ಕರ್ನಾಟಕ

ಅತ್ಯಾಚಾರ ದೂರು ವಜಾಕ್ಕೆ ಹೈಕೋರ್ಟ್‌ ನಕಾರ; ರಾಘವೇಶ್ವರಶ್ರೀಗೆ ಜಾಮೀನು

Pinterest LinkedIn Tumblr

raagavesh

ಬೆಂಗಳೂರು: ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮ­ಚಂದ್ರಾ­ಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವ­ರಿಗೆ ಇಲ್ಲಿನ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾ­ಲಯ 30 ದಿನಗಳ ಷರತ್ತುಬದ್ಧ ಜಾಮೀನು ನೀಡಿದೆ.

‘ರಾಘವೇಶ್ವರ ಸ್ವಾಮೀಜಿ ನನ್ನ ತಾಯಿಗೆ ಲೈಂಗಿಕ ದೌರ್ಜನ್ಯ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಗಾಯಕಿ ಪುತ್ರಿ ಬೆಂಗಳೂರಿನ ಗಿರಿನಗರ ಠಾಣೆಗೆ ದೂರು ಕೊಟ್ಟಿದ್ದರು. ಈ ದೂರು ರದ್ದು­ಗೊಳಿ­ಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿ­ಸಿದ್ದರು. ಆದರೆ, ಗುರುವಾರ ಬೆಳಿಗ್ಗೆ ನ್ಯಾಯ­ಮೂರ್ತಿಗಳು ಈ ಅರ್ಜಿಯನ್ನು ವಜಾಗೊಳಿಸಿದ ಆದೇಶ ಪ್ರಕಟಿಸಿದರು. ಇದರಿಂದ ಬಂಧನದ ಭೀತಿಗೆ ಒಳಗಾದ ಸ್ವಾಮೀಜಿ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ತಕ್ಷಣವೇ ಸೆಷನ್ಸ್‌ ನ್ಯಾಯಾಲಯದ ಮೊರೆ ಹೋದರು.

ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮುದಿಗೌಡರ್ ವಾದ ಪ್ರತಿವಾದ ಆಲಿಸಿ­ದರು. ನಂತರ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 438ರ ಪ್ರಕಾರ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು ಎಂದು ಅಭಿಪ್ರಾಯ ಪಟ್ಟು ಕೆಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದರು. ಸ್ವಾಮೀಜಿ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದಿಸಿದರು.

ತಡೆಯಾಜ್ಞೆ ತೆರವು: ತಮ್ಮ ವಿರುದ್ಧ ದಾಖಲಿಸಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ರಾಘವೇಶ್ವರರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತು. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಬಂಧನಕ್ಕೆ ನೀಡಲಾಗಿದ್ದ ಮಧ್ಯಾಂತರ ತಡೆಯಾಜ್ಞೆ ತೆರವು­ಗೊಳಿಸಿತು. ಈ ಸಂಬಂಧ ಕಾಯ್ದಿರಿ­ಸಲಾಗಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ಎನ್.­ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು ಗುರುವಾರ ಬೆಳಿಗ್ಗೆ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಪ್ರಕಟಿಸಿತು.

ತನಿಖಾಧಿಕಾರಿ ಸ್ವತಂತ್ರ: ‘ಅತ್ಯಾಚಾರ ದೂರಿನ ಪ್ರಕರಣವು ಗಂಭೀರವಾಗಿದ್ದು ಇದನ್ನು ವಜಾ ಮಾಡಲು ಸಾಧ್ಯವಿಲ್ಲ. ಈ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಯು ಸಂಪೂರ್ಣ ಸ್ವತಂತ್ರ’ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ.‘ಯಾವುದೇ ಅಪರಾಧಿಕ ಪ್ರಕರಣ­ದಲ್ಲಿ ಆರೋಪಿಯನ್ನು ಪೊಲೀಸರು ಬಂಧಿ­­ಸದೇ ವಿಚಾರಣೆ ನಡೆಸಬಹುದು. ಇದೆಲ್ಲಾ ತನಿಖಾಧಿಕಾರಿಯ ವಿವೇ­ಚನೆಗೆ ಬಿಟ್ಟ ಹಾಗೂ ಸನ್ನಿವೇಶಕ್ಕೆ ಅನು­ಗುಣ­ವಾಗಿ ನಡೆಯುವ ವಿಚಾರ­ವಾ­ಗಿರು­ತ್ತದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ನ್ಯಾಯಶಾಸ್ತ್ರಕ್ಕೆ ಅಪರಿಚಿತ ನಡೆ: ‘ರಾಘ­ವೇಶ್ವರ ಸ್ವಾಮೀಜಿಗಳನ್ನು ಬ್ಲಾಕ್ ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ ರಾಮಕಥಾ ಗಾಯಕ ದಂಪತಿ­­ಯನ್ನು ಹೊನ್ನಾವರದ ಮ್ಯಾಜಿ­ಸ್ಟ್ರೇಟ್‌ ನ್ಯಾಯಾಲಯ ನ್ಯಾಯಾಂಗ ಬಂಧ­ನಕ್ಕೆ ಒಪ್ಪಿ­ಸಿತ್ತು. ಈ ಸಂದರ್ಭ­ದಲ್ಲಿ ಮ್ಯಾಜಿ­ಸ್ಟ್ರೇಟ್‌ ಎದುರು ಗಾಯಕಿ ದೂರು ನೀಡಿ, ಸ್ವಾಮೀಜಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋ­ಪಿಸಿದ್ದರು. ದೂರನ್ನು ಸ್ವೀಕ­ರಿ­ಸಿದ ಮ್ಯಾಜಿಸ್ಟ್ರೇಟ್‌ ಲ­ಕೋಟೆ­ಯಲ್ಲಿ ಭದ್ರ­ವಾಗಿ ಇರಿಸಿದ್ದರು. ಮ್ಯಾಜಿ­­ಸ್ಟ್ರೇಟ್‌ ಅವರ ಈ ನಡೆ ನಿಜಕ್ಕೂ ಆಶ್ಚ­ರ್ಯಕರ ಮತ್ತು ಅಪರಾಧಿಕ ನ್ಯಾಯ­ಶಾಸ್ತ್ರಕ್ಕೆ ಅಪರಿಚಿತ ವರ್ತನೆ­ಯಾ­ಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ಷರತ್ತುಗಳು
*ರಾಘವೇಶ್ವರರು ಆದಷ್ಟು ಬೇಗ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು.
*₨ 2 ಲಕ್ಷ ಮೊತ್ತದ ಬಾಂಡ್‌ ಮತ್ತು ಇಬ್ಬರ ವೈಯಕ್ತಿಕ ಭದ್ರತೆ ನೀಡ-­ಬೇಕು. ವಿದೇಶ ಪ್ರಯಾಣ ಕೈಗೊಳ್ಳು­ವಂತಿಲ್ಲ.
*ದೂರುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಬಾರದು.
*ಸಾಕ್ಷ್ಯಾಧಾರ ನಾಶಕ್ಕೆ ಯತ್ನಿಸಬಾರದು.
*ಈ ಷರತ್ತುಗಳನ್ನು ಉಲ್ಲಂಘಿಸಿದರೆ ಕೂಡಲೇ ಜಾಮೀನು ಆದೇಶ ರದ್ದುಪಡಿಸಲಾಗುವುದು.

Write A Comment