ಲಾಸ್ ಏಂಜಲೀಸ್: ನಾನು 19ನೇ ವಯಸ್ಸಿನಲ್ಲಿದ್ದಾಗ ನನ್ನ ಮೇಲೂ ಅತ್ಯಾಚಾರವಾಗಿತ್ತು ಆದರೆ ಈ ವಿಷಯವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎಂದು ಪ್ರಖ್ಯಾತ ಪಾಪ್ ಸಿಂಗರ್ ಲೇಡಿ ಗಾಗ ಹೇಳಿದ್ದಾರೆ.
ಗಾಗ ಹಾಡು ಕೇಳಿದರೆ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಗಳಿಗೊಂದು ಆಘಾತಕಾರಿ ಸಂಗತಿ ಇಂದು ಬಯಲಿಗೆ ಬಂದಿದೆ. ಅಮೇರಿಕಾದ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಗಾಗ, ನಾನು 19ನೇ ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದ್ದು, ನಂತರ ಆ ನೋವನ್ನು ಮರೆಯುವ ಸಲುವಾಗಿ ಮಾನಸಿಕ ಹಾಗೂ ದೈಹಿಕ ಚಿಕಿತ್ಸೆಯ ಮೊರೆಹೋಗಿದ್ದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ನನಗೆ ನನ್ನ ಸಂಗೀತವೇ ಜೀವನ. ನಿಜವಾಗಿ ಹೇಳಬೇಕಾದರೆ ಕೆಲವು ವರ್ಷಗಳ ಹಿಂದೆ ನಾನು ನನ್ನ ತನವನ್ನೇ ಕಳೆದು ಕೊಂಡಿದ್ದೆ. ಅಂದು ನಾನು ನಾನಗಿ ಇರಲಿಲ್ಲ 19ನೇ ವರ್ಷದಲ್ಲಿ ಕ್ಯಾಥೊಲಿಕ್ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರವಾಗಿತ್ತು. ಆ ನೋವನ್ನು ಮರೆಯಲು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾದ ಹಲವು ಚಿಕಿತ್ಸೆಗಳನ್ನು ಪಡೆದು ಕೊಂಡಿದ್ದೆ ಆದರೂ ಘಟನೆ ಮರೆಯಲು ಹಲವು ವರ್ಷಗಳೇ ಬೇಕಾಗಿತ್ತು.
ಆ ಘಟನೆ ನಡೆದ ಮೇಲೆಯೇ ನನಗೆ ದೌರ್ಜನ್ಯ ಎಂದರೆ ಏನು ಎಂಬುದು ಅರ್ಥವಾಗಿದ್ದು, ಆ ಸಂದರ್ಭದಲ್ಲಿ ನೋವು ಮರೆಯುವ ಸಲುವಾಗಿ ನಾನು ತೆಗೆದುಕೊಂಡ ಚಿಕಿತ್ಸೆಗಳನ್ನು ನೆನೆದರೆ ನಗು ಬರುತ್ತದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಅತ್ಯಾಚಾರ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿರುವ ಗಾಗ, ಆ ವಿಷಯವನ್ನು ಬಯಲು ಮಾಡಿದರೆ ಆತನ ದೌರ್ಜನ್ಯದಿಂದಲೇ ನಾನು ಪ್ರತಿಷ್ಠಿತ ವ್ಯಕ್ತಿಯಾಗಿದ್ದೇನೆ ಅಂದುಕೊಳ್ಳುತ್ತಾನೆ. ನನ್ನಿಂದ ಅಂತಹ ಆರೋಪಿಗಳು ಲಾಭ ಪಡೆದುಕೊಳ್ಳುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.