ಕರ್ನಾಟಕ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಪ್ರಚಾರ ಕಣಕ್ಕಿಳಿಯಲಿರುವ ಸಿದ್ದರಾಮಯ್ಯ, ಖರ್ಗೆ

Pinterest LinkedIn Tumblr

siddu22

ಬೆಂಗಳೂರು, ಅ.4: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿರುವ ಸ್ಟಾರ್ ಪ್ರಚಾರಕರ ಸಾಲಿಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆ ಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಸರುಗಳ ಸೇರಿಸಿದೆ.

ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಏಕೈಕ ರಾಜ್ಯ ಕರ್ನಾಟಕ. ಆಂಧ್ರಪ್ರದೇಶದ ವಿಭಜನೆಯಿಂದಾಗಿ ಸೃಷ್ಟಿಯಾದ ಸೀಮಾಂಧ್ರ ಹಾಗೂ ತೆಲಂಗಾಣಗಳಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಕೇರಳದಲ್ಲಿ ಸಮ್ಮಿಶ್ರ ಸರಕಾರ ನಡೆಯುತ್ತಿದೆ. ಇದರಿಂದಾಗಿ, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಪ್ರಭಾವಿ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.

ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಕಾರ್ಯತಂತ್ರ ರೂಪಿಸುವಂತೆ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಸೂಚಿಸಲಾಗಿದೆ. ಎನ್‌ಸಿಪಿಯೊಂದಿಗಿನ ಮೈತ್ರಿ ಮುರಿದು ಬಿದ್ದಿರುವುದರಿಂದ ಬಿಜೆಪಿ, ಶಿವಸೇನೆ, ಎಂಎನ್‌ಎಸ್ ಅಬ್ಬರದ ನಡುವೆ ಕಾಂಗ್ರೆಸ್‌ನ ಅಸ್ತಿತ್ವವನ್ನು ಸಾಬೀತು ಪಡಿಸಬೇಕಾಗಿದೆ.

ಮಹಾರಾಷ್ಟ್ರ ವಿಧಾನಸಭೆಗೆ ಅ.15ರಂದು ಚುನಾವಣೆ ನಡೆಯಲಿದೆ. ದಸರಾ, ಬಕ್ರೀದ್ ಹಬ್ಬದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ರೋಷನ್‌ಬೇಗ್, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಡಾ.ಖಮರುಲ್ ಇಸ್ಲಾಮ್, ಡಾ.ಅಂಬರೀಶ್, ಆರ್.ವಿ.ದೇಶಪಾಂಡೆ, ಎಚ್.ಆಂಜನೇಯ, ದಿನೇಶ್‌ಗುಂಡೂ ರಾವ್, ಕೃಷ್ಣ ಭೈರೇಗೌಡ ಸೇರಿದಂತೆ ಇನ್ನಿತರ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೆ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಡಾ.ಎಂ.ವೀರಪ್ಪಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಇನ್ನಿತರ ಪ್ರಮುಖರನ್ನು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಹೈಕಮಾಂಡ್ ಕರೆ ನೀಡಿದೆ.

ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ವೇಳೆ ವಿದರ್ಭ ಪ್ರದೇಶದಲ್ಲಿನ ರೈತರ ಒಲವಿಗೆ ಪಾತ್ರರಾಗಿದ್ದ ಎಸ್.ಎಂ.ಕೃಷ್ಣರನ್ನು ಆ ಭಾಗದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇದಲ್ಲದೆ, ಗಡಿ ಪ್ರದೇಶಗಳಲ್ಲಿನ ಕನ್ನಡಿಗರನ್ನು ಆಕರ್ಷಿಸಲು ವಸತಿ ಅಂಬರೀಶ್‌ರನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸಿಕೊಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Write A Comment