ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ; ಚಪ್ಪಲಿ ಧರಿಸಿ ಪುಷ್ಪಾರ್ಚನೆ ಮಾಡಿಲ್ಲ

Pinterest LinkedIn Tumblr

siddu

ಬೆಂಗಳೂರು: ಮೈಸೂರು ದಸರಾ ಜಂಬೂ­ಸವಾರಿ ವೇಳೆ ತಾವು ಚಪ್ಪಲಿ ಧರಿಸಿಕೊಂಡು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿರು­ವು­ದಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿ­ಗಳು ಸತ್ಯಕ್ಕೆ ದೂರವಾದವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಮ್ಮ ಫೇಸ್‌ಬುಕ್‌ ಖಾತೆಯಲ್ಲೂ ಮಾಹಿತಿ ನೀಡಿದ್ದಾರೆ. ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಚಪ್ಪಲಿ ಧರಿಸಿರ­ಲಿಲ್ಲ ಎಂಬುದನ್ನು ಖಚಿತ­ಪಡಿ­ಸುವ ಛಾಯಾ­ಚಿತ್ರ­ಗ­ಳನ್ನೂ ತಮ್ಮ ಫೇಸ್‌­­ಬುಕ್‌ ಖಾತೆ­­ಯಲ್ಲಿ ಪ್ರಕಟಿಸಿದ್ದಾರೆ.

‘ನಾಡದೇವತೆ ಚಾಮುಂಡೇಶ್ವರಿ ದೇವಿಯ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ನಾಡಿನ ಜನರ ಮನಸ್ಸಿಗೆ ನೋವು ಉಂಟುಮಾ­ಡುವ ಯಾವುದೇ ಕೆಲಸವನ್ನು ಮಾಡಿಲ್ಲ ಮತ್ತು ಮಾಡು­ವುದಿಲ್ಲ. ಇಂತಹ ವಿಷಯ­ದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡ­ಬಾರದು. ಹಬ್ಬದ ಸಂದ­ರ್ಭ­ದಲ್ಲಿ ಸಂತ­ಸದ ವಾತಾವರಣವನ್ನು ಹಾಳುಗೆಡವು­ವುದು ಸಮಾಜದ ದೃಷ್ಟಿ­ಯಿಂದ ಒಳಿ­ತಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾನು ಜಂಬೂಸವಾರಿಗೆ ಚಾಲನೆ ನೀಡಲು ತೆರಳಿದ್ದಾಗ ಕಪ್ಪು ಬಣ್ಣದ ಶೂ ಮತ್ತು ಬಿಳಿ ಬಣ್ಣದ ಸಾಕ್ಸ್‌ ಧರಿಸಿದ್ದೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ವೇದಿಕೆ ಏರುವಾಗ ಶೂಗ­ಳನ್ನು ಕುರ್ಚಿಯ ಬಳಿಯೇ ಬಿಟ್ಟಿದ್ದೆ. ವೇದಿಕೆ ಮೇಲೆ ಇದ್ದಾಗ ನಾನು ಸಾಕ್ಸ್‌ ಧರಿಸಿದ್ದೆ. ಇದನ್ನು ತಪ್ಪಾಗಿ ಬಿಂಬಿಸಿದ ಕೆಲ­ವರು ಶೂ ಧರಿಸಿಕೊಂಡು ಪುಷ್ಪಾ­ರ್ಚನೆ ಮಾಡಿದ್ದೇನೆ ಎಂದು ಪ್ರಚಾರ ಮಾಡಿ­ದ್ದಾರೆ’ ಎಂದು ಮುಖ್ಯಮಂತ್ರಿಯವರು ತಮ್ಮ ಫೇಸ್‌­ಬುಕ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Write A Comment