ಕರ್ನಾಟಕ

ರಾಜ್ಯಗಳ ಸಿಎಂಗಳ ಜೊತೆಗೆ ಸಮಾಲೋಚನೆ: ಹೊಸ ಯೋಜನಾ ಸಂಸ್ಥೆಯಲ್ಲಿ ರಾಜ್ಯಗಳಿಗೆ ಮಹತ್ವದ ಪಾತ್ರ ಪ್ರಧಾನಿ ಮೋದಿ ಭರವಸೆ

Pinterest LinkedIn Tumblr

cmಹೊಸದಿಲ್ಲಿ, ಡಿ.7: ಈಗ ಅಸ್ತಿತ್ವದಲ್ಲಿರುವ ಯೋಜನಾ ಆಯೋಗದ ಸ್ಥಾನದಲ್ಲಿ ರಚನೆಯಾಗಲಿರುವ ಹೊಸ ಯೋಜನಾ ಸಂಸ್ಥೆಯಲ್ಲಿ ರಾಜ್ಯಗಳಿಗೆ ಮಹತ್ವದ ಪಾತ್ರವನ್ನು ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಯೋಜನಾ ಆಯೋಗದ ಸ್ಥಾನವನ್ನು ತುಂಬಲಿರುವ ಹೊಸ ಸಂಸ್ಥೆಯ ರೂಪುರೇಷೆಗಳ ಕುರಿತು ಚರ್ಚೆ ನಡೆಸಲು ಕರೆಯಲಾಗಿದ್ದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ನೀತಿ ನಿರೂಪಣೆಯ ಪ್ರಕ್ರಿಯೆಗಳು ‘ತಲೆಯಿಂದ ಬುಡದವರೆಗೆ’ ಮತ್ತು ‘ಬುಡದಿಂದ ತಲೆಯವರೆಗೆ’ ಸಂಪೂರ್ಣವಾಗಿ ಬದಲಾಗಬೇಕು. ರಾಜ್ಯಗಳು ಅಭಿವೃದ್ಧಿ ಹೊಂದದೆ ದೇಶವೊಂದು ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ ಎಂದು ಮೋದಿ ನುಡಿದರು.

ಸಮಾಲೋಚನಾ ಸಭೆಯಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಪ್ರತಿನಿಧಿಗಳು ಹಾಜರಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಯೋಜನಾ ಆಯೋಗದ ಸ್ಥಾನದಲ್ಲಿ ಅಸ್ತಿತ್ವಕ್ಕೆ ಬರುವ ಸಂಸ್ಥೆಯು ‘ಟೀಮ್ ಇಂಡಿಯಾ’ದ ಕಲ್ಪನೆಯನ್ನು ಒಳಗೊಂಡಿರಬೇಕು.

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು; ಕೇಂದ್ರ ಸಚಿವರು; ಹಾಗೂ ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು, ಹೀಗೆ ಇವರನ್ನು ಒಳಗೊಂಡ ಮೂರು ತಂಡಗಳನ್ನು ಅದು ಹೊಂದಿರಬೇಕು. ಹೊಸ ಸಂಸ್ಥೆಯಲ್ಲಿ ರಾಜ್ಯಗಳಿಗೆ ಮಹತ್ವದ ಪಾತ್ರವಿರಬೇಕು ಎಂದು ಮೋದಿ ಹೇಳಿದರು.

‘ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಯಾವುದೇ ವೇದಿಕೆ ಇಲ್ಲ ಎಂಬ ಭಾವನೆ ಕೆಲವೊಮ್ಮೆ ರಾಜ್ಯಗಳಿಗೆ ಮೂಡುವುದು ಸಹಜ. ಅಂತಾರಾಜ್ಯ ವಿವಾದಗಳನ್ನು ಇತ್ಯರ್ಥಪಡಿಸಲು ಪರಿಣಾಮಕಾರಿಯಾದ ಒಂದು ವ್ಯವಸ್ಥೆ ಇರಬೇಕು’ ಎಂದು ಅವರು ಹೇಳಿದರು.

‘ಭಾರತದ ಶಕ್ತಿಗೆ ಅನುಗುಣವಾದ, ರಾಜ್ಯಗಳನ್ನು ಸಬಲೀಕರಣಗೊಳಿಸುವ, ಮತ್ತು ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳನ್ನು ಒಂದೇ ವೇದಿಕೆಯೊಳಗೆ ತರಬಲ್ಲ ಹೊಸ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬಹುದೇ?’ ಎಂದು ಮೋದಿ ಸಭೆಯಲ್ಲಿ ಪ್ರಶ್ನೆಯೊಂದನ್ನು ತೇಲಿಬಿಟ್ಟರು.

ಮುಖ್ಯಮಂತ್ರಿಗಳೊಂದಿಗಿನ ಸಮಾಲೋಚನಾ ಸಭೆ ‘ಯಶಸ್ವಿ’ಯಾಗಿದೆ. ಎಲ್ಲ ಮುಖ್ಯಮಂತ್ರಿಗಳು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎಂದು ಸಭೆಯ ನಂತರ ಪ್ರಧಾನಿ ಹೇಳಿದರು.

ಯೋಜನಾ ಆಯೋಗದೊಂದಿಗೆ ಬಹಳ ದೀರ್ಘಕಾಲದ ಸಂಬಂಧ ಹೊಂದಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತುಗಳನ್ನು ಮೋದಿ ಸಭೆಯಲ್ಲಿ ನೆನಪಿಸಿಕೊಂಡರು. ಸುಧಾರಣೋತ್ತರ ದಿನಗಳಲ್ಲಿ ಯೋಜನಾ ಆಯೋಗಕ್ಕೆ ಯಾವುದೇ ಬಗೆಯ ಭವಿಷ್ಯದ ಕಲ್ಪನೆಗಳಿರುವುದಿಲ್ಲ ಎಂದು ಡಾ.ಸಿಂಗ್ ಅಂದು ಹೇಳಿದ್ದರು ಎಂದು ಮೋದಿ ತಿಳಿಸಿದರು.

Write A Comment