ಕರ್ನಾಟಕ

‘ಭೂ ಒತ್ತುವರಿ ತೆರವು’;ವಿಶೇಷ ನ್ಯಾಯಾಲಯ ಸ್ಥಾಪನೆ: ಸಿಎಂ

Pinterest LinkedIn Tumblr

siddu22

ಉಪವಾಸ ಮುಷ್ಕರವನ್ನು ಕೈ ಬಿಡುವಂತೆ ಮನವಿ
ಬೆಂಗಳೂರು, ಅ.7: ಬೆಂಗಳೂರು ಸುತ್ತಮುತ್ತ ಒತ್ತುವರಿಯಾಗಿರುವ ಸುಮಾರು 34 ಸಾವಿರ ಎಕರೆ ಸರಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸರಕಾರಿ ಭೂ ಒತ್ತುವರಿಗೆ ಸಂಬಂಧಿಸಿದಂತೆ ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ವರದಿಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು ಸುತ್ತಮುತ್ತ 34 ಸಾವಿರ ಎಕರೆ ಭೂಮಿ ಒತ್ತುವರಿಯಾಗಿರುವ ಕುರಿತು ಎ.ಟಿ.ರಾಮಸ್ವಾಮಿ ಈಗಾಗಲೇ ವರದಿ ನೀಡಿದ್ದರೂ ಇದುವರೆಗೆ ಸರಕಾರ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಅವರು ಹೇಳಿದರು.

ಆದರೆ, ನಮ್ಮ ಸರಕಾರ ಒತ್ತುವರಿಯಾಗಿರುವ ಭೂಮಿಯನ್ನು ಮರು ವಶಕ್ಕೆ ತೆಗೆದುಕೊಳ್ಳಲು ಮೂವರು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಿದೆ. ಈ ಅಧಿಕಾರಿಗಳು ಆದಷ್ಟು ಶೀಘ್ರದಲ್ಲೆ ಒತ್ತುವರಿಯಾಗಿರುವ ಸರಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಒತ್ತುವರಿಯಾಗಿರುವ ಭೂಮಿಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಆದುದರಿಂದ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯೊಂದಿಗೆ ಚರ್ಚಿಸಿ ಸರಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು. ಸರಕಾರದ ದಿಟ್ಟ ತೀರ್ಮಾನವನ್ನು ಹೋರಾಟಗಾರರು ಒಪ್ಪುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ನೀಡುವ ಎಲ್ಲ ಸಲಹೆಗಳನ್ನು ಸ್ವೀಕರಿಸಲು ಸರಕಾರಕ್ಕೆ ಮುಕ್ತ ಮನಸ್ಸಿದೆ. ಆದುದರಿಂದ, ಅವರು, ಎ.ಟಿ.ರಾಮಸ್ವಾಮಿ, ರವಿಕೃಷ್ಣಾ ರೆಡ್ಡಿ ಸೇರಿದಂತೆ ಇನ್ನಿತರರು ಕೈಗೊಂಡಿರುವ ಉಪವಾಸ ಮುಷ್ಕರವನ್ನು ಕೈ ಬಿಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಖಾಲಿ ನಿವೇಶನ, ‘ಬಿ’ ಖಾತೆ ಮನೆಗಳಿಗೆ ತೆರಿಗೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನ ಹಾಗೂ ‘ಬಿ’ ಖಾತೆ ಮನೆಗಳಿಗೂ ತೆರಿಗೆ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಸರ್ವೇ ಕಾರ್ಯವು ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ತದನಂತರ, ಖಾಲಿ ನಿವೇಶನ ಹಾಗೂ ‘ಬಿ’ ಖಾತೆ ಹೊಂದಿರುವ ಮನೆಗಳಿಗೂ ತೆರಿಗೆ ವಿಧಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Write A Comment