ಕರ್ನಾಟಕ

ಜಯಲಲಿತಾಗೆ ಜಾಮೀನು ನಿರಾಕರಣೆ ಪರಪ್ಪನ ಅಗ್ರಹಾರಕ್ಕೆ ಆಕ್ರೋಶಿತ ಅಭಿಮಾನಿಗಳ ದಂಡು

Pinterest LinkedIn Tumblr

jayalalitha-in-jail

ಆನೇಕಲ್, ಅ.7: ಇಂದು ಬೆಂಗಳೂರು ಹೈಕೋರ್ಟ್ ಎ.ವಿ.ಚಂದ್ರಶೇಖರ್ ಏಕಸದಸ್ಯ ಪೀಠದ ಮುಂದೆ ಜಯಾ ಹಾಗೂ ಉಳಿದ ಮೂವರ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆ ಪರಪ್ಪನ ಅಗ್ರಹಾರದಲ್ಲಿ ನೆರೆದ ಜಯಾಭಿಮಾನಿಗಳ ಆಕ್ರೋಶ ಮತ್ತು ಸಂತಸ ಒಮ್ಮಿಂದೊಮ್ಮೆಲೆ ವ್ಯಕ್ತವಾಯಿತು.

ಮಧ್ಯಾಹ್ನದವರೆಗೂ ಪುರಚ್ಚಿ ತಲೈವಿ ವಾಳ್ಗೆ ಎನ್ನುತ್ತಾ ಕರುಣಾನಿಧಿಗೆ ಧಿಕ್ಕಾರ ಕೂಗುತ್ತಾ ಮೆರವಣಿಗೆ ಹೊರಟ ದಂಡು ಪೊಲೀಸರ ಸುಪರ್ದಿಯಲ್ಲಿ ಆಗಿಂದಾಗ್ಗೆ ಕ್ಯಾಮೆರಾಗಳ ಮುಂದೆ ಪೌರುಷ ವ್ಯಕ್ತಪಡಿಸುತ್ತಿದ್ದರು. ಮಧ್ಯಾಹ್ನದ ಮೇಲೆ ಜಯಾಗೆ ಜಾಮೀನು ಸಿಕ್ಕಿದ ಸುದ್ದಿ ತಿಳಿದು ಅಮ್ಮಾ ಅಭಿಮಾನಿ ಮಹಿಳಾ ಮಣಿಗಳು ಬೀದಿಗಿಳಿದು ಕುಣಿದು ಕುಪ್ಪಳಿಸಿದರು. ಉಳಿದ ಅಭಿಮಾನಿಗಳು ಬೀದಿಯಲ್ಲಿ ಉರುಳು ಸೇವೆ ಸಲ್ಲಿಸಿದರು. ಆನಂತರ ಜಾಮೀನು ಅರ್ಜಿ ನಿರಾಕರಣೆ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳ ಮುಖದಲ್ಲಿ ಮಡುಗಟ್ಟಿದ ವೌನ ಇಂಗುತಿಂದ ಮಂಗನಂತಾಗಿತ್ತು. ಅತ್ತಿಬೆಲೆ ಗಡಿ ಭಾಗದಲ್ಲಿ ಅಮ್ಮನಿಗೆ ಜಾಮೀನು ಸಿಕ್ಕಿದ ಸುದ್ದಿ ತಿಳಿದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಆನಂತರ ಜಾಮೀನು ನಿರಾಕರಣೆಯಾದದ್ದು ಜಯಾ ಅಭಿಮಾನಿಗಳ ಅಕ್ರೋಶಕ್ಕೆ ಕಾರಣವಾಯಿತು.

ಬೆಳಗ್ಗೆಯಿಂದ ಶಶಿಕಲಾ ತಂಗಿ ಮಗ ಪೆರು ಮಾಳ್(ಇದುವರೆಗೂ ಜಯಾಗೆ ಊಟದ ವ್ಯವಸ್ಥೆ ನೋಡುಕೊಳ್ಳುತ್ತಿದ್ದವ), ಜಯಾರ ವೈದ್ಯ ಡಾ.ಶಾಂತರಾಂ ಮತ್ತು ತಮಿಳುನಾಡು ಉಪ ಸ್ಪೀಕರ್ ತಂಬಿದೊರೈ ಜೈಲಿನ ಅಂಗಳಕ್ಕೆ ಆಗಮಿಸಿದರಾದರು ಅಮ್ಮನ ದರ್ಶನ ಸಿಗಲಿಲ್ಲ. ಉಳಿದಂತೆ ಯಾವೊಬ್ಬ ತಮಿಳುನಾಡು ಜನಪ್ರತಿನಿಧಿಯೂ ಜೈಲಿನ ಕಡೆ ಮುಖ ಮಾಡಿರಲಿಲ್ಲ. ಗಡಿಭಾಗ ಅತ್ತಿಬೆಲೆಯಲ್ಲಿ ತಮಿಳುನಾಡಿನಿಂದ ಒಳಬರುವ ಪ್ರತಿ ಬಸ್ಸ್‌ನ್ನು ಪೊಲೀಸರು ತಪಾಸಣೆ ನಡೆಸಿ, ಜಯಾ ಅಭಿಮಾನಿಗಳನ್ನು ಹಿಮ್ಮೆಟ್ಟಿಸಿದರು. ಪ್ರತಿ ಐದು ಕಿಲೋ ಮೀಟರ್‌ಗೆ ಚೆಕ್‌ಪೋಸ್ಟ್ ನಿರ್ಮಿಸಿ ಅಭಿಮಾನಿಗಳನ್ನು ತಡೆದಿದ್ದರು.

ಒಂಬತ್ತು ಕಡೆಯಲ್ಲಿ ತಮಿಳುನಾಡಿನಿಂದ ನುಸುಳಿಬರುವ ಎಐಎಡಿಎಂಕೆ ಮತ್ತು ಜಯಾ ಅಭಿಮಾನಿಗಳ ವಾಹನ ಮತ್ತು ಬೈಕ್‌ಗಳನ್ನು ತಡೆಗಟ್ಟಿದ್ದರು. ಜೈಲಿನ ಮುಖ್ಯರಸ್ತೆ ಹಾಗೂ ಅಭಿಮಾನಿಗಳು ನಿಂತಿರುವೆಡೆ ವಾಟರ್ ಜೆಟ್ ಮತ್ತು ಪೊಲೀಸ್ ಗಸ್ತು ಹಾಕುವುದರಿಂದ ಅಭಿಮಾನಿಗಳು ಸಾಕಷ್ಟು ಜಾಗ ಕಾಲಿ ಮಾಡಿದ್ದರು. ಹಾಗಾಗಿ ಹೆಚ್ಚಿನ ಹೋರಾಟದ ಗಿಮಿಕ್‌ಗಳು ನಡೆಯಲಿಲ್ಲ. ಕೇವಲ ವೀಡಿಯೊ ಕ್ಯಾಮೆರಾಗಳ ಮುಂದೆಯಷ್ಟೇ ಮೈಪರೆಚಿಕೊಳ್ಳುತ್ತಿದ್ದ ಬೆರಳೆಣಿಕೆಯಷ್ಟು ಮಂದಿ ಇಂದು ತಮ್ಮ ಪ್ರತಾಪವನ್ನು ತೋರದೆ ಹಿಂದಿರುಗಿದರು. ಆಗಾಗ ಟಿವಿಯಲ್ಲಿ ಸುದ್ದಿ ತಿಳಿದು ಜಯಾ ಕುಸಿದು ಬಿದ್ದರು ಎಂಬೆಲ್ಲಾ ಕೆಲ ವಿದ್ಯುನ್ಮಾನ ಮಾಧ್ಯಮಗಳ ಸುಳ್ಳು ವದಂತಿ ಜಯಾ ಅವರ ನೈಜ ಅಭಿಮಾನಿಗಳನ್ನು ರೊಚ್ಚಿಗೇಳಿಸುತ್ತಿತ್ತು. ಈ ಬಗ್ಗೆ ಜೈಲ್ ಸೂಪರಿಡೆಂಟ್‌ನ್ನು ಸಂಪರ್ಕಿಸಿದಾಗ ಸುಳ್ಳು ವದಂತಿ ಎಂದು ಮಾಹಿತಿಯಿತ್ತ ಮೇಲೆ ಅಭಿಮಾನಿ ವಲಯ ಸುಮ್ಮನಾಗಿತ್ತು.

Write A Comment