ಕರ್ನಾಟಕ

ಬೆಂ.ನಗರದಲ್ಲಿ 26 ವರ್ಷಗಳ ಬಳಿಕ ದಾಖಲೆಯ ಮಳೆ;‘ಮಳೆ ಅನಾಹುತ ತಡೆಗೆ ವಿಶೇಷ ಕಾರ್ಯಪಡೆ’ ರಾಜಕಾಲುವೆ ಒತ್ತುವರಿ ತೆರವಿಗೆ ಕಠಿಣ ಕ್ರಮ

Pinterest LinkedIn Tumblr

Siddu11s

ಬೆಂಗಳೂರು, ಸೆ. 26: ಬೆಂಗಳೂರು ನಗರದಲ್ಲಿ ಮಳೆ ಅನಾಹುತ ತಡೆ ಹಾಗೂ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ‘ಕಾರ್ಯಪಡೆ’ ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೇಯರ್ ಶಾಂತಕುಮಾರಿ, ಆಯುಕ್ತ ಲಕ್ಷ್ಮಿ ನಾರಾಯಣ್ ಸೇರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತುರ್ತುಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಮಳೆ ಅನಾಹುತ ತಡೆಗಟ್ಟಲು ತಕ್ಷಣವೇ ರಾಜ್ಯ ಸರಕಾರದಿಂದ ಬಿಬಿಎಂಪಿ 50 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದ ಸಿದ್ದರಾಮಯ್ಯ, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಕೂಡ ಹಣವನ್ನು ಈ ಕಾರ್ಯಕ್ಕೆ ವೆಚ್ಚ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಇಪ್ಪತ್ತಾರು ವರ್ಷಗಳ ಬಳಿಕ ಮೊತ್ತ ಮೊದಲಬಾರಿಗೆ ನಗರದಲ್ಲಿ ದಾಖಲೆಯ 132 ಮಿ.ಮೀ ಮಳೆ ಬಿದ್ದ ಪರಿಣಾಮ ನಗರ ಆನೇಪಾಳ್ಯ, ಮೈಸೂರು ರಸ್ತೆಯಲ್ಲಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ನಾಯಂಡಹಳ್ಳಿ, ಕಿನೋ ಚಿತ್ರಮಂದಿರ, ಶ್ರೀನಗರ ಹಾಗೂ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಅನಾಹುತ ಸೃಷ್ಟಿಯಾಗಿದ್ದು, ಪಾಲಿಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ.

ತಗ್ಗು ಪ್ರದೇಶಗಳಲ್ಲಿನ 127ಕ್ಕೂ ಹೆಚ್ಚ ಮನೆಗಳಿಗೆ ನೀರು ನುಗ್ಗಿದ್ದು, ಆ ಪೈಕಿ 2 ಮನೆಗಳು ನೆಲಕಚ್ಚಿವೆ. 28 ಮರಗಳು ನೆಲಕ್ಕುರುಳಿದ್ದು, 20 ವಿದ್ಯುತ್ ಕಂಬಗಳು ಬಿದ್ದಿವೆ. ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆತ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೃತಪಟ್ಟಿದ್ದಾನೆಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ, ಬಿಡಿಎ, ಬಿಡಬ್ಲೂಎಸ್‌ಎಸ್‌ಬಿ, ಬಿಎಂಆರ್‌ಡಿಎ, ಅಗ್ನಿಶಾಮಕ, ಪೊಲೀಸ್, ಬೆಸ್ಕಾ ಅಧಿಕಾರಿಗಳು, ಬೆಂ.ನಗರ ಜಿಲ್ಲಾಧಿಕಾರಿ ಮಳೆ ಅನಾಹುತ ತಡೆಗೆ ಕಾರ್ಯಪಡೆಯಲ್ಲಿ ಇರಲಿದ್ದಾರೆ ಎಂದ ಅವರು, ಮಳೆ ಅನಾಹುತ ತಡೆಗೆ ಈ ಕಾರ್ಯಪಡೆ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲಿದೆ ಎಂದರು.

ನಿನ್ನೆ ಸುರಿದ ಮಳೆಯಿಂದಾಗಿ ಸುಮಾರು 60ರಿಂದ 70 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆಯೆಂದು ಅಂದಾಜಿಸಲಾಗಿದ್ದು, ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಕೂಡಲೇ ಪರಿಹಾರ ನೀಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ರಾಜಕಾಲುವೆ ಒತ್ತುವರಿ ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಬಿಬಿಎಂಪಿಗೆ ತಾನು ಖರ್ಚು ಮಾಡುವಷ್ಟು ಆದಾಯ ಬರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಪಾಲಿಕೆ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದ ಅವರು, 2,500 ಕೋಟಿ ರೂ. ತೆರಿಗೆ ಸಂಗ್ರಹಿಸಲು ಸೂಚಿಸಲಾಗಿದೆ. ನಿಶ್ಚತ ತೆರಿಗೆ ಸಂಗ್ರಹಿಸಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಇದೇ ವೇಳೆ ಎಚ್ಚರಿಸಿದರು.

ರಾಜಕಾಲುವೆ, ಕಂದಾಯ ಭೂಮಿ ಸೇರಿದಂತೆ ಸರಕಾರಿ ಭೂ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಿದ್ದರೂ ಯಾರೊಬ್ಬರ ಮರ್ಜಿಗೂ ಒಳಗಾಗದೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಸರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸಭೆಯಲ್ಲಿ ವಾರ್ತಾ ಸಚಿವ ರೋಷನ್ ಬೇಗ್, ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಲೋಕೋಪಯೋಗಿ ಸಚಿವ ಡಾ.ಮಹದೇವಪ್ಪ. ಆಹಾರ ಸಚಿವ ದಿನೇಶ್ ಗುಂಡೂರಾವ್, ಮೇಯರ್ ಶಾಂತಕುಮಾರಿ, ಆಯುಕ್ತ ಲಕ್ಷ್ಮಿನಾರಾಯಣ್ ಸೇರಿದಂತೆ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

Write A Comment