ರಾಷ್ಟ್ರೀಯ

ಸಚಿವರು ಗುಡಿಸುವುದಕ್ಕಾಗಿ ಕಸ ತಂದು ಹಾಕಿದರು!

Pinterest LinkedIn Tumblr

minister__

ಹೊಸದಿಲ್ಲಿ, ಸೆ.26: ತಾನು ಸಾರ್ವಜನಿಕ ಸ್ಥಳದಲ್ಲಿರುವ ಕಸವನ್ನು ಹೆಕ್ಕುವ ಚಿತ್ರಗಳು ಮಾಧ್ಯಮಗಳಲ್ಲಿ ಬರಬೇಕೆಂದು ಸಚಿವರೊಬ್ಬರು ಆಸೆಪ್ಟಟ್ಟರು. ಅವರ ಈ ಆಸೆಯನ್ನು ನೆರವೇರಿಸುವುದಕ್ಕಾಗಿ ನೈರ್ಮಲ್ಯ ಕೆಲಸಗಾರರು ಇಲ್ಲಿನ ಕೆಂಪು ಕೋಟೆಯ ಹೊರಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಮುದ್ದೆಯಾದ ಕಾಗದದ ತುಂಡುಗಳನ್ನು ಎಸೆದರು!

ಈ ಪೂರ್ವ ನಿಗದಿತ ಕಸ ಚೆಲ್ಲುವುದು ಹಾಗೂ ಸಚಿವರು ಅದನ್ನು ಬಳಿಕ ಹೆಕ್ಕುವ ಕಾರ್ಯಕ್ರಮವನ್ನು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಏರ್ಪಡಿಸಿದ್ದವು.

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ಸಹಾಯಕ ಸಚಿವ ಶ್ರೀಪಾದ ನಾಯಕ್ ಸಮಾರಂಭದಲ್ಲಿ ಮಾತನಾಡುತ್ತಿರುವಾಗ, ನೈರ್ಮಲ್ಯ ಕೆಲಸಗಾರರು ಬಳಸಿದ ನೀರಿನ ಬಾಟಲಿಗಳು ಮತ್ತು ಕಾಗದದ ತುಂಡುಗಳನ್ನು ರಸ್ತೆಯಲ್ಲಿ ಬಿಸಾಡಿದರು. ಈ ಸ್ಥಳವನ್ನು ಇದೇ ಕೆಲಸಗಾರರು ಈ ಮೊದಲು ಶುಚಿಗೊಳಿಸಿದ್ದರು.

ಸಚಿವರು ತನ್ನ ಭಾಷಣವನ್ನು ಮುಗಿಸುತ್ತಿದ್ದಂತೆಯೇ, ಇನ್ನಷ್ಟು ಕಸವನ್ನು ತಂದು ಚೆಲ್ಲುವಂತೆ ನೈರ್ಮಲ್ಯ ಕೆಲಸಗಾರರಿಗೆ ಆದೇಶ ನೀಡಲಾಯಿತು. ಯಾಕೆಂದರೆ, ಆ ಸ್ಥಳ ಸಾಕಷ್ಟು ಕೊಳಕು ಎಂಬಂತೆ ಕಂಡುಬಂದಿರಲಿಲ್ಲ. ಕಾರ್ಯಕ್ರಮವನ್ನು ಆಯೋಜಿಸಿದ್ದ ಅಧಿಕಾರಿಗಳು ಕಸ ಹರಡುವ ಕಾರ್ಯಕದ ಮೇಲುಸ್ತುವಾರಿ ವಹಿಸಿದರು.

ಸಚಿವರು ಭಾಷಣ ಮುಗಿಸಿದ ಕೂಡಲೇ ಅವರ ಕೈಗೆ ಪೊರಕೆಯೊಂದನ್ನು ನೀಡಲಾಯಿತು. ಈ ಸ್ಥಳದಲ್ಲಿ ಮಹತ್ತರ ಬದಲಾವಣೆ (ಸ್ವೀಪಿಂಗ್ ಚೇಂಜ್) ತರುವ ಆತ್ಮವಿಶ್ವಾಸದಿಂದ ಅವರು ಪೊರಕೆಯನ್ನು ಝಳಪಿಸಿದರು.

ನಿಬಿಡ ಪ್ರವಾಸಿ ಸ್ಥಳವಾದ ಕೆಂಪು ಕೋಟೆ ಸುತ್ತಮುತ್ತಲ ಪ್ರದೇಶವನ್ನು ಸಿಬ್ಬಂದಿ ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸುತ್ತಾರೆ ಎಂದು ಎಎಸ್‌ಐ ಸಿಬ್ಬಂದಿಯೊಬ್ಬರು ಹೇಳುತ್ತಾರೆ. ‘‘ಇಂದು ಈ ಸ್ಥಳವನ್ನು ನಾವು ಮಧ್ಯಾಹ್ನ ಒಂದು ಗಂಟೆಗೆ ಸ್ವಚ್ಚಗೊಳಿಸಿದ್ದೆವು. ಬಳಿಕ ಸಚಿವರ ಭೇಟಿಗಾಗಿ ಸಂಜೆ ನಾಲ್ಕು ಗಂಟೆಗೆ ನೀರಿನ ಬಾಟಲಿ ಮತ್ತು ಇತರ ಕಸಗಳನ್ನು ಆ ಸ್ಥಳದಲ್ಲಿ ಹರಡುವಂತೆ ನಮಗೆ ಸೂಚಿಸಲಾಯಿತು’’ ಎಂದು ಅವರು ಹೇಳಿದರು.

ಬಳಿಕ ಸಚಿವರ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆಯಿತು. ಸಚಿವರನ್ನು ಕ್ಯಾಮರಾಮನ್‌ಗಳು ಮತ್ತು ಸಾಮಾನ್ಯ ಸಂದರ್ಶಕರು ಸುತ್ತುವರಿದರು. ಮಿರುಗುವ ಕುರ್ತಾ ಧರಿಸಿರುವ ಈ ವ್ಯಕ್ತಿ ಏನು ಮಾಡಲು ಹೊರಟಿದ್ದಾರೆ ಎಂಬ ಕುತೂಹಲ ಸಂದರ್ಶಕರದ್ದು.

Write A Comment