ಕರ್ನಾಟಕ

ಗುಂಡೂರಾವ್ ವಿರುದ್ಧದ ಭೂ ಒತ್ತುವರಿ ಆರೋಪ ಸಾಬೀತು: ಸರ್ಕಾರಿ ಭೂಮಿಯನ್ನೇ ಗುಳುಂ ಮಾಡಿದ ಸಚಿವ

Pinterest LinkedIn Tumblr

Dinesh-Gundu-Rao

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರಭಾವಿ ಸಚಿವರೊಬ್ಬರು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪ ಸಾಬೀತಾಗಿದೆ.

ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೇಳಿ ಬರುತ್ತಿದ್ದ ಆರೋಪ ಇದೀಗ ಸಾಬೀತಾಗಿದ್ದು, ಸ್ವತಃ ಬೆಂಗಳೂರು ಉತ್ತರ ವಿಭಾಗ ತಹಶೀಲ್ದಾರ್ ಬಾಳಪ್ಪ ಹಂಡಿಗುಂದಾ ಅವರು ಸಚಿವರಿಂದ ಭೂಮಿ ಒತ್ತುವರಿಯಾಗಿರುವುದನ್ನು ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಂಘಟನೆಯ ಮುಖ್ಯಸ್ಥರಾದ ಎಸ್.ಆರ್.ಹಿರೇಮಠ್ ಅವರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಈ ಕುರಿತು ಲೋಕಾಯುಕ್ತ ಅಧಿಕಾರಿಗಳಲ್ಲಿಯೂ ದೂರು ಸಲ್ಲಿಸಿದ್ದ ಅವರು, ಪ್ರಕರಣದ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ದೇವನಹಳ್ಳಿ ಬಳಿ ಇರುವ ನವರತ್ನ ಅಗ್ರಹಾರದ ಸಮೀಪದಲ್ಲಿರುವ ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ದಿನೇಶ್ ಗುಂಡೂರಾವ್ ಮತ್ತು ಅವರ ಸಂಬಂಧಿಕರು ಸುಮಾರು 47 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಹಿರೇಮಠ್ ಅವರ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ನ್ಯಾಯಾಧೀಶ ವೈ.ಭಾಸ್ಕರರಾವ್ ಅವರು, ಪ್ರಕರಣದ ತನಿಖೆ ನಡೆಸುವಂತೆ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಆ ಪ್ರಕಾರ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಇಂದು ತಮ್ಮ ಅಂತಿಮ ವರದಿಯನ್ನು ನೀಡಿದ್ದು, ವರದಿಯಲ್ಲಿ ದಿನೇಶ್ ಗುಂಡೂರಾವ್ ಮತ್ತು ಅವರ ಸಂಬಂಧಿಕರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸರಿಗೆ ಬೆಂಗಳೂರು ಉತ್ತರ ವಿಭಾಗದ ತಹಶೀಲ್ದಾರ್ ಬಾಳಪ್ಪ ಹಂಡಿಗುಂದಾ ಅವರು ಮಧ್ಯಂತರ ವರದಿ ನೀಡಿದ್ದು, ವರದಿಯಲ್ಲಿ ದಿನೇಶ್ ಗುಂಡೂರಾವ್ ಅವರು 10.09 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪೈಕಿ 5 ಎಕರೆ ಸರ್ವೇ ನಂಬರ್ 3ರಲ್ಲಿ ಮತ್ತು 5.9 ಎಕರೆ ಭೂಮಿ ಸರ್ವೇನಂಬರ್ 13ರಲ್ಲಿ ಒತ್ತುವರಿಯಾಗಿದೆ ಎಂದು ಬಾಳಪ್ಪ ಅವರು ವರದಿ ನೀಡಿದ್ದಾರೆ.

ವರದಿಯಲ್ಲಿ ದಿನೇಶ್ ಗುಂಡೂರಾವ್ ಅವರು ಸೇರಿದಂತೆ ಕುಟುಂಬಸ್ಥರಾದ ವರಲಕ್ಷ್ಮಿ ಗುಂಡೂರಾವ್, ರಾಜೇಶ್ ಗುಂಡೂರಾವ್ ಮತ್ತು ಮಹೇಶ್ ಗುಂಡೂರಾವ್ ಹೆಸರುಗಳು ಕೇಳಿಬರುತ್ತಿದ್ದು, ಇವರೆಲ್ಲರ ಹೆಸರಲ್ಲಿ ಒಟ್ಟು 47.34 ಎಕರೆ ಭೂಮಿ ಇದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಭೂಮಿಯು ಸರ್ಕಾರಿ ಸ್ವಾಮ್ಯದ ನವರತ್ನ ಅಗ್ರಹಾರದ ಬಳಿ ಇರುವ ಸರ್ವೇ ನಂಬರ್ 3 ಮತ್ತು 13ರದ್ದು ಎಂದು ತಿಳಿದುಬಂದಿದೆ.

ಪ್ರಸ್ತುತ ಸ್ಥಳೀಯ ತಹಶೀಲ್ದಾರ್ ಬಾಳಪ್ಪ ಹಂಡಿಗುಂದಾ ಅವರು ಪ್ರಕರಣ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಮತ್ತು ಅವರ ಕುಟುಂಬಸ್ಥರಿಗೆ ನೋಟಿಸ್ ಜಾರಿ ಮಾಡಿದ್ದು, ದಿನೇಶ್ ಗುಂಡೂರಾವ್ ಅವರ ಸಂಬಂಧಿಕರಾದ ಹೆಚ್.ಎನ್.ಜಮುನಾ ಅವರಿಗೂ ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಜಮುನಾ ಅವರ ಹೆಸರಿನಲ್ಲಿಯೂ ಸರ್ವೇ ನಂಬರ್ 13ರಲ್ಲಿ 17.22 ಎಕರೆ ಭೂಮಿ ಇದ್ದು, ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ತಮ್ಮ ಮಾಲೀಕತ್ವವನ್ನು ರುಜುವಾತು ಮಾಡಬೇಕು ಎಂದು ತಹಶೀಲ್ದಾರ್ ಬಾಳಪ್ಪ ಹಂಡಿಗುಂದಾ ಸೂಚಿಸಿದ್ದಾರೆ.

ದಾಖಲೆ ದೊರೆತ ಬಳಿಕ ಗುಂಡೂರಾವ್ ವಿರುದ್ಧ ಪ್ರತಿಭಟನೆ

ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಕೇಳಿಬರುತ್ತಿರುವ ಆರೋಪದ ಕುರಿತಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ತಮಗೆ ದಾಖಲೆ ದೊರೆತ ಬಳಿಕ ಗುಂಡೂರಾವ್ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಪ್ರಕರಣವನ್ನು ತಾವು ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈ ಸಂಬಂಧ ನಾವು ಈಗಾಗಲೇ ದಾಖಲೆಗಳನ್ನು ಕಲೆಹಾಕುತ್ತಿದ್ದು, ಸಮರ್ಪಕ ದಾಖಲೆಗಳು ದೊರೆತ ಬಳಿಕ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ದಿನೇಶ್ ಗುಂಡೂರಾವ್ ಅವರನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

Write A Comment