
ಭವಿಷ್ಯದ ಉತ್ತಮ ನಾಗರಿಕರಾಗಲು ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಏಕಾಗ್ರತೆಯಿಂದ ನಿರಂತರ ಪ್ರಯತ್ನದೊಂದಿಗೆ ಸಾಧನೆ ಮಾಡಬೇಕಾದ ಹೊಣೆಯ ಬಗ್ಗೆ ಮಕ್ಕಳು ಅರಿತಿರಬೇಕು ಎಂಬುದಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು| ಅನನ್ಯಾ ಟಿ ಹೇಳಿದರು. ಮಕ್ಕಳೇ ಅತಿಥಿಯಾಗಿ ಮಕ್ಕಳೇ ನಿರ್ವಹಿಸಿ ಶುಕ್ರವಾರ , 14 ನವಂಬರ್ 2014 ರಂದು ಜರುಗಿದ ಸುಳ್ಯದ ಸ್ನೇಹಶಾಲೆಯ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆವರು ಮಾತನಾಡಿದರು. ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ 10ನೇ ತರಗತಿಯ ಕು| ಮಾನಸಾ ಪಿ ಇವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ‘ಸ್ವಚ್ಛ ವಿದ್ಯಾರ್ಥಿಯಿಂದ ಸ್ವಚ್ಛ ಭಾರತ ಸಾಧ್ಯ’ ಎಂಬ ಬಗ್ಗೆ 10ನೇ ತರಗತಿಯ ಶ್ರೀವತ್ಸ ಭಾರದ್ವಾಜ್ ವಿಚಾರ ಮಂಡನೆ ಮಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮದ ನಡೆದುವು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ| ಚಂದ್ರಶೇಖರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಮೊದಲಿಗೆ ಏಳನೆಯ ತರಗತಿಯ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯ ಬಳಿಕ ಕು| ಪ್ರತೀಕಾ ಎ ಪಿ (10ನೇ ತರಗತಿ ) ಸ್ವಾಗತಿಸಿ ಕು| ಅನು ಡಿ (9ನೇ ತರಗತಿ) ವಂದನಾರ್ಪಣೆಗೈದು, ಕೇಶವ ಪ್ರಸನ್ನ ( 10ನೇ ತರಗತಿ ) ಕಾರ್ಯಕ್ರಮ ನಿರೂಪಿಸಿದರು.