ಕರ್ನಾಟಕ

ಹುಡ್ ಹುಡ್ ಚಂಡಮಾರುತ ಹಿನ್ನೆಲೆ : ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್

Pinterest LinkedIn Tumblr

Loadshedding

ಬೆಂಗಳೂರು, ಅ.13: ಹುಡ್ ಹುಡ್ ಚಂಡಮಾರುತದ ಹಿನ್ನೆಲೆಯಲ್ಲಿ ಸುರಿದ ಮಳೆಯ ಅಬ್ಬರದಿಂದ ತತ್ತರಿಸಿದ ಬೆನ್ನಲ್ಲೇ ಈಗ ರಾಜ್ಯದ ಜನತೆ ಲೋಡ್ ಶೆಡ್ಡಿಂಗ್‌ನಿಂದ ಕಗ್ಗತ್ತಲಿನಲ್ಲಿರಬೇಕಾದ ದುಃಸ್ಥಿತಿ ಎದುರಾಗಿದೆ.

ಆಂಧ್ರ ಪ್ರದೇಶದ ಕರಾವಳಿಯಿಂದ ಕರ್ನಾಟಕ ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ 1,700 ಮೆಗಾವ್ಯಾಟ್ ವಿದ್ಯುತ್ತಿನ ಪೈಕಿ ಕೇವಲ 1000 ಮೆಗಾವ್ಯಾಟ್ ವಿದ್ಯುತ್ ಸರಬರಾಜಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಿಂದ ಶೇ.18ರಷ್ಟು ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದ ಆನಂದರಾವ್ ವೃತ್ತದಲ್ಲಿನ ಕೆಪಿಟಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಶೇ.25ರಷ್ಟು ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ದಿನಕ್ಕೆ 2 ಗಂಟೆಗಳ ಕಾಲ ಲೋಡ್‌ಶೆಡ್ಡಿಂಗ್, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿನಿತ್ಯ 4 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಮಾಹಿತಿ ನೀಡಿದ ಸಚಿವರು, ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ 10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ 5ಗಂಟೆಗಳ ಕಾಲ ಮಾತ್ರ ವಿದ್ಯುತ್ ಸರಬರಾಜು ಮಾಡಲಿದ್ದು, ಮೂರು ಗಂಟೆಗಳ ಕಾಲ ಮಾತ್ರ 3 ಫೇಸ್ ವಿದ್ಯುತ್ ನೀಡಲಾಗುವುದು. ಅಲ್ಲದೆ, 4 ರಿಂದ 6 ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿನ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆಯಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಲೋಡ್ ಶೆಡ್ಡಿಂಗ್ ಮಾಡುವುದನ್ನು ಬಿಟ್ಟು ಇಂಧನ ಇಲಾಖೆಗೆ ಬೇರೆ ಮಾರ್ಗವಿಲ್ಲ ಎಂದು ಕೈಚೆಲ್ಲಿದ ಶಿವಕುಮಾರ್, ಲೋಡ್ ಶೆಡ್ಡಿಂಗ್ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

Write A Comment