ಪ್ರಮುಖ ವರದಿಗಳು

ವಿಶ್ವಕಪ್‌ಗೆ ಇಂದು ಸಂಭಾವ್ಯ ಆಟಗಾರರ ಆಯ್ಕೆ: ಮುಂಬೈಯಲ್ಲಿ ಆಯ್ಕೆ ಸಮಿತಿ ಸಭೆ ; 30 ಮಂದಿಯ ಪ್ರಾಥಮಿಕ ಪಟ್ಟಿಯಲ್ಲಿ ಯುವರಾಜ್, ಹರ್ಭಜನ್, ಗಂಭೀರ್, ಸೆಹ್ವಾಗ್,ನೆಹ್ರಾ ಸೇರ್ಪಡೆ ಸಾಧ್ಯತೆ

Pinterest LinkedIn Tumblr

cricket_________

ಮುಂಬೈ, ಡಿ.3: ಮುಂದಿನ ವರ್ಷದ ಫೆಬ್ರವರಿ 14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್‌ನಲ್ಲಿ ನಡೆಯಲಿರುವ ಹನ್ನೊಂದನೆ ಆವೃತ್ತಿಯ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ಗೆ ಭಾರತದ ಕ್ರಿಕೆಟ್ ತಂಡಕ್ಕೆ 30 ಮಂದಿ ಸಂಭಾವ್ಯ ಆಟಗಾರರನ್ನು ಗುರುವಾರ ಆಯ್ಕೆ ಮಾಡಲಾಗುವುದು.

ಮಧ್ಯಾಹ್ನ 1:00 ಗಂಟೆಗೆ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್‌ಪಾಟೀಲ್ ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ ಸಭೆ ಸೇರಲಿರುವ ಐದು ಮಂದಿ ಸದಸ್ಯರ ಆಯ್ಕೆ ಸಮಿತಿಯು ವಿಶ್ವಕಪ್‌ಗೆ ಭಾರತದ ಕ್ರಿಕೆಟ್ ತಂಡದ ಆಯ್ಕೆಗೆ ಅನುಕೂಲವಾಗುವಂತೆ 30 ಮಂದಿ ಸಂಭಾವ್ಯ ಆಟಗಾರರ ಪ್ರಾಥಮಿಕ ಪಟ್ಟಿಯನ್ನು ತಯಾರಿಸಲಿದೆ.

ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿರುವ 2011ರ ವಿಶ್ವಕಪ್ ಜಯಿಸಿದ ತಂಡದ ಸದಸ್ಯರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಆಶೀಷ್ ನೆಹ್ರಾ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯುವರಾಜ್ ಸಿಂಗ್ 2011ರ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ ವಿಶ್ವಕಪ್ ಗೆಲ್ಲುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ವಿಶ್ವಕಪ್‌ನಲ್ಲಿ ತನ್ನ ಸಾಧನೆಗಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಯುವರಾಜ್ ಸಿಂಗ್ ಫಾರ್ಮ್ ಕಳೆದುಕೊಂಡಿದ್ದಾರೆ. ಆದರೆ ಅವರನ್ನು ಪ್ರಾಥಮಿಕ ತಂಡದಲ್ಲಿ ಸೇರಿಸಿಕೊಳ್ಳಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ.

32ರ ಹರೆಯದ ಯುವರಾಜ್ ಸಿಂಗ್ ಇತ್ತೀಚೆಗೆ ನಡೆದ ವಿಜಯ್ ಹಝಾರೆ ಟ್ರೋಫಿಯಲ್ಲಿ ಒಂದು ಅರ್ಧಶತಕ ದಾಖಲಿಸಿದ್ದರು. ದೇವಧರ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಉತ್ತರ ವಲಯ ತಂಡದಲ್ಲಿ ಅವರು ಮಿಂಚಲಿಲ್ಲ. ಅವರು ಪ್ರಾಥಮಿಕ ಪಟ್ಟಿಯಲ್ಲಿ ಸ್ಥಾನ ಪಡೆದರೂ, ಅಂತಿಮ ತಂಡದಲ್ಲಿ ಅವಕಾಶ ಪಡೆಯಲು ಹೋರಾಟ ನಡೆಸಬೇಕಾಗಿದೆ. ಯಾಕೆಂದರೆ ಯುವರಾಜ್‌ಗೆ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜ ಸ್ಪರ್ಧೆಯೊಡ್ಡುತ್ತಿದ್ದಾರೆ. ಆಸ್ಟ್ರೇಲಿಯದ ವಾತಾವರಣದಲ್ಲಿ ಚೆನ್ನಾಗಿ ಆಡಿರುವ ದಾಖಲೆ ಹೊಂದಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಯುವರಾಜ್ ಸಿಂಗ್ ಅವರಂತೆ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. 36ರ ಹರೆಯದ ಸೆಹ್ವಾಗ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ. ಅವರ ದಿಲ್ಲಿ ತಂಡದ ಆರಂಭಿಕ ಪಾರ್ಟ್‌ನರ್ ಗೌತಮ್ ಗಂಭೀರ್ 2011ರ ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡಿದ್ದರು. ಗಂಭೀರ್ ಸಂಭಾವ್ಯರ ಪಟ್ಟಿಯಲ್ಲಿ ಅವಕಾಶ ಪಡೆಯುವ ಅರ್ಹತೆ ಹೊಂದಿದ್ದಾರೆ.

ಉತ್ತರ ವಲಯ ತಂಡದ ಬೌಲರ್‌ಗಳಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಎಡಗೈ ವೇಗಿ ಆಶೀಷ್ ನೆಹ್ರಾ ಪ್ರಾಥಮಿಕ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹರ್ಭಜನ್ ಸಿಂಗ್ ಇತ್ತೀಚಿನ ದಿನಗಳಲ್ಲಿ ತಂಡ ಸೇರ್ಪಡೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಆರ್.ಅಶ್ವಿನ್ ಅವರಿಗೆ ಸವಾಲಾಗಿದ್ದಾರೆ. ಅನುಭವಿ ವೇಗದ ಬೌಲರ್‌ಗಳಾದ ಝಹೀರ್ ಖಾನ್ ಮತ್ತು ಇರ್ಫಾನ್ ಪಠಾಣ್ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೆಹ್ರಾಗೆ ತಂಡ ಸೇರ್ಪಡೆಗೆ ಹಾದಿ ಸುಗಮವಾಗಿದೆ. 35ರ ಹರೆಯದ ನೆಹ್ರಾ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ವಯಸ್ಸು ಮೀರಿದ್ದರೂ ಅವರ ಪ್ರದರ್ಶನದಲ್ಲಿ ಸಮಸ್ಯೆ ಇಲ್ಲ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಿರುವ ಆಟಗಾರರು ಹಾಗೂ ಆ ಸರಣಿಗೆ ವಿಶ್ರಾಂತಿ ಪಡೆದಿದ್ದ ಮಹೇಂದ್ರ ಸಿಂಗ್ ಧೋನಿ, ಇಶಾಂತ್ ಶರ್ಮ, ವರುಣ್ ಆ್ಯರೊನ್ , ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಶಿಖರ್ ಧವನ್ ಮತ್ತು ರವೀಂದ್ರ ಜಡೇಜ ಸೇರಿದಂತೆ 14 ಮಂದಿ ಆಟಗಾರರನ್ನು ಆಯ್ಕೆ ಸಮಿತಿಯು ಪ್ರಾಥಮಿಕ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.

ಬಂಗಾಳದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಅವರು ದೇವಧರ್ ಟ್ರೋಫಿ ಟೂರ್ನಿಯಲ್ಲಿ ಪೂರ್ವ ವಲಯ ತಂಡದ ಪರ 151 ರನ್ ದಾಖಲಿಸಿ ಉತ್ತರ ವಲಯ ವಿರುದ್ಧ ಗೆಲುವಿಗೆ ನೆರವಾಗಿದ್ದರು. ಮುಂಬೈ ರಣಜಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡದ ಪರ ದಕ್ಷಿಣ ವಲಯ ವಿರುದ್ಧದ ಸೆಮಿಫೈನಲ್‌ನಲ್ಲಿ ಆಕರ್ಷಕ 80 ರನ್ ದಾಖಲಿಸಿದ್ದರು. ಮನೋಜ್ ತಿವಾರಿ ಮತ್ತು ಸೂರ್ಯಕುಮಾರ್ ಯಾದವ್ ಅವರು ಟೀಮ್ ಇಂಡಿಯಾದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಮನೀಷ್ ಪಾಂಡೆ, ಮಾಯಾಂಕ್ ಅಗರವಾಲ್, ಸೌರಾಶಿಶ್ ಲಹರಿ ಮತ್ತು ಬಾಬಾ ಅಪರಾಜಿತ್ ದೇವಧರ್ ಟ್ರೋಫಿ ಟೂರ್ನಿಯಲ್ಲಿ ಚೆನ್ನಾಗಿ ಆಡಿ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Write A Comment