ಕರ್ನಾಟಕ

ಮಾಯಾಜಾಲ ನಡೆಯಲಿಲ್ಲ; ಕಸಮುಕ್ತ ಆಗಲಿಲ್ಲ!

Pinterest LinkedIn Tumblr

Untitled-1

 

ಬೆಂಗಳೂರು:  ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಕಸಮುಕ್ತ ವಾರ್ಡ್‌’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ (2013ರ ಜುಲೈ 24) ಇದೀಗ ಭರ್ತಿ 14 ತಿಂಗಳು. ಆದರೆ, ಈ ಯೋಜನೆಗೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾದ 22 ವಾರ್ಡ್‌ಗಳು ಮೊದಲು ಹೇಗಿದ್ದವೋ ಈಗಲೂ ಹಾಗೇ ಇವೆ.

ಅದೇ ಕಸಭರಿತ ವಾತಾವರಣ, ಮಿಶ್ರ ತ್ಯಾಜ್ಯದ ವಿಲೇವಾರಿ, ಹೂಳು ತುಂಬಿದ ಚರಂಡಿ ಎಲ್ಲವೂ ಹಾಗೇ ಇದ್ದು, 22 ವಾರ್ಡ್‌ಗಳಲ್ಲಿ ಇದುವರೆಗೆ ಒಂದೇ ಒಂದು ‘ಕಸಮುಕ್ತ’ ಪ್ರದೇಶವೂ ರೂಪುಗೊಂಡಿಲ್ಲ. ನಾಗರಿಕರ ದೂರು–ದುಮ್ಮಾನಗಳಿಗೆ ಕೂಡ ಕೊನೆ ಬಿದ್ದಿಲ್ಲ.
ಯೋಜನೆಯನ್ನು ಜಾರಿಗೊಳಿಸುವಾಗ ಡಿ. ವೆಂಕಟೇಶಮೂರ್ತಿ ಮೇಯರ್‌ ಆಗಿದ್ದರು.

ಅವರ ಬಳಿಕ ಬಿ.ಎಸ್‌. ಸತ್ಯನಾರಾಯಣ ಅಧಿಕಾರ ಪೂರ್ಣಗೊಳಿಸಿ ಈಗ ಎನ್‌. ಶಾಂತಕುಮಾರಿ ಅವರು ಮೇಯರ್‌ ಆಗಿದ್ದೊಂದೇ ಈ ಅವಧಿಯಲ್ಲಿ ಆಗಿರುವ ಬದಲಾವಣೆ. ಕಸಮುಕ್ತ ವಾರ್ಡ್‌ ನಿರ್ಮಾಣಕ್ಕಾಗಿ ತರಬೇತಿ ಹೊಂದಿದ 250 ಪೌರ ಕಾರ್ಮಿಕರ ಪ್ರತ್ಯೇಕ ಪಡೆಯನ್ನೇ ಸಿದ್ಧಪಡಿಸಲಾಗಿದ್ದು, ಗುತ್ತಿಗೆದಾರರು ಸಹ ಯೋಜನೆ ಯಶಸ್ಸಿಗೆ ಬದ್ಧತೆಯಿಂದ ಶ್ರಮಿಸಲಿದ್ದಾರೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮದಲ್ಲಿ ಹೇಳಿದ್ದರು.

ಅಣುಕು ಕಾರ್ಯಾಚರಣೆ ತೋರಿಸಿದ್ದ ಪೌರಕಾರ್ಮಿಕರು, ಆ ಬೃಹತ್‌ ಕಾರ್ಯಕ್ರಮದಲ್ಲಿ ನೆರೆದವರಿಗೆ
ಇನ್ನುಮುಂದೆ ನಗರದ ಬೀದಿಯಲ್ಲಿ ಏನೋ ‘ಮಾಯಾಜಾಲ’ ನಡೆಯಲಿದೆ ಎಂಬ ಭರವಸೆ ಮೂಡಿಸಿದ್ದರು.
‘ಮೂರನೇ ಸಂಸ್ಥೆಯಿಂದ ಸ್ವಚ್ಛತಾ ಸ್ಥಿತಿ ಪರಿಶೀಲನೆ, ಬಿಬಿಎಂಪಿ ಮೇಲೆ ಬಿದ್ದಿರುವ ಕಾನೂನು ಪಾಲನೆ ಹೊಣೆ ಹಾಗೂ ಗುತ್ತಿಗೆದಾರರ ಬದ್ಧತೆ – ಇವುಗಳಿಂದ ಯೋಜನೆ ಯಶಸ್ವಿಯಾಗಲಿದೆ’ ಎಂದು ಆಯುಕ್ತರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

‘ಬಿಬಿಎಂಪಿಗೆ ತನ್ನ ಮೇಲಿರುವ ಕಾನೂನಿನ ಹೊಣೆಯೇ ಮರೆತು ಹೋಗಿದೆ. ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿಯಲ್ಲಿ ಬದ್ಧತೆ ಪ್ರದರ್ಶಿಸುತ್ತಾರೆ ಎನ್ನುವುದು ಕನಸಿನ ಮಾತು. ಹೀಗಾಗಿ ಕಸ ಹಿಂದೆ ಇದ್ದಂತೆಯೇ ಇದೆ’ ಎಂದು ಹೇಳುತ್ತಾರೆ, ರಾಜಮಹಲ್‌ ಗುಟ್ಟಹಳ್ಳಿ ನಿವಾಸಿ ಮಧುಸೂದನ ರಾವ್‌. ಯೋಜನೆಗೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾದ ಪ್ರದೇಶಗಳಲ್ಲಿ ಅವರ ವಾರ್ಡ್‌ ಸಹ ಸೇರಿದೆ.

ಮೂಲದಲ್ಲೇ ಕಸವನ್ನು ಬೇರ್ಪಡಿಸುವುದು ಯೋಜನೆ ಮುಂದಿದ್ದ ಮುಖ್ಯ ಗುರಿಯಾಗಿತ್ತು. ಅದರ ಪ್ರಕಾರ, ಹಸಿ ಕಸವನ್ನು ಪ್ರತಿದಿನ ಸಂಗ್ರಹಿಸಿ, ಅದನ್ನು ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮ (ಕೆಸಿಡಿಸಿ) ಘಟಕಕ್ಕೆ ಕಳುಹಿಸುವ ಜತೆಗೆ, ವಾರಕ್ಕೆ ಎರಡು ದಿನ ಒಣಕಸ ಸಂಗ್ರಹಿಸಿ, ಅದನ್ನು ಮರುಬಳಕೆಗೆ ಕಳುಹಿಸಬೇಕಿತ್ತು. ಹೀಗಾಗಿ ‘ಒಂದು ಮನೆ, ಎರಡು ಡಬ್ಬಿ, ಮಿಶ್ರ ಮಾಡಬೇಡ’ ಎಂಬ ಜಾಗೃತಿ ಆಂದೋಲನವನ್ನೂ ನಡೆಸಲಾಗಿತ್ತು. ಆದರೆ, ಎಲ್ಲ ವಾರ್ಡ್‌ಗಳಲ್ಲಿ ಈಗಲೂ ಮನೆ–ಮನೆಗಳಿಂದ ಮಿಶ್ರ ಕಸವನ್ನೇ ಸಂಗ್ರಹಿಸಲಾಗುತ್ತಿದೆ.

ಮಿಶ್ರ ಕಸ ಕೊಟ್ಟರೆ, ಫುಟ್‌ಪಾತ್‌ ಪಕ್ಕ ತ್ಯಾಜ್ಯ ಸುರಿದರೆ, ರಸ್ತೆ ಮೇಲೆ ಉಗುಳಿದರೆ ₨ 100 ದಂಡ ವಿಧಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸರ್ಕಾರ ಕೂಡ ‘ಕರ್ನಾಟಕ ಪೌರನಿಗಮಗಳ ಕಾಯ್ದೆ’ಗೆ ತಿದ್ದುಪಡಿ ತಂದಿತು. ಆದರೆ, ಆ ಕಾಯ್ದೆಯನ್ನು ಇದುವರೆಗೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ.

ವೈದ್ಯಕೀಯ ತ್ಯಾಜ್ಯ: ‘ಕಸಮುಕ್ತ’ ಯೋಜನೆ ಪ್ರಕಾರ, ಮನೆಗಳಲ್ಲಿ ಉತ್ಪಾದನೆಯಾಗುವ ವೈದ್ಯಕೀಯ ತ್ಯಾಜ್ಯವಾದ ಮಾತ್ರೆ, ಸಿರೇಂಜ್‌, ನ್ಯಾಪ್ಕಿನ್‌, ಗಾಯಕ್ಕೆ ಉಪಯೋಗಿಸಿದ ಕಾಟನ್‌ ಮತ್ತಿತರ ವಸ್ತುಗಳನ್ನು ವಾರಕ್ಕೊಮ್ಮೆ ಪ್ರತ್ಯೇಕವಾಗಿ ಸಂಗ್ರಹ ಮಾಡಬೇಕಿತ್ತು. ಆದರೆ, ಈ ಕೆಲಸ 14 ತಿಂಗಳು ಕಳೆದರೂ 22 ವಾರ್ಡ್‌ಗಳಲ್ಲಿ ಎಲ್ಲಿಯೂ ನಡೆದಿಲ್ಲ.

‘ಯೋಜನೆ ವಿಫಲಗೊಳ್ಳಲು ಬಿಬಿಎಂಪಿ ಹಾಗೂ ಗುತ್ತಿಗೆದಾರರು ಎಷ್ಟು ಕಾರಣವೋ, ನಾಗರಿಕರು ಕೂಡ ಅಷ್ಟೇ ಜವಾಬ್ದಾರರಾಗಿದ್ದಾರೆ. ಅವರು ತಮ್ಮ ಹೊಣೆಯನ್ನು ಮರೆತಿದ್ದರಿಂದಲೇ ಸಮಸ್ಯೆ ಬಿಗಡಾಯಿಸಿದೆ’ ಎಂದು ಯಲಹಂಕದ ಕೆ.ಆರ್‌. ರಮೇಶ್ ಹೇಳುತ್ತಾರೆ.
‘ಬಿಬಿಎಂಪಿ ಜತೆ ಸಹಭಾಗಿತ್ವ ವಹಿಸಿದ್ದ ಸ್ವಯಂಸೇವಾ ಸಂಸ್ಥೆಗಳು ವೆಚ್ಚವನ್ನು ಭರಿಸಲು ಸಿದ್ಧವಿಲ್ಲದ ಕಾರಣ
ಕಸಮುಕ್ತ ವಾರ್ಡ್‌ ನಿರ್ಮಾಣದ ಯೋಜನೆಯನ್ನೇ ಕೈಬಿಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

‘ಹಾಗಾದರೆ ಲಕ್ಷಾಂತರ ರೂಪಾಯಿ ವ್ಯಯಿಸಿ ಯೋಜನೆಯನ್ನು ಉದ್ಘಾಟಿಸುವ ಕಾರ್ಯಕ್ರಮ ಮಾಡಿದ್ದೇಕೆ’ ಎಂದು ಪ್ರಶ್ನಿಸಿದರೆ, ನೇರ ಉತ್ತರ ನೀಡದ ಅವರು, ‘ಕಸ ನಿರ್ವಹಣೆ ಕುರಿತು ಆ ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದು ವಿವರಿಸುತ್ತಾರೆ.

Write A Comment