ಕರ್ನಾಟಕ

ಬೆಂಗಳೂರಿನ ಪ್ರಸಿದ್ಧ ಮಲ್ಲೇಶ್ವರಂ ಮಾರ್ಕೆಟ್ ಖಾಲಿ ಮಾಡುವಂತೆ ನೋಟಿಸ್

Pinterest LinkedIn Tumblr

market

ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಮಲ್ಲೇಶ್ವರಂ ಮಾರುಕಟ್ಟೆಯನ್ನು ಇನ್ನು 7 ದಿನದಲ್ಲಿ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮಲ್ಲೇಶ್ವಂರನಲ್ಲಿರುವ ಮಾರುಕಟ್ಟೆಯ ಸುಮಾರು 48 ವ್ಯಾಪಾರಸ್ಥರಿಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು 7 ದಿನಗಳೊಳಗೆ ಜಾಗ ಖಾಲಿ ಮಾಡಬೇಕು ಎಂದು ನೋಟಿಸ್ ನೀಡಿದ್ದಾರೆ. ಪ್ರಸ್ತುತ ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣ ಮಾಡಲು ಬಿಬಿಎಂಪಿ ಮತ್ತು ಬಿಡಿಎ ನಿರ್ಧರಿಸಿದ್ದು, ಹೀಗಾಗಿಯೇ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಪ್ರಸ್ತುತ ಮಲ್ಲೇಶ್ವರಂ ಮಾರುಕಟ್ಟೆ ಇರುವ ಜಾಗ ಸುಮಾರು 300 ಕೋಟಿ ಬೆಲೆ ಬಾಳುತ್ತಿದ್ದು, ಈ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಲು ಅಧಿಕಾರಿಗಳು ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಅಧಿಕಾರಿಗಳು ಈ ಜಾಗವನ್ನು ತೆರವುಗೊಳಿಸಲು ಪ್ರಯತ್ನಿಸಿದ್ದು, ಈ ಹಿಂದೆಯೂ ಕೂಡ ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿದ್ದರು. ಆಗ ಇಲ್ಲಿನ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿತ್ತು.

ಆದರೆ ಈ ವರೆಗೂ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇದೀಗ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದು, ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕಾನೂನು ಬಾಹಿರವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ: ವ್ಯಾಪಾರಸ್ಥರ ಆರೋಪ

ಆದರೆ ಅಧಿಕಾರಿಗಳು ಸೂಚಿಸಿರುವ ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕಿರುವ ವ್ಯಾಪಾರಸ್ಥರು, ವಾಣಿಜ್ಯ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರಾಜಕಾಲುವೆಯನ್ನು ಅತಿಕ್ರಮಿಸಿ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ನಾವು ಒಂದು ವೇಳೆ ಅಲ್ಲಿಗೆ ಸ್ಥಳಾಂತರಗೊಂಡರೆ ಮತ್ತೆ ನಮ್ಮನ್ನು ಅಲ್ಲಿಂದಲೂ ಓಡಿಸುತ್ತಾರೆ. ಹೀಗಾಗಿ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸುವವರೆಗೂ ನಾವು ಜಾಗವನ್ನು ಖಾಲಿ ಮಾಡುವುದಿಲ್ಲ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದಿದ್ದಾರೆ.

ಮತ್ತೆ ಕೆಲ ವ್ಯಾಪಾರಸ್ಥರು ಆರೋಪಿಸಿರುವಂತೆ ಮಲ್ಲೇಶ್ವರಂ ಮಾರುಕಟ್ಟೆ ಇರುವ ಜಾಗವನ್ನು ಬಿಬಿಎಂಪಿ ಬ್ಯಾಂಕ್‌ವೊಂದಕ್ಕೆ ಅಡವಿಟ್ಟಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ 200ಕ್ಕೂ ಅಧಿಕ ಮಳಿಗೆಗಳಿದ್ದು, 48 ಅಂಗಡಿಗಳಿಗೆ ಮಾತ್ರ ನೋಟಿಸ್ ನೀಡಿದ್ದಾರೆ. ಉಳಿದ ಅಂಗಡಿ ಮಾಲೀಕರ ಭವಿಷ್ಯವೇನು ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ.

ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳ ಈ ದಿಢೀರ್ ನಿರ್ಧಾರದಿಂದಾಗಿ ಕಂಗಾಲಾಗಿರುವ ವ್ಯಾಪಾರಸ್ಥರು ಇದೀಗ ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ.

Write A Comment