ಕರ್ನಾಟಕ

ಕನ್ನಡ ಕರ್ನಾಟಕದ ಮಾತೃಭಾಷೆ ಅಲ್ಲ: ಬೊಳುವಾರು

Pinterest LinkedIn Tumblr

bolu

ಬೆಂಗಳೂರು: ಕನ್ನಡವು ಕರ್ನಾಟಕದ ಮಾತೃಭಾಷೆ ಅಲ್ಲ. ಯಾಕೆಂದರೆ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆಯಲಿರುವ ‘ವಿಶ್ವ ತುಳುವೆರೆ ಪರ್ಬ’ ಹಿನ್ನೆಲೆಯಲ್ಲಿ ಬೆಂಗಳೂರು ತುಳುಕೂಟವು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ತುಳು-ಕನ್ನಡ ಭಾಷಾ ಬಾಂಧವ್ಯ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

”ಮಕ್ಕಳು ಮಾತೃಭಾಷೆಯಲ್ಲಿ ಓದಿದರೆ ಕನ್ನಡ ಉದ್ಧಾರವಾಗುತ್ತದೆ ಎನ್ನಲಾಗುತ್ತಿದೆ. ಕನ್ನಡ ಆಡಳಿತ ಭಾಷೆಯೇ ಹೊರತು, ಮಾತೃಭಾಷೆಯಲ್ಲ. ಕನ್ನಡವು ಕರ್ನಾಟಕದ ಆಡಳಿತ ಭಾಷೆಯೆಂದು ರಾಜ್ಯಪತ್ರದಲ್ಲಿ ದಾಖಲಿಸಿದ್ದೇ 1963ರಲ್ಲಿ. ಇಂಗ್ಲಿಷ್ ಶಾಲೆಯ ಆಡಳಿತ ಮಂಡಳಿಗಳು ಇದನ್ನೇ ತಮ್ಮ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಳ್ಳುತ್ತಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಅಡ್ಡಿಪಡಿಸುತ್ತಿವೆ,” ಎಂದು ತಿಳಿಸಿದರು.

”ಕನ್ನಡ ಮಾಧ್ಯಮ ಜಾರಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಮತ್ತೊಮ್ಮೆ ಮನವಿ ಸಲ್ಲಿಸಲು ವಿದ್ವಾಂಸರು, ಸಾಹಿತಿಗಳು, ಅತಿರಥ ಮಹಾರಥರು ಕರಡು ಸಿದ್ಧಪಡಿಸುತ್ತಿರುವುದು ತಿಳಿದುಬಂದಿದೆ. ದಾಖಲೆಗಳಲ್ಲಿ ಮಾತೃಭಾಷೆಗೆ ಬದಲಾಗಿ ಆಡಳಿತ ಭಾಷೆಯೆಂದು ನಮೂದಿಸಿದರೆ, ಗೆಲುವು ಸಿಗುವ ಸಾಧ್ಯತೆಗಳಿವೆ. ಆವೇಶ, ಭಾವುಕತೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಹಾಗೆಯೇ ತುಳುನಾಡಿನ ಮಾತೃಭಾಷೆ ತುಳು ಅಲ್ಲ. ಅದು ತುಳುವರ ಭಾಷೆ,” ಎಂದರು.

ಸಾಹಿತಿ ಪ್ರೊ.ಬಸವರಾಜ ಕಲ್ಗುಡಿ ಮಾತನಾಡಿ, ”ತುಳು ಭಾಷೆಯು ಕನ್ನಡವನ್ನು ಅಕ್ಕ, ಅಣ್ಣನಂತೆ ಭಾವಿಸಿದೆ. ಹಾಗಾಗಿಯೇ, ತುಳುವಿನತ್ತ ಕನ್ನಡವು ದೊಡ್ಡ ಗರ್ವ, ಬಿಂಕ ತೋರಲಿಲ್ಲ. ಇದರಿಂದಾಗಿ ಕನ್ನಡ ಮತ್ತು ತುಳು ನಡುವೆ ಅಚ್ಚುಕಟ್ಟಾದ ಭಾಷಾ ಬಾಂಧವ್ಯ ನಿರ್ಮಾಣವಾಗಿದೆ,” ಎಂದು ತಿಳಿಸಿದರು.

”ಮುಂಬಯಿನಲ್ಲಿ ಕನ್ನಡ ಕೂಟಗಳನ್ನು ಸ್ಥಾಪಿಸಿರುವುದು ತುಳು ಭಾಷಿಕರು. ಆ ಮೂಲಕ ಹೊರನಾಡಿನಲ್ಲೂ ಕನ್ನಡ ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮುಂಬಯಿಗೆ ವಲಸೆ ಹೋಗಿ ನೆಲೆಸಿರುವ ತುಳು ಭಾಷಿಕರು ಕನ್ನಡದ ಸಂಸ್ಕೃತಿಯ ಚಹರೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

”19ನೇ ಶತಮಾನದ ಆರಂಭದಲ್ಲಿ ತುಳು ಭಾಷೆಯನ್ನು ಶಿಷ್ಟ ನೆಲೆಗೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ಆದರೆ, 21ಶತಮಾನಕ್ಕೆ ಕರೆದೊಯ್ಯಲು ತುಳು ವಿದ್ವಾಂಸರಿಂದ ಸಾಧ್ಯವಾಗಲಿಲ್ಲ. ಈ ಚೈತನ್ಯ ಒದಗಿ ಬಂದಿದ್ದರೆ, ಕನ್ನಡದ ಜತೆ ತುಳು ಭಾಷೆ ಸಹ ಶಿಷ್ಟ ಪರಂಪರೆಯ ಭಾಷೆಯಾಗಿ ಉಳಿಯುವ ಅದೃಷ್ಟ ಪಡೆದುಕೊಳ್ಳುತ್ತಿತ್ತು. ಸೃಜನಶೀಲ ಆಯಾಮ ಪಡೆದುಕೊಳ್ಳಬಹುದಿತ್ತು,” ಎಂದು ಅಭಿಪ್ರಾಯಪಟ್ಟರು.

”ಆಡು ಭಾಷೆಯಲ್ಲಿರುವ ಕನ್ನಡವನ್ನು ಬರಹಕ್ಕೆ ತರಬೇಕೆಂದು ತಜ್ಞರು ಪ್ರಭುತ್ವಕ್ಕೆ ಪರೋಕ್ಷವಾಗಿ ಒತ್ತಾಯಿಸಿದರು. ಹಾಗಾಗಿ, ಕನ್ನಡಕ್ಕೆ ಶಿಷ್ಟಾಚಾರ ಸಿಕ್ಕಿತು. ಕನ್ನಡಕ್ಕೆ ದೇಶ, ಭಾಷೆಯ ಪರಿಕಲ್ಪನೆ ಬಂದದ್ದು 14-15ನೇ ಶತಮಾನದಲ್ಲಿ. ತುಳು ನಾಡಿನವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಗೊಂದಲವಿದೆ. ಆದರೆ, ಅವರನ್ನು ಅಲ್ಪಸಂಖ್ಯಾತರೆಂದೇ ಭಾವಿಸಿ, ಎಲ್ಲ ಸವಲತ್ತುಗಳನ್ನು ಒದಗಿಸಬೇಕು,” ಎಂದು ಒತ್ತಾಯಿಸಿದರು.

ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು, ”ತುಳುವಿನ ಭಾಷಿಕ ಸಂಪತ್ತು, ಪ್ರಾಚೀನ ಅಕ್ಷರ ಪರಂಪರೆ, ಆಧುನಿಕ ಸಾಹಿತ್ಯವನ್ನು ತುಳು ಭಾಷಿಕರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ. ಕನ್ನಡದೊಂದಿಗೆ ತುಳು ಭಾಷೆಯನ್ನು ಸ್ವಾತಂತ್ರ್ಯದ ಹಾದಿಯಲ್ಲಿ ಬೆಳೆಸುವ ಪ್ರಯತ್ನ ಮಾಡಬೇಕಿದೆ,” ಎಂದರು.

”ಕನ್ನಡ ತುಳುವಿನ ಮಿತಿಯೂ ಹೌದು, ಶಕ್ತಿಯೂ ಹೌದು. ಕನ್ನಡದ ಜಾನಪದಕ್ಕೆ ಸೈದ್ಧಾಂತಿಕ ಮತ್ತು ವೈಜ್ಞಾನಿಕ ಆಯಾಮ ನೀಡಿದ್ದು ತುಳು ಅಧ್ಯಯನಕಾರರು. ಹಾಗೆಯೇ ಪ್ರಾಚೀನ ತುಳು ಸಾಹಿತ್ಯವನ್ನು ಕನ್ನಡ ಭಾಷೆ ಬೆಳೆಸಿತು. ಆದ ಕಾರಣ, ಇಂಗ್ಲಿಷ್ ಮತ್ತು ಕನ್ನಡದ ಸಂಬಂಧವನ್ನಿಟ್ಟುಕೊಂಡೇ ತುಳು ಭಾಷೆಯನ್ನು ಕಟ್ಟಬೇಕಿದೆ. ಶೈಕ್ಷಣಿಕವಾಗಿ ಸಶಕ್ತಗೊಳಿಸಬೇಕಾದ ಅಗತ್ಯವಿದೆ,” ಎಂದು ಹೇಳಿದರು.

ಲೇಖಕಿ ಉಷಾ ಪಿ.ರೈ, ”ತುಳು ಭಾಷೆಯು ಕನ್ನಡವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಈ ಎರಡು ಭಾಷೆಗಳು ಅಕ್ಕ-ತಂಗಿಯರಂತೆ ಅನ್ಯೋನ್ಯತೆಯಿಂದಿವೆ,” ಎಂದು ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಬಿ.ಎ.ಹರೀಶ್ ಗೌಡ, ವಿಶ್ವ ತುಳುವೆರೆ ಪರ್ಬದ ಅಧ್ಯಕ್ಷ ಎಸ್.ಆರ್.ಹೆಗ್ಡೆ, ಸಾಹಿತಿ ಪ್ರೊ. ರವಿಕಿರಣ್, ತುಳುವೆರೆಂಕುಲು ಅಧ್ಯಕ್ಷ ಕೆ.ಎನ್.ಅಡಿಗ, ತುಳುವೆರೆ ಚಾವಡಿಯ ಅಧ್ಯಕ್ಷ ವಿಶುಕುಮಾರ್ ಶೆಟ್ಟಿ, ತುಳುಕೂಟದ ಅಧ್ಯಕ್ಷ ಎಂ.ಸ್ವಯಂಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Write A Comment