ಕರ್ನಾಟಕ

12 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ನೈಸರ್ಗಿಕ ವಿಸ್ಮಯ

Pinterest LinkedIn Tumblr

hoo

♦ ಪಶ್ಚಿಮ ಘಟ್ಟ ಬೆಟ್ಟ ಶ್ರೇಣಿಗಳಿಗೆ ಪ್ರವಾಸಿಗರ ದಂಡು
♦ ಮುನ್ನಾರ್‌ನಲ್ಲಿ ನೀಲಕುರಿಂಜಿ ಅರಳಿದೆ!

ತಿರುವನಂತಪುರಂ, ಅ.4: ಕೇರಳದ ಮುನ್ನಾರ್ ಸೇರಿದಂತೆ ಪಶ್ಚಿಮ ಘಟ್ಟದ ಬೆಟ್ಟ ಶ್ರೇಣಿಗಳಲ್ಲಿ ಅಪರೂಪದ ನೀಲಕುರಿಂಜಿ ಹೂಗಳು ಈಗ ಅರಳಿ ನಿಂತಿವೆ. 12 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ನೈಸರ್ಗಿಕ ವಿಸ್ಮಯ ಇದಾಗಿದ್ದು, ಈ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಪಶ್ಚಿಮ ಘಟ್ಟ ಶ್ರೇಣಿಗಳಿಗೆ ದುಂಬಿಗಳಂತೆ ಮುತ್ತಿಗೆ ಹಾಕಿದೆ.

ಈ ಪ್ರಕೃತಿ ವೈಚಿತ್ರವನ್ನು ಕಾಪಾಡುವ ಸಲುವಾಗಿ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಸಾವಿರಾರು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವನ್ಯಜೀವಿ ಕಾವಲುಗಾರರನ್ನು ರಾಜ್ಯ ಸರಕಾರ ನಿಯೋಜನೆ ಮಾಡಿದೆ.

ಪಶ್ಚಿಮ ಘಟ್ಟದ ಜೀವವೈವಿಧ್ಯದ ಅಪರೂಪದ ನೆಲೆ ಎನಿಸಿರುವ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ನೀಲಕುರಿಂಜಿ ಹೂಗಳು ಭೂಲೋಕದ ಸ್ವರ್ಗವೆಂಬಂತೆ ಅರಳಿ ನಿಂತಿವೆ. ಈ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಪ್ರಕೃತಿ ಆರಾಧಕರು ಈ ಪ್ರವಾಸಿ ತಾಣಕ್ಕೆ ಆಗಮಿಸುತ್ತಿದ್ದಾರೆ.

ವೈಜ್ಞಾನಿಕವಾಗಿ ‘ಸ್ಟ್ರೊಬಿಲಾಂಥೆಸ್ ಕುಂಥಿಯಾನಾ’ ಎಂದು ಕರೆಯಲಾಗುವ ಈ ಹೂಗಳು ಇಡುಕ್ಕಿ ಜಿಲ್ಲೆಯ ಮಟ್ಟುಪೆಟ್ಟಿ, ದೇವಿಕುಲಂ, ಕುಂದಾಲ ಮತ್ತು ಥೆನಿಮಲ ಬೆಟ್ಟ ಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಪಶ್ಚಿಮ ಘಟ್ಟ ಪ್ರದೇಶದ ಅತಿ ವಿಶಿಷ್ಟವಾದ ಶೋಲಾ ಕಾಡುಗಳಲ್ಲಿ ಹೂಗಳು ಕಂಡು ಬಂದಿವೆ.

ನೀಲಕುರಿಂಜಿ ಹೂಗಳು ಅರಳಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ರಾಜ್ಯದ ಅರಣ್ಯ ಸಚಿವ ರಾಧಾಕೃಷ್ಣನ್ ವನ್ಯಜೀವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಹೂಗಳನ್ನು ಕಿತ್ತು ಹಾಳು ಮಾಡುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವರು ಈ ಆದೇಶ ನೀಡಿದ್ದಾರೆ.

ಗಾಂಧಿ ಜಯಂತಿ, ನವರಾತ್ರಿ, ಬಕ್ರೀದ್ ಹಬ್ಬಗಳು ಒಟ್ಟಾಗಿ ಬಂದಿರುವ ಹಿನ್ನೆಲೆಗಳಲ್ಲಿ ರಜಾದಿನಗಳನ್ನು ಅನುಭವಿಸುತ್ತಿರುವ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಮುನ್ನಾರ್ ಪ್ರವಾಸಿ ತಾಣಕ್ಕೆ ಲಗ್ಗೆ ಹಾಕಿದ್ದಾರೆ. ಜೊತೆಗೆ ಪ್ರಕೃತಿಯ ಈ ವೈಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Write A Comment