ರಾಷ್ಟ್ರೀಯ

5 ಮೀನುಗಾರರ ಗಲ್ಲು ಶಿಕ್ಷೆ ವಿಚಾರ: ಶ್ರೀಲಂಕಾಗೆ ಭಾರತ ಮನವಿ ಪತ್ರ ಸಲ್ಲಿಕೆ

Pinterest LinkedIn Tumblr

sri

ನಾಯ ಪ್ಯೀ ತಾವ್: ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಐವರು ಭಾರತೀಯ ಮೀನುಗಾರರಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ ಶ್ರೀಲಂಕಾ ಸುಪ್ರೀಂ ಕೋರ್ಟಿಗೆ ಮನವಿ ಪತ್ರ ಸಲ್ಲಿಸಿದೆ.

ಈ ಕುರಿತು ಮಯನ್ಮಾರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯೈದ್ ಅಕ್ಬರುದ್ದೀನ್, ಐವರು ಮೀನುಗಾರರ ವಿಚಾರದಲ್ಲಿ ಭಾರತದ ಪರ ಮನವಿ ಪತ್ರ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಭಾರತೀಯ ಪರ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಯನ್ಮಾರ್ನಲ್ಲಿ ನಡೆಯುತ್ತಿರುವ ಏಸಿಯಾನ್ ಮತ್ತು ಪೂರ್ವ ಏಷಿಯಾ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಅಕ್ಬರುದ್ದೀನ್, ಭಾರತೀಯ ಐವರು ಮೀನುಗಾರರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಶ್ರೀಲಂಕಾ ಹೈ ಕೋರ್ಟ್ನ ತೀರ್ಪಿನ ವಿರುದ್ದ ವಾದ ಮಂಡಿಸಲು ಭಾರತೀಯ ಪರ ಸಮರ್ಥ ವಕೀಲರನ್ನು ನೇಮಿಸಿರುವುದಾಗಿ ತಿಳಿಸಿದರು. ಕೊಲೊಂಬೊನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಮರ್ಥ ವಕೀಲರನ್ನು ನಿಯೋಜಿಸಿದೆ. ಅಲ್ಲದೇ ಶ್ರೀಲಂಕಾದ ಕಾನೂನಾತ್ಮಕ ರೀತಿಯಲ್ಲೇ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿ ವಾಪಸ್ ಕರೆತರುವ ಭರವಸೆಯನ್ನು ಅವರು ನೀಡಿದರು.

ಕೊಲಂಬೊವಿನ ಭಾರತೀಯ ರಾಯಭಾರಿ ಕಚೇರಿಯು, ಶ್ರೀಲಂಕಾ ಹೈಕೋರ್ಟ್ ನೀಡಿರುವ, 200 ಪುಟಗಳ ತೀರ್ಪಿನ ಪ್ರತಿಯನ್ನು ಪಡೆದಿದ್ದು, ಶ್ರೀಲಂಕಾ ಸುಪ್ರೀಂ ಕೋರ್ಟಿನಲ್ಲಿ ಭಾರತೀಯ ಪರ ಸಮರ್ಥ ವಾದ ಮಂಡಿಸಲು ಸಜ್ಜಾಗಿದೆ. ಐವರು ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.

ತಮಿಳುನಾಡು ಮೂಲದವರಾದ ಎಮರ್ಸನ್, ಪಿ.ಆಗಸ್ಟಸ್, ಆರ್.ವಿಲ್ಸನ್, ಕೆ.ಪ್ರಸಾದ್ ಮತ್ತು ಜೆ.ಲಾಂಗ್ಲೆಟ್ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ 2011 ರಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಶ್ರೀಲಂಕಾ ನ್ಯಾಯಾಲಯ ಕಳೆದ ಅಕ್ಟೋಬರ್ 30 ರಂದು ಈ ಐವರು ಮೀನುಗಾರರಿಗೆ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಮರಣದಂಡನೆ ವಿಧಿಸಿತು.

ಭಾರತೀಯ ಮೀನುಗಾರರ ವಿರುದ್ದದ ಗಲ್ಲು ಶಿಕ್ಷೆ ವಿಚಾರ ತಮಿಳುನಾಡಿನಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಅಲ್ಲದೆ ತಮಿಳುನಾಡಿನ ರಾಮೇಶ್ವರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೂ ಕಾರಣವಾಯಿತು.

Write A Comment