ರಾಷ್ಟ್ರೀಯ

ವಾರಣಾಸಿಯಲ್ಲಿ 6.4 ಲಕ್ಷ ನಕಲಿ ಮತದಾರರು

Pinterest LinkedIn Tumblr

– ಶರತ್ ಪ್ರಧಾನ್, ಪವಿತ್ರಾ ಎಸ್. ರಂಗನ್
Voters

ಈ ವರ್ಷದ ಜೂನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದಾಗ ಹೆಚ್ಚಿನವರು ಅದಕ್ಕೆ ವಿಶೇಷ ಮಹತ್ವವನ್ನು ಕೊಡಲಿಲ್ಲ. ಅದು ಸೋತ ಅಭ್ಯರ್ಥಿಗಳು ಗೆದ್ದ ಅಭ್ಯರ್ಥಿಗಳ ವಿರುದ್ಧ ಸಾಮಾನ್ಯವಾಗಿ ಸಲ್ಲಿಸುವ ತಕರಾರು ಅರ್ಜಿ ಎಂಬುದಾಗಿ ಭಾವಿಸಲಾಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಹುಕೋನ ಸ್ಪರ್ಧೆಯ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಮೋದಿ 3,71,784 ಮತಗಳ ಅಂತರದಿಂದ ಗೆದ್ದುಕೊಂಡರು.

ಅವರ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಾರ್ಟಿ (ಆಪ್)ಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ 2,09,238 ಮತಗಳನ್ನು ಪಡೆದರು. ಮೋದಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವುದಕ್ಕಾಗಿ ಅವರ ಬಳಗ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆಸಿದೆ ಎಂದೂ ಕೇಜ್ರಿವಾಲ್ ಆರೋಪಿಸಿದರು. ಅದೇ ವೇಳೆ, ಚುನಾವಣಾ ಆಯೋಗವೂ ಪಕ್ಷಪಾತಪೂರಿತವಾಗಿ ವರ್ತಿಸಿದೆ ಎಂದು ದೂರಿದರು. ಅಜಯ್ ರೈ 75,614 ಮತಗಳನ್ನು ಗಳಿಸಿದ್ದರು.

ಆದರೆ ಸ್ವತಃ ಚುನಾವಣಾ ಆಯೋಗವೇ ಬಿಡುಗಡೆ ಮಾಡಿರುವ ಮಾಹಿತಿಯು ರೈ ಮತ್ತು ಕೇಜ್ರಿವಾಲ್‌ರ ಆರೋಪಗಳಿಗೆ ಈಗ ಕೊಂಚ ವಿಶ್ವಾಸಾರ್ಹತೆಯನ್ನು ಕೊಟ್ಟಿರುವಂತೆ ಕಾಣುತ್ತಿದೆ. ವಿವಿಐಪಿ ಕ್ಷೇತ್ರವೊಂದರಲ್ಲಿ, ಅದರಲ್ಲೂ ಪ್ರಧಾನಿಯ ಕ್ಷೇತ್ರದಲ್ಲಿ 6,40,000 ಅಕ್ರಮ ಮತದಾರರನ್ನು ಗುರುತಿಸಲಾಗಿದೆ ಎಂಬ ವಿಷಯವು ಸಾಮಾನ್ಯ ಸಂದರ್ಭಗಳಲ್ಲಾದರೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರಬೇಕಿತ್ತು ಹಾಗೂ ಆ ಬಗ್ಗೆ ಆಕ್ರೋಶಭರಿತ ಚರ್ಚೆಗಳು ನಡೆಯಬೇಕಿತ್ತು (ಹಿಂದಿನ ಘಟನೆಯೊಂದನ್ನು ಉಲ್ಲೇಖಿಸುವುದಾದರೆ, 1975ರಲ್ಲಿ ಚುನಾವಣಾ ಅಕ್ರಮ ನಡೆಸಿದ ಆರೋಪದಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಆಯ್ಕೆಯನ್ನು ಅನೂರ್ಜಿತಗೊಳಿಸಲಾಗಿತ್ತು ಹಾಗೂ ಇದಕ್ಕೆ ಪ್ರತಿಕ್ರಿಯೆಯಾಗಿ ಮಾರನೆ ದಿನ ಇಂದಿರಾ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು.).

ಆದರೆ, ಇದು ಅಸಾಧಾರಣ ಸಂದರ್ಭ. ಇಷ್ಟು ಬೃಹತ್ ಸಂಖ್ಯೆಯ ನಕಲಿ ಮತದಾರರ ಪತ್ತೆಗೆ ರಾಷ್ಟ್ರೀಯ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತೀರಾ ಸಪ್ಪೆ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನು ಆಕ್ರೋಶಭರಿತ ಚರ್ಚೆಗಳು ಎಲ್ಲಿ ನಡೆಯಬೇಕು. ಈ ಸುದ್ದಿ ಮೊದಲು ಪ್ರಕಟಗೊಂಡಿದ್ದು ‘ನವಭಾರತ್ ಟೈಮ್ಸ್’ ವೆಬ್‌ಸೈಟ್‌ನಲ್ಲಿ. ಬಳಿಕ ‘ದೈನಿಕ ಜಾಗರಣ್’ನಲ್ಲಿ ಪ್ರಕಟಗೊಂಡಿತು. ಈ ಎರಡೂ ಮಾಧ್ಯಮಗಳು ಆರಂಭದಲ್ಲಿ ಪ್ರಕಟಿಸಿದ್ದ 3,00,000 ಅಕ್ರಮ ಮತದಾರರ ಸಂಖ್ಯೆ ಬಳಿಕ 6,47,000ಕ್ಕೆ ಏರಿತು. ಇದನ್ನು ಜಿಲ್ಲಾಡಳಿತದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಧಿಕಾರಿಗಳು ವಿವರಿಸುವಂತೆ, ಯಾರ ಹೆಸರು ಮತ್ತು ತಂದೆಯ ಹೆಸರು ಒಂದಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ದಾಖಲಾಗುವುದೋ ಅವರು ನಕಲಿ ಮತದಾರರು. ಉದಾಹರಣೆಗೆ, 13 ವಿವಿಧ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ 50,000 ವ್ಯಕ್ತಿಗಳ ಹೆಸರು ದಾಖಲಾಗಿರಬಹುದು. ಆದಾಗ್ಯೂ, ಇಂಥ ಮತದಾರರನ್ನು ‘ನಕಲಿ’ ಎಂಬುದಾಗಿ ಕರೆಯುವುದನ್ನು ಅಧಿಕಾರಿಗಳು ಒಪ್ಪುವುದಿಲ್ಲ. ‘‘ಇದು ಹೆಸರುಗಳ ನಕಲಿಯಷ್ಟೆ, ಹಾಗಾಗಿ ಅವರನ್ನು ನಕಲಿ ಮತದಾರರು ಎಂಬುದಾಗಿ ಕರೆಯುವುದು ಸರಿಯಲ್ಲ’’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಇದು ‘ಕಣ್ತಪ್ಪಿನಿಂದಾದ’ ಅಥವಾ ‘ಗುಮಾಸ್ತರು ಮಾಡಿದ ತಪ್ಪು’ ಎಂಬುದಾಗಿ ಅವರು ಬಣ್ಣಿಸುತ್ತಾರೆ.

ಸಾಮಾನ್ಯವಾಗಿ ಪ್ರತಿ ವರ್ಷದ ಸೆಪ್ಟಂಬರ್‌ನಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ನಕಲಿ ಹೆಸರುಗಳನ್ನು ಕಳೆದ ವರ್ಷ ಯಾಕೆ ಪತ್ತೆಹಚ್ಚಲಿಲ್ಲ ಎಂದು ಪ್ರಶ್ನಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಅಂಕಿಅಂಶಗಳನ್ನು ಹಿಡಿದಿಡಬಲ್ಲ (ಉತ್ತರಪ್ರದೇಶದಲ್ಲಿ ಒಟ್ಟು 13.88 ಕೋಟಿ ಮತದಾರರಿದ್ದಾರೆ) ಹಾಗೂ ಒಂದೇ ರೀತಿಯ ಹೆಸರುಗಳನ್ನು ತೋರಿಸಬಲ್ಲ ಕಂಪ್ಯೂಟರ್ ಸಾಫ್ಟ್‌ವೇರ್ ಚುನಾವಣಾ ಆಯೋಗಕ್ಕೆ ಕಳೆದ ವರ್ಷ ಲಭ್ಯವಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂಥ ಸಾಫ್ಟ್‌ವೇರ್ ಬಳಸುವುದನ್ನು ಈ ವರ್ಷದಿಂದ ಚುನಾವಣಾ ಆಯೋಗ ಆರಂಭಿಸಿದೆ, ಹಾಗಾಗಿ ದೊಡ್ಡ ಪ್ರಮಾಣದಲ್ಲಿ ‘ನಕಲಿ’ ಹೆಸರುಗಳು ಪತ್ತೆಯಾಗಿವೆ ಎಂದರು.

ಮತದಾರರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತಾರೆ ಹಾಗೂ ಹಿಂದಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸಿಹಾಕುವ ಗೋಜಿಗೆ ಹೋಗುವುದಿಲ್ಲ. ಇದು ‘ನಕಲಿ’ಗೆ ಕಾರಣವಿರಬಹುದು ಎಂದು ಅವರು ವಿವರಿಸುತ್ತಾರೆ. ವಾರಣಾಸಿಯಲ್ಲಿ ‘ಬೋಗಸ್’ ಮತದಾರರು ಅಥವಾ ಭೌತಿಕ ತಪಾಸಣೆಯ ಬಳಿಕವೂ ಪತ್ತೆಯಾಗದ ಮತದಾರರ ಸಂಖ್ಯೆ ಕೇವಲ 23,600 ಆಗಿತ್ತು ಎಂದು ಅವರು ಹೇಳಿಕೊಳ್ಳುತ್ತಾರೆ.

ಈ ‘ಬೋಗಸ್ ಮತದಾರರು’ ಅಥವಾ ‘ನಕಲಿ ಮತದಾರರ’ ಪೈಕಿ ಎಷ್ಟು ಮಂದಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿದ್ದಾರೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಮತಗಟ್ಟೆಗಳಲ್ಲಿರುವ ದಾಖಲೆಗಳು ಮತ್ತು ಸಹಿಗಳನ್ನು ಮತದಾರರ ಪಟ್ಟಿಯೊಂದಿಗೆ ತಾಳೆ ಹಾಕಿ ನೋಡುವುದು ದೀರ್ಘ ಹಾಗೂ ಪರಿಶ್ರಮದ ಪ್ರಕ್ರಿಯೆ. ತಾಂತ್ರಿಕವಾಗಿ, ನಕಲಿ ಮತದಾರರು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದಾರೆ ಎಂಬುದನ್ನು ನಿರ್ಣಾಯಕವಾಗಿ ಸಾಧಿಸಿ ತೋರಿಸಿದರೆ ಮಾತ್ರ ಅವರನ್ನು ‘ಬೋಗಸ್ ಮತದಾರರು’ ಎಂಬುದಾಗಿ ಪರಿಗಣಿಸಲಾಗುವುದು.

ಇಲ್ಲಿ ಯಾವುದೇ ರೀತಿಯ ಪಿತೂರಿಯ ಸಾಧ್ಯತೆಯನ್ನು ಲಕ್ನೋ ಮತ್ತು ಹೊಸದಿಲ್ಲಿಯ ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ತಳ್ಳಿಹಾಕುತ್ತಾರೆ. ಇದು ದೇಶಾದ್ಯಂತ ವರ್ಷಂಪ್ರತಿ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಷ್ಟೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮತದಾರರ ಪಟ್ಟಿಯ ಕೂಲಂಕಷ ಪರಿಷ್ಕರಣೆಯಾಗಬೇಕೆಂದು ಭಾರತೀಯ ಚುನಾವಣಾ ಆಯೋಗ 2014 ಜುಲೈ 30ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಹೊರತುಪಡಿಸಿ) ವಿಸ್ತೃತ ಸೂಚನೆಗಳನ್ನು ಕಳುಹಿಸಿತ್ತು. ಈ ಪ್ರಕ್ರಿಯೆಯ ಭಾಗವಾಗಿಯೇ ಉತ್ತರಪ್ರದೇಶದಲ್ಲಿ ‘ನಕಲಿ ಮತದಾರರು’ ಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವರದಿಯೊಂದನ್ನು ರಾಜ್ಯ ಭಾರತೀಯ ಚುನಾವಣಾ ಆಯೋಗಕ್ಕೆ ಇನ್ನಷ್ಟೇ ಕಳುಹಿಸಬೇಕಿದೆ.
ಉತ್ತರಪ್ರದೇಶವನ್ನು ಹೊರತುಪಡಿಸಿ ಇತರ ಯಾವುದೇ ರಾಜ್ಯ ಇಷ್ಟೊಂದು ದೊಡ್ಡ ಪ್ರಮಾಣದ ನಕಲಿ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ‘‘ನಾವು ಮನೆ-ಮನೆ ತಪಾಸಣೆ ನಡೆಸಿದಾಗ, 6,24,000 ವ್ಯಕ್ತಿಗಳ ಪೈಕಿ ಹೆಚ್ಚಿನವರು ಒಂದೇ ಹೆಸರು ಮತ್ತು ಒಂದೇ ತಂದೆಯ ಹೆಸರುಗಳನ್ನು ಹೊಂದಿರುವುದು ಪತ್ತೆಯಾಯಿತು. 23,600 ಮಂದಿ ಈಗ ಜಿಲ್ಲೆಯ ಹೊರಗೆ ಹೋಗಿರುವುದು ಗೊತ್ತಾಯಿತು’’ ಎಂದು ವಾರಣಾಸಿ ಜಿಲ್ಲಾಧಿಕಾರಿ ಪ್ರಾಂಜಲ್ ಯಾದವ್ ಹೇಳಿದರು.

ಆದಾಗ್ಯೂ, ಇತರ ರಾಜ್ಯಗಳ ಚುನಾವಣಾ ಆಯುಕ್ತರನ್ನು ‘ಔಟ್‌ಲುಕ್’ ಸಂಪರ್ಕಿಸಿದಾಗ, ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನಕಲಿ ಹೆಸರುಗಳನ್ನು ಪತ್ತೆಹಚ್ಚುವುದಕ್ಕಾಗಿ ಭಾರತೀಯ ಚುನಾವಣಾ ಆಯೋಗ ಹೊಸದಾಗಿ ಯಾವುದೇ ಸಾಫ್ಟ್ ವೇರ್ ವಿತರಿಸಿಲ್ಲ ಎಂದು ಹೇಳಿದರು. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್ ಹಾಗೂ ಅದನ್ನು ಆಗಾಗ್ಗೆ ತಾಜಾಗೊಳಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಅದೂ ಅಲ್ಲದೆ, ಉತ್ತರಪ್ರದೇಶ ರಾಜ್ಯ ಚುನಾವಣಾ ಆಯೋಗ ನಕಲಿ ಹೆಸರುಗಳನ್ನು ಜನವರಿ 30ರ ಮುಂಚೆಯೇ ಅಳಿಸಿಹಾಕಿದೆ ಎಂದು ಹೇಳಲಾಗಿತ್ತು. ಅದರ ಹೊರತಾಗಿಯೂ, ಇದಾದ ಕೆಲವೇ ತಿಂಗಳಲ್ಲಿ ಮನೆ-ಮನೆ ತಪಾಸಣೆಯ ಅಗತ್ಯವನ್ನು ಹುಟ್ಟುಹಾಕುವಷ್ಟು ಅಧಿಕ ಸಂಖ್ಯೆಯಲ್ಲಿ ನಕಲಿ ಹೆಸರುಗಳನ್ನು ಸಾಫ್ಟ್ ವೇರ್ ಪತ್ತೆಹಚ್ಚಿರುವುದು ಸಂಶಯವನ್ನು ಹುಟ್ಟುಹಾಕುತ್ತದೆ. ದಿಲ್ಲಿಯಲ್ಲಿ ಆಪ್ ಬೆಂಬಲಿಗರ ಹೆಸರುಗಳನ್ನು ಅಳಿಸಿ ಹಾಕಿ ತಮ್ಮ ಬೆಂಬಲಿಗರ ಹೆಸರುಗಳನ್ನು ಸೇರಿಸಲು ಲಂಚ ನೀಡುವ ಮೂಲಕ ಬಿಜೆಪಿ ಮತದಾರರ ಪಟ್ಟಿಯಲ್ಲಿ ಹಸ್ತಕ್ಷೇಪ ನಡೆಸಲು ಯತ್ನಿಸುತ್ತಿದೆ ಎಂಬುದಾಗಿ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿ ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಈ ಗೊಂದಲ ಕಾಣಿಸಿಕೊಂಡಿರುವುದು ಗಮನಾರ್ಹ.

‘‘ಚುನಾವಣಾ ಆಯೋಗ ಈವರೆಗೆ ಯಾಕೆ ವೌನವಾಗಿತ್ತು? ಕೆಲವೊಂದು ರಾಜಕೀಯ ಹಿರಿತಲೆಗಳಿಗೆ ಲಾಭವನ್ನುಂಟು ಮಾಡಲು ನಕಲಿ ಮತದಾನಕ್ಕೆ ಅವಕಾಶ ನೀಡುವ ಪಿತೂರಿ ನಡೆದರೂ ಅಚ್ಚರಿಯಿಲ್ಲ. ಅದೇನಿದ್ದರೂ, ಮೋದಿ ಮತ್ತು ಅವರ ತಂಡ ವಾರಣಾಸಿಯಲ್ಲಿ ನಡೆಸಿರುವ ಸಾರಾಸಗಟು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಾವು ಚುನಾವಣಾ ಆಯೋಗದ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ, ನಮ್ಮ ಆಕ್ಷೇಪಗಳನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ’’ ಎಂದು ಆಪ್‌ನ ಉತ್ತರಪ್ರದೇಶದ ವಕ್ತಾರ ವೈಭವ್ ಮಹೇಶ್ವರಿ ಹೇಳುತ್ತಾರೆ.
ಆಪ್ ಹೊರತಾಗಿ ಬೇರೆ ಯಾವುದೇ ರಾಜಕೀಯ ಪಕ್ಷ ಈ ವಿಷಯದ ಬಗ್ಗೆ ಮಾತನಾಡಲು ತಯಾರಿಲ್ಲ. ನಕಲಿ ಮತದಾನದಿಂದ ಪ್ರಧಾನ ವಾಹಿನಿಯ ಎಲ್ಲ ರಾಜಕೀಯ ಪಕ್ಷಗಳಿಗೆ ಲಾಭವಿರುವುದು ಇದಕ್ಕೆ ಕಾರಣವಾಗಿರಬಹುದೋ ಏನೋ.
ವಾರಣಾಸಿಯಲ್ಲಿ 2009 ಮತ್ತು 2014ರ ನಡುವಿನ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮತದಾರರ ಸೇರ್ಪಡೆಯಾಗಿರುವುದು ದಾಖಲೆಗಳಿಂದ ಸ್ಪಷ್ಟವಿದೆ. 2009ರಲ್ಲಿ 15,61,854 ನೋಂದಾಯಿತ ಮತದಾರರಿದ್ದರೆ, 2014ರಲ್ಲಿ ನೋಂದಾಯಿತ ಮತದಾರರ ಸಂಖ್ಯೆ 17,66,687 ಆಗಿತ್ತು. ಅವರ ಪೈಕಿ 2009ರಲ್ಲಿ 6,65,221 ಮಂದಿ ಮತ ಹಾಕಿದರೆ, 2014ರಲ್ಲಿ 10,29,816 ಮತದಾರರು ಮತದಾನ ಮಾಡಿದ್ದಾರೆ.
‘‘ಇಲ್ಲಿಯವರೆಗೆ ಅತಿ ಹೆಚ್ಚು ಸಂಖ್ಯೆಯ ನಕಲಿ ಮತದಾರರು (81,697) ವಾರಣಾಸಿ ಕ್ಯಾಂಟ್ ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾಗಿದ್ದಾರೆ, ನಂತರದ ಸ್ಥಾನಗಳಲ್ಲಿ 70,684 ನಕಲಿ ಮತದಾರರು ಪತ್ತೆಯಾಗಿರುವ ನಗರ-ಉತ್ತರ, 69,397 ನಕಲಿ ಮತದಾರರು ಪತ್ತೆಯಾಗಿರುವ ನಗರ-ದಕ್ಷಿಣ, 35,982 ನಕಲಿ ಮತದಾರರು ಪತ್ತೆಯಾಗಿರುವ ಪಿಂಡ್ರ, 19,659 ನಕಲಿ ಮತದಾರರು ಇರುವ ರೊಹಾನಿಯ, 15,285 ಬೋಗಸ್ ಮತದಾರರು ಕಂಡುಬಂದಿರುವ ಅಜ್ಗರ, 10,981 ನಕಲಿ ಮತದಾರರುಳ್ಳ ಶಿವಪುರ ಮತ್ತು 7,372 ನಕಲಿ ಮತದಾರರು ಪತ್ತೆಯಾಗಿರುವ ಸೇವಪುರಿಗಳಿವೆ.

ಇತರ ಹಲವು ಕ್ಷೇತ್ರಗಳಲ್ಲೂ ಭಾರೀ ಸಂಖ್ಯೆಯಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಉತ್ತರಪ್ರದೇಶದ ಮತದಾರರ ಪಟ್ಟಿಯಲ್ಲಿ ಒಂದು ಕೋಟಿಗೂ ಅಧಿಕ ನಕಲಿ ಮತದಾರರ ಹೆಸರುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. 2014 ಮೇ ತಿಂಗಳ ಹೊತ್ತಿಗೆ ಈ ರಾಜ್ಯದ ಮತದಾರರ ಪಟ್ಟಿಯಲ್ಲಿ 13.88 ಕೋಟಿ ಮತದಾರರಿದ್ದರು.
ಕೃಪೆ: ಔಟ್‌ಲುಕ್

Write A Comment