ಕರ್ನಾಟಕ

ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳಿಗೆ ರಜೆಯಿಲ್ಲ: ಮೇಯರ್ ಶಾಂತಕುಮಾರಿ

Pinterest LinkedIn Tumblr

mayor___

ಬೆಂಗಳೂರು, ಸೆ.26: ಮಳೆಗಾಲ ಮುಗಿಯುವವರೆಗೂ ಬಿಬಿಎಂಪಿಯ ಯಾವ ಅಧಿಕಾರಿಯು ರಜೆ ತೆಗೆದು ಕೊಳ್ಳುವಂತಿಲ್ಲವೆಂದು ಮೇಯರ್ ಶಾಂತಕುಮಾರಿ ಕಟ್ಟಾಜ್ಞೆ ಹೊರಡಿಸಿದ್ದಾರೆ. ನಗರದಲ್ಲಿ ಜ.25ರ ರಾತ್ರಿ ಸುರಿದ ಭಾರಿ ಮಳೆಗೆ ನಗರದಲ್ಲಾದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ಕಚೇರಿಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗುವ ಹಾನಿಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಐದು ದಿನಗಳಿಂದ ನಗರದಲ್ಲಿ ಸುರಿದ ಮಳೆಯಿಂದಾಗಿ ಆಗಿರುವ ಅನಾಹುತಗಳಿಗೆ ನಾನು ಮತ್ತು ಪಾಲಿಕೆ ಸದಸ್ಯರು ಜನತೆಯಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದೇವೆ. ಇಂತಹ ಪರಿಸ್ಥಿತ ಪುನರಾವರ್ತನೆಯಾದರೆ, ಸಂಬಂಧಪಟ್ಟ ಜಂಟಿ ಆಯುಕ್ತರು, ಸಹಾಯಕ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿಯರ್‌ಗಳು ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅನಾಹುತಗಳ ಕುರಿತು ಯಾರೆ ದೂರು ನೀಡಿದರೂ ತಕ್ಷಣವೆ ಅಧಿಕಾರಿಗಳು ಸ್ಪಂದಿಸಬೇಕು. ಒಂದು ನಿಮಿಷವೂ ಕಾಲಾಹರಣ ಮಾಡುವಂತಿಲ್ಲ. ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಮಾಡಿ ಜನರ ಅನುಮತಿ ಪಡೆದು ವಾಪಸ್ ಬರಬೇಕು. ತಪ್ಪಿದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿ ಹೇಳಿದರು.

ತುರ್ತು ಕಾಮಗಾರಿಗಾಗಿ ಪ್ರತಿ ವಾರ್ಡ್‌ಗೆ 20ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆದರೂ ಮಳೆಗಾಲುವೆ ಹಾಗೂ ಚರಂಡಿಗಳಲ್ಲಿ ಹೂಳು ತೆಗೆದಿಲ್ಲ. ಮೋರಿ ಬದಿಯ ಕಸವನ್ನು ತೆಗೆದಿಲ್ಲ. ಇಂತಹ ಗುರುತರವಾದ ಕರ್ತವ್ಯಲೋಪ ಎಸಗಿ, ಜನತೆಯ ಜೀವದ ಜೊತೆ ಆಟವಾಡುತ್ತಿರುವುದು ಅಧಿಕಾರಿಗಳಿಗೆ ಶೋಭೆ ತರುವಂತಹದ್ದಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲುವೆಗಳಲ್ಲಿ ಹೂಳೆತ್ತಲು 18 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರೂ ಕ್ರಮ ಕೈಗೊಳ್ಳದ ಮುಖ್ಯ ಎಂಜಿನಿಯರ್ ಅನಂತಸ್ವಾಮಿಯವರ ವಿರುದ್ಧ ಮೇಯರ್ ಏರಿದ ಧ್ವನಿಯಲ್ಲಿ ‘ಇಂತಹ ಅಧಿಕಾರಿಗಳು ಬಿಬಿಎಂಪಿಗೆ ಬೇಕಾಗಿಲ್ಲ. ತಕ್ಷಣವೆ ಅವರನ್ನು ವರ್ಗಾಯಿಸಿ’ ಎಂದು ಆಯುಕ್ತರಿಗೆ ಸೂಚಿಸಿದರು. ಸಭೆಯಲ್ಲಿ ಉಪ ಮೇಯರ್ ಕೆ.ರಂಗಣ್ಣ , ಆಡಳಿತ ಪಕ್ಷದ ನಾಯಕ ಅಶ್ವತ್ಥ್‌ನಾರಾಯಣ, ಜೆಡಿಎಸ್ ನಾಯಕ ಆರ್.ಪ್ರಕಾಶ್ ಮತ್ತಿತರರಿದ್ದರು.

Write A Comment