ಮನೋರಂಜನೆ

ಬೆಳ್ಳಿ ಬರ ನೀಗಿಸಿದ ಶೂಟರ್‌ಗಳು ಏಷ್ಯನ್ ಗೇಮ್ಸ್‌ನ ಏಳನೆ ದಿನ: ಈಜುಗಾರ ಸೆಜ್ವಾಲ್‌ಗೆ ಕಂಚು

Pinterest LinkedIn Tumblr

VIJAY-KUMA

ಇಂಚೋನ್, ಸೆ.26: ಹದಿನೇಳನೆ ಏಷ್ಯನ್ ಗೇಮ್ಸ್‌ನ ಏಳನೆ ದಿನವಾಗಿರುವ ಇಂದು ಭಾರತಕ್ಕೆ ಶೂಟಿಂಗ್ ರೇಂಜ್‌ನಿಂದ ಬೆಳ್ಳಿ ಬಂದಿದ್ದರೆ, ಈಜುಕೊಳದಿಂದ ಕಂಚು ದೊರೆತಿದೆ.

ಪುರುಷರ 25 ಮೀಟರ್ ಸೆಂಟರ್ ಫೈರ್ ಟೀಮ್ ಇವೆಂಟ್‌ನಲ್ಲಿ ಪೆಂಬಾ ತಮಾಂಗ್, ಗುರ್‌ಪ್ರೀತ್ ಸಿಂಗ್ ಮತ್ತು ವಿಜಯ್ ಕುಮಾರ್ ತಂಡ ಎರಡನೆ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದೆ. ಈಜುಪಟು ಸಂದೀಪ್ ಸೆಜ್ವಾಲ್ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಫೈನಲ್‌ನಲ್ಲಿ ತೃತೀಯ ಸ್ಥಾನದೊಂದಿಗೆ ಕಂಚು ಎಗರಿಸಿದರು.

ಇದರೊಂದಿಗೆ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಪಡೆದಿರುವ ಪದಕಗಳ ಸಂಖ್ಯೆಯನ್ನು 17ಕ್ಕೆ ಏರಿಸಿದೆ. 1ಚಿನ್ನ ,2 ಬೆಳ್ಳಿ ಮತ್ತು 14 ಕಂಚು ಗಿಟ್ಟಿಸಿಕೊಂಡು ಭಾರತ ಪದಕ ಪಟ್ಟಿಯಲ್ಲಿ 16ನೆ ಸ್ಥಾನ ಪಡೆದಿದೆ.

ಶೂಟಿಂಗ್‌ನಲ್ಲಿ ಭಾರತಕ್ಕೆ 8 ಪದಕ (1ಚಿನ್ನ, 1ಬೆಳ್ಳಿ, 6 ಕಂಚು) ಸಿಕ್ಕಿದೆ. ಇಂದು ನಡೆದ ಸ್ಪರ್ಧೆಯಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ವಿಜಯ್ ಕುಮಾರ್ ನೇತೃತ್ವದ ತಂಡ 1740 ಸ್ಕೋರ್ ದಾಖಲಿಸಿ ಬೆಳ್ಳಿ ಪಡೆಯಿತು. ಚೀನದ ಪುರುಷರ ತಂಡ ಭಾರತಕ್ಕಿಂತ 1742 ಸ್ಕೋರ್ ಸಂಪಾದಿಸಿ ಚಿನ್ನ ಎಗರಿಸಿತು.

50 ಮೀಟರ್ ರೈಫಲ್ 3 ಪೊಸಿಶನ್ ಟೀಮ್ ಫೈನಲ್ಸ್‌ನಲ್ಲಿ ಲಜ್ಜಾ ಗೋಸ್ವಾಮಿ, ಅಂಜಲಿ ಭಾಗವತ್ ಮತ್ತು ತೇಜಸ್ವಿನಿ ನೇತೃತ್ವದ ಮಹಿಳಾ ತಂಡ 6ನೆ ಸ್ಥಾನ ಪಡೆಯಿತು. 50 ಮೀಟರ್ ರೈಫಲ್ 3 ಪೊಸಿಶನ್ ವೈಯಕ್ತಿಕ ವಿಭಾಗದಲ್ಲಿ ಲಜ್ಜಾ 7ನೆ, ಅಂಜಲಿ 25ನೆ ಮತ್ತು ತೇಜಸ್ವ್ವಿನಿ 29ನೆ ಸ್ಥಾನದೊಂದಿಗೆ ಹೊರ ನಡೆದರು.

ಭಾರತದ ಸ್ಟಾರ್ ಶೂಟರ್ ಗಗನ್ ನಾರಂಗ್ ನೇತೃತ್ವದ ಪುರುಷರ ತಂಡ 50 ಮೀಟರ್ 3-ಪೊಸಿಶನ್ ಇವೆಂಟ್‌ನಲ್ಲಿ ಶನಿವಾರ ಪದಕದ ಬೇಟೆ ನಡೆಸಲಿದೆ. ಇವರ ಮೂಲಕ ಭಾರತ ಪದಕದ ನಿರೀಕ್ಷೆಯಲ್ಲಿದೆ.

ಮಿಂಚಿದ ಸೆಜ್ವಾಲ್ : ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತದ ಈಜುಗಾರರು ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಇಂದು ಸಂದೀಪ್ ಸೆಜ್ವಾಲ್ ಕಂಚು ಪಡೆಯುವ ಮೂಲಕ ಭಾರತಕ್ಕೆ ಈಜು ವಿಭಾಗದಿಂದ ಒಂದು ಕಂಚು ಸಿಕ್ಕಿದೆ.
ಹೊಸದಿಲ್ಲಿಯ 25ರ ಹರೆಯದ ಸಂದೀಪ್ ಸೆಜ್ವಾಲ್ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಇವೆಂಟ್‌ನಲ್ಲಿ 28.25 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಬಾಚಿಕೊಂಡರು. ಸ್ಕ್ವಾಷ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಫೈನಲ್ ಪ್ರವೇಶಿಸಿದ್ದು, ಚಿನ್ನದ ನಿರೀಕ್ಷೆಯಲ್ಲಿದೆ. ಶನಿವಾರ ಪದಕದ ಬೇಟೆ ನಡೆಸಲಿದೆ.

ಭಾರತದ ಮಹಿಳೆಯರ ವಾಲಿಬಾಲ್ ತಂಡ ಮಾಲ್ಡೀವ್ಸ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದೆ. ಆದರೆ ಪುರುಷರ ತಂಡ ಇರಾನ್ ವಿರುದ್ಧ ಸೋತು ಹೊರ ಬಿದ್ದಿದೆ. ಭಾರತದ ಮಹಿಳಾ ಹಾಕಿ ತಂಡ ಮಲೇಷ್ಯಾವನ್ನು 6-1 ಅಂತರದಲ್ಲಿ ಬಗ್ಗುಬಡಿದು ಸೆಮಿಫೈನಲ್ ತಲುಪಿದೆ.

ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಭಾರತದ ತಾರೆಯರ ಸ್ಪರ್ಧೆ ಕೊನೆಗೊಂಡಿತು. ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ನೆಹ್ವಾಲ್ ಚೀನಾದ ಯಿಯಾನ್ ವಾಂಗ್ ವಿರುದ್ಧ 21-18, 9-21, 7-21 ಅಂತರದಲ್ಲಿ ಸೋತಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪಿ.ಕಶ್ಯಪ್ ಮತ್ತು ಕೆ.ಶ್ರೀಕಾಂತ್ ಸೋಲು ಅನುಭವಿಸಿದರು. ಆರ್ಚರಿಯಲ್ಲಿ ಭಾರತದ ಪುರುಷರ ತಂಡ ಎಲಿಮಿನೇಶನ್ ಸುತ್ತಿನಲ್ಲಿ ಹಾಂಕಾಂಗ್ ತಂಡಕ್ಕೆ ಶರಣಾಗಿದೆ. ರಿಕರ್ವ್ ಸೆಮಿಫೈನಲ್‌ನಲ್ಲಿ ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ ಸೋತಿದೆ. ವೈಯಕ್ತಿಕ ವಿಭಾಗದಲ್ಲಿ ಲಕ್ಮ್ಮೀರಾಣಿ ಮಾಝಿ ಮತ್ತು ಅತನು ದಾಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ. ದೀಪಿಕಾ ಕುಮಾರಿ ಮತ್ತು ಜಯಂತ್ ತಾಲೂಕ್ದಾರ್ ಎಮಿಮಿನೇಶನ್ ರೌಂಡ್‌ನಲ್ಲಿ ನಿರ್ಗಮಿಸಿದ್ದಾರೆ.

ಟೆನಿಸ್‌ನ ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾ ಮತ್ತು ಪ್ರಾರ್ಥನಾ ಥಾಂಬ್ರೆ ಹಾಗೂ ಪುರುಷರ ಡಬಲ್ಸ್‌ನಲ್ಲಿ ಸನಮ್ ಸಿಂಗ್ ಮತ್ತು ಸಾಕೇತ್ ಮೈನೆನಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Write A Comment