಡಲು ಸುರೇಶ್‌ ಕುಮಾರ್‌ ಯತ್ನಿಸಿದರು.

ಈ ಹಿಂದೆ ತಮ್ಮ ವಿರುದ್ಧವೇ ಪ್ರಚಾರ ಮಾಡಿದ ಮಾಧ್ಯಮಗಳನ್ನು ಓಲೈಸಲು  ಕೇಂದ್ರ ಸಚಿವರು, ಬಿಜೆಪಿ ಮುಖಂಡರು ಈಗ ಯತ್ನಿಸುತ್ತಿದ್ದಾರಲ್ಲಾ ಎಂದು ಮತ್ತೊಬ್ಬ ಸಭಿಕರು ಕೇಳಿದ ಪ್ರಶ್ನೆಗೆ, ಆ ರೀತಿ ಆಗಬಾರದು. ಈ  ವಿಚಾರವನ್ನು  ಸ್ಥಾಯಿ ಸಮಿತಿ ಮುಂದೆ ಪ್ರಸ್ತಾಪಿಸ­ಲಾಗುವುದು’ ಎಂದು  ಸುರೇಶ್‌ ಕುಮಾರ್‌ ಹೇಳಿದರು.

ಕಾಂಗ್ರೆಸ್‌ ಮುಕ್ತ ರಾಜ್ಯಕ್ಕೆ ಕರೆ:  ಇದಕ್ಕೂ ಮೊದಲು ಮಾತನಾಡಿದ ಸುರೇಶ್ ಕುಮಾರ್‌, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರುಸಮೇತ ಕಿತ್ತುಹಾಕಲು ಟ್ವಿಟರ್‌, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮ­ಗಳನ್ನು ಪರಿಣಾಮಕಾರಿ­-ಯಾಗಿ ಬಳಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ಹುಮ್ಮಸ್ಸು, ಲವಲವಿಕೆಯಿಂದ ಕೂಡಿರದ ರಾಜ್ಯ ಸರ್ಕಾರದ ದೌರ್ಬಲ್ಯ­ಗಳನ್ನು ಸಾಮಾಜಿಕ ಜಾಲತಾಣ­ಗಳ ಮೂಲಕ ಜನರ ಮುಂದಿಟ್ಟು ಚರ್ಚೆ ನಡೆಯು­ವಂತೆ ಮಾಡಬೇಕು. ಆ ಮೂಲಕ, ಕಾಂಗ್ರೆಸ್‌ ಸಂಸ್ಕೃತಿಗೆ ಇತಿಶ್ರೀ ಹಾಡಿ ರಾಜ್ಯದಲ್ಲಿ ಉತ್ತಮ ಆಡಳಿತ ಸ್ಥಾಪನೆಗೆ ಮುನ್ನುಡಿ ಬರೆಯಬೇಕು’ ಎಂದು ಹೇಳಿದರು. ‘ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿ 190 ದಿನಗಳಾಗಿವೆ.

ಅವರು ಏನು ಮಾಡಿದ್ದಾರೆ? ಎಂದು ಕೆಲವರು ಕೇಳುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಅವರು ಆತ್ಮವಿಶ್ವಾಸ ಮೂಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಈ ತಾಣಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಆಗಬೇಕು’ ಎಂದರು.

ವೆಬ್‌ಸೈಟ್‌ಗೆ ಚಾಲನೆ: ಶಾಸಕ ಮತ್ತು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವೆಬ್‌ಸೈಟ್‌ಗೆ (www.ctravi.in) ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

Write A Comment