ವಿಶಾಖಪಟ್ಟಣ/ಭುವನೇಶ್ವರ, ಅ.13: ‘ಹುಡ್ಹುಡ್’ಚಂಡಮಾರುತವು ರವಿವಾರ ಮಧ್ಯಾಹ್ನಕ್ಕೆ ಮೊದಲು ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣವನ್ನು ಬಂದು ಅಪ್ಪಳಿಸಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಂಡಮಾರುತದಿಂದಾಗಿ ಆಂಧ್ರಪ್ರದೇಶದಲ್ಲಿ ಮೂವರು ಹಾಗೂ ಒಡಿಶಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
ಚಂಡಮಾರುತವು ಗಂಟೆಗೆ 170ರಿಂದ 180 ಕಿ.ಮೀ. ವೇಗವನ್ನು ಪಡೆದುಕೊಂಡಿದ್ದು, ವಿಶಾಖಪಟ್ಟಣ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದೆ. ಚಂಡಮಾರುತದ ಅಂತಿಮ ದಿಕ್ಕು ಆಂಧ್ರ ಪ್ರದೇಶದ ದಕ್ಷಿಣಕ್ಕೆ ತಿರುಗಿಕೊಂಡಿದ್ದರಿಂದ ಒಡಿಶಾ ರಾಜ್ಯವು ಬಹುತೇಕವಾಗಿ ಚಂಡಮಾರುತದ ಪ್ರಭಾವದಿಂದ ತಪ್ಪಿಸಿಕೊಂಡಿದೆ.
ಚಂಡಮಾರುತವು ರವಿವಾರ ಮಧ್ಯಾಹ್ನಕ್ಕೆ ಮುನ್ನ ವಿಶಾಖಪಟ್ಟಣ ಕರಾವಳಿ ತೀರಕ್ಕೆ ಬಂದು ಅಪ್ಪಳಿಸಿತು. ಇದಕ್ಕೆ ಮೊದಲು ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ-ಮಳೆ ಕಂಡು ಬಂದಿತ್ತು. ಇದರಿಂದ ವ್ಯಾಪಕ ಪ್ರಮಾಣದಲ್ಲಿ ಮರಗಳು, ವಿದ್ಯುತ್-ದೂರವಾಣಿ ಕಂಬಗಳು ಬಿದ್ದಿವೆ. ಟೆಲಿಕಾಂ ಗೋಪುರಗಳಿಗೆ ಹಾನಿಯಾಗಿವೆ. ಕರಾವಳಿಯಲ್ಲಿ ಹೆಚ್ಚಾಗಿ ಮನೆಮಾರುಗಳಿಗೆ ಹಾನಿಯುಂಟಾಗಿದೆ.
ವಿಶಾಖಪಟ್ಟಣದಲ್ಲಿ ಚಂಡಮಾರುತದ ತೀವ್ರ ಪರಿಣಾಮಗಳು ಕಂಡುಬಂದಿದೆ. ನಗರದ ಹಲವು ಪ್ರದೇಶಗಳಲ್ಲಿ ರಸ್ತೆಯ ಮೇಲೆ ವಿದ್ಯುತ್ ಕಂಬಗಳು, ಕೇಬಲ್ಗಳು, ಜಾಹೀರಾತು ಫಲಕಗಳು ಉರುಳಿ ಬಿದ್ದಿರುವುದು ಕಂಡುಬಂದಿದೆ.
ಕರಾವಳಿ ಪ್ರದೇಶದ ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್ನಂತಹ ವಾತಾವರಣವಿತ್ತು. ಜನರು ತಮ್ಮ ಮನೆಗಳಿಂದ ಹೊರಗೆ ಬರಲಿಲ್ಲ. ವಿಶಾಖಪಟ್ಟಣ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿ ಸಂಪರ್ಕ ಸಾಧನಗಳು ಅಸ್ತವ್ಯಸ್ತಗೊಂಡಿವೆ.
ಶ್ರೀಕಾಕುಳಂ, ವಿಶಾಖಪಟ್ಟಣ, ವಿಜಯನಗರಂ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಭತ್ತ ಮತ್ತು ಇನ್ನಿತರ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಹಾನಿಯ ನಿರ್ದಿಷ್ಟ ವಿವರಗಳು ಇನ್ನೂ ಲಭ್ಯವಿಲ್ಲ.
ವ್ಯಾಪಕ ಸುರಕ್ಷಾ ಕ್ರಮ:
ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಕರಾವಳಿಯ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಿಂದ 90,013 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ಒಡಿಶಾದ ಕರಾವಳಿ ಜಿಲ್ಲೆಗಳಿಂದ (ಮುಖ್ಯವಾಗಿ ಗೋಪಾಲಪುರ) 68 ಸಾವಿರ ಜನರನ್ನು ಬೇರೆಡೆಗೆ ಕಳುಹಿಸಲಾಗಿತ್ತು. ಅಲ್ಲದೆ ಇಲ್ಲಿನ ಜಿಲ್ಲಾಡಳಿತಗಳು ವ್ಯಾಪಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಮೃತಪಟ್ಟವರ ಪ್ರಮಾಣ ಕಡಿಮೆ ಇತ್ತು.
ಚಂಡಮಾರುತದ ತೀವ್ರ ಪರಿಣಾಮಕ್ಕೆ ಒಳಗಾಗಿರುವ ವಿಶಾಖಪಟ್ಟಣದಲ್ಲಿ 13 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪಡೆಯ ಮುಖ್ಯಸ್ಥ ಒ.ಪಿ.ಸಿಂಗ್ ದಿಲ್ಲಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಮೊದಲು ನಗರದಲ್ಲಿ ಆರು ತಂಡಗಳನ್ನು ನಿಯೋಜಿಸಲಾಗಿತ್ತು. ಐವರು ಸಾವು: ಚಂಡಮಾರುತಕ್ಕೆ ಸಂಬಂಧಿಸಿದ ಪರಿಣಾಮಗಳಿಂದ ಆಂಧ್ರ ಪ್ರದೇಶದಲ್ಲಿ ಮೂವರು ಹಾಗೂ ಒಡಿಶಾದಲ್ಲಿ ಇಬ್ಬರು ಸೇರಿ ಒಟ್ಟು ಐವರು ಮೃತಪಟ್ಟಿದ್ದಾರೆ.
ವಿಶಾಖಪಟ್ಟಣ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿ ಮರ ಉರುಳಿ ಬಿದ್ದು ಇಬ್ಬರು ಹಾಗೂ ಗೋಡೆ ಕುಸಿದು ಬಿದ್ದು ಒಬ್ಬರು ಮೃತರಾಗಿದ್ದಾರೆ ಎಂದು ಆಂಧ್ರ ಪ್ರದೇಶದ ಮುಖ್ಯ ಕಾರ್ಯದರ್ಶಿ ಐವಿಆರ್ ಕೃಷ್ಣ ರಾವ್ ತಿಳಿಸಿದ್ದಾರೆ.
ಒಡಿಶಾದ ಪುರಿ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯೊಂದರ ರಕ್ಷಣೆಗೆ ತೆರಳಿದ್ದ ಮೀನುಗಾರರೊಬ್ಬರು ತೆರೆಯ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಮಹಾಪಾತ್ರ ತಿಳಿಸಿದ್ದಾರೆ.
ಕೇಂದ್ರಪಾರ ಜಿಲ್ಲೆಯ ಸತ್ಭಯ ಎಂಬಲ್ಲಿ ಶನಿವಾರ ಜನರ ರಕ್ಷಣೆಯಲ್ಲಿ ತೊಡಗಿದ್ದ ದೋಣಿಯೊಂದು ನೀರಿನಲ್ಲಿ ಮಗುಚಿ ಬಿದ್ದು ಒಂಬತ್ತು ವರ್ಷ ಪ್ರಾಯದ ಬಾಲಕಿ ಮೃತಪಟ್ಟಿದ್ದಳು.
