
ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿರುವ ಜೆ. ಜಯಲಲಿತಾ ಅವರು ತಮ್ಮ ಸಾಕುಮಗ ವಿ.ಎನ್. ಸುಧಾಕರನ್ ಅವರ ಮದುವೆಗೆ ಬರೋಬ್ಬರಿ ₨ 6.45 ಕೋಟಿ ಖರ್ಚು ಮಾಡಿದ್ದರು!
ಇಷ್ಟು ದೊಡ್ಡ ಮೊತ್ತವನ್ನು ಜಯಲಲಿತಾ ಪಾವತಿಸಿಲ್ಲ. ಸುಧಾಕರನ್ ಅವರ ಮಾವನ ಮನೆಯವರು (ಪತ್ನಿಯ ತಂದೆ ಮನೆ) ಈ ಮೊತ್ತದಲ್ಲಿ ದೊಡ್ಡ ಪಾಲನ್ನು ಪಾವತಿಸಿದ್ದಾರೆ ಎಂದು ಜಯಲಲಿತಾ ಪರ ವಕೀಲರು ವಾದಿಸಿದ್ದರು. ಆದರೆ, ಈ ವಾದಕ್ಕೆ ಸೊಪ್ಪು ಹಾಕದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೇಲ್ ಕುನ್ಹ ಅವರು, ‘ಜಯಲಲಿತಾ ಅವರೊಬ್ಬರೇ ಮದುವೆಯ ಅಷ್ಟೂ ಖರ್ಚನ್ನು ಭರಿಸಿದ್ದರು ಎಂಬುದನ್ನು ಸಾಕ್ಷ್ಯಗಳು ಹೇಳುತ್ತಿವೆ’ ಎಂದು 1136 ಪುಟಗಳ ಆದೇಶದಲ್ಲಿ ಬರೆದಿದ್ದಾರೆ.
ಯಾವುದಕ್ಕೆ ಎಷ್ಟು ಖರ್ಚು?: 1995ರ ಸೆಪ್ಟೆಂಬರ್ 10ರಂದು ನಡೆದ ಸುಧಾಕರನ್ ಮದುವೆ ಪೆಂಡಾಲ್ ಹಾಕಿಸಲು ಮಾಡಿದ ಖರ್ಚೇ ₨ 5.21 ಕೋಟಿ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಲ್ಲದೆ, ಊಟ, ನೀರು ಮತ್ತು ಬಂದವರಿಗೆ ತಾಂಬೂಲ ನೀಡಲು ₨ 1.14 ಕೋಟಿ ಖರ್ಚು ಮಾಡಲಾಗಿತ್ತು.
ಮದುವೆಗೆ 34 ಟೈಟಾನ್ ಕೈಗಡಿಯಾರ ಖರೀದಿಸಲಾಗಿತ್ತು. ಇದಕ್ಕೆ ₨ 1.34 ಲಕ್ಷ ವ್ಯಯಿಸಲಾಯಿತು. ಮದುವೆಗಾಗಿ ವಿಶೇಷ ಬಟ್ಟೆ ಹೊಲಿಸಲು ₨ 1.26 ಲಕ್ಷ ಖರ್ಚು ಮಾಡಲಾಯಿತು. ಬೆಳ್ಳಿಯ 100 ತಟ್ಟೆಗಳನ್ನು ಖರೀದಿಸಲು ₨ 4 ಲಕ್ಷ ಖರ್ಚು ಮಾಡಲಾಯಿತು. ಬೆಳ್ಳಿ ತಟ್ಟೆಯ ಖರ್ಚನ್ನು ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ಭರಿಸಿದ್ದರು. 56 ಸಾವಿರ ಆಮಂತ್ರಣ ಪತ್ರವನ್ನು ಅಂಚೆ ಮೂಲಕ ಕಳುಹಿಸಲು ₨ 2.24 ಲಕ್ಷ ಪಾವತಿಸಲಾಗಿತ್ತು. ಕೆಲವೊಂದು ಖರ್ಚುಗಳಿಗೆ ಹಣವನ್ನು ಚೆಕ್ ಮೂಲಕ ಅಂದಿನ ಮುಖ್ಯಮಂತ್ರಿಗಳ (ಜಯಲಲಿತಾ) ನಿವಾಸದಿಂದಲೇ ಪಾವತಿಸಲಾಗಿತ್ತು.
ವಿಶೇಷ ಜಾಹೀರಾತು: ಸಾಕುಮಗನ ಮದುವೆ ಸಮಾರಂಭ ಹೇಗೆ ನಡೆಯಿತು ಎಂಬ ಬಗ್ಗೆ ಜಯಲಲಿತಾ ಅವರು 1995ರ ಸೆ. 11ರಂದು ಕೆಲವು ದಿನಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿದ್ದರು. ‘ಎಐಎಡಿಎಂಕೆ ಪಕ್ಷದ ಅಸಂಖ್ಯ ಸದಸ್ಯರ ಪಾಲಿಗೆ ಈ ಕಾರ್ಯಕ್ರಮ ಜಾತ್ರೆಯಂತೆ ಆಗಿತ್ತು. ಈ ಜಾಹೀರಾತನ್ನು ನಾನು ಅರ್ಪಿಸುತ್ತಿರುವ ವೈಯಕ್ತಿಕ ಧನ್ಯವಾದ ಎಂದು ಭಾವಿಸಬೇಕು’ ಎಂಬ ಒಕ್ಕಣೆ ಜಾಹೀರಾತಿನಲ್ಲಿ ಇತ್ತು. ಇದರ ಕೊನೆಯಲ್ಲಿ ‘ಜಯಲಲಿತಾ, ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ’ ಎಂದು ದಾಖಲಿಸಲಾಗಿತ್ತು.
‘ಈ ಜಾಹೀರಾತನ್ನು ಜಯಲಲಿತಾ ಅವರು ನೀಡಿದ್ದಲ್ಲ. ಅದು ಸರ್ಕಾರದ ಜಾಹೀರಾತು’ ಎಂಬ ವಾದವನ್ನು ಸಾಕ್ಷಿಗಳು ಅಲ್ಲಗಳೆದಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದು ಸರ್ಕಾರಿ ಜಾಹೀರಾತು ಆಗಿದ್ದರೆ, ‘ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ’ ಎಂಬ ಉಲ್ಲೇಖ ಇರುತ್ತಿರಲಿಲ್ಲ. ‘ಮುಖ್ಯಮಂತ್ರಿ’ ಎಂದು ಮಾತ್ರ ಬರೆದಿರುತ್ತಿತ್ತು ಎಂದು ಸಾಕ್ಷಿಗಳು ಹೇಳಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಜಾಹೀರಾತಿಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು.
ಸುಧಾಕರನ್ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ವಿಚಾರದಲ್ಲಿ 64 ಸಾಕ್ಷಿಗಳು ಪ್ರತಿಕೂಲವಾಗಿ ಪರಿಣಮಿಸಿದರು. ಆದರೆ ಇವರು ನೀಡಿದ ಹೇಳಿಕೆಗಳನ್ನೆಲ್ಲ ‘ಪ್ರತಿಕೂಲ’ ಎಂದು ಪರಿಗಣಿಸಲು ಆಗದು. ಈ ಸಾಕ್ಷಿಗಳಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿ. ಇವೆರಲ್ಲ ಮುಖ್ಯಮಂತ್ರಿಗಳ ನೇರ ನಿಯಂತ್ರಣದಲ್ಲಿ ಇರುತ್ತಾರೆ. ನ್ಯಾಯದಾನ ಪ್ರಕ್ರಿಯೆಯನ್ನು ತಲೆಕೆಳಗು ಮಾಡಲು ಆರೋಪಿಗಳು ಯತ್ನಿಸಿದ ಕಾರಣ ಪ್ರಕರಣದ ವಿಚಾರಣೆಯನ್ನು ಈ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂಬುದನ್ನು ಗಮನಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.