ಕರ್ನಾಟಕ

ಇಸ್ರೊ ‘ಮಂಗಳಯಾನ’ದ ಹಿಂದಿನ ಪ್ರತಿಭೆಗಳು

Pinterest LinkedIn Tumblr

India Mars Mission

ಬೆಂಗಳೂರು, ಸೆ.24: ಇಸ್ರೊದ ‘ಮಂಗಳಯಾನ’ ಯಶಸ್ಸಿನ ಹಿಂದೆ ಇಸ್ರೊ ಬಾಹ್ಯಾಕಾಶ ಸಂಸ್ಥೆಯ 14 ವಿಜ್ಞಾನಿಗಳ ಪ್ರತಿಭೆ ಮಹತ್ವದ ಕೆಲಸ ಮಾಡಿದೆ. ಮಂಗಳಯಾನ ಎಂಬುದು ಪ್ರಾಥಮಿಕವಾಗಿ ಒಂದು ತಾಂತ್ರಿಕ ಕಾರ್ಯಾಚರಣೆ. ಮಂಗಳ ಗ್ರಹದ ಭೌತಿಕ ಲಕ್ಷಣಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆಯೊಂದನ್ನು ಇಲ್ಲಿ ಒಗ್ಗೂಡಿಸಲಾಗಿದೆ.

1. ಕೆ.ರಾಧಾಕೃಷ್ಣನ್:ಇಸ್ರೊ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದಾರೆ. ಮಂಗಳಯಾನ ಕಾರ್ಯಾಚರಣೆ ಮತ್ತು ಇಸ್ರೊದ ಒಟ್ಟಾರೆ ಚಟುವಟಿಕೆಗಳ ನಾಯಕತ್ವ ಜವಾಬ್ದಾರಿಗಳನ್ನು ಅವರು ಹೊತ್ತಿದ್ದಾರೆ.

2. ಎಂ.ಅಣ್ಣಾದೊರೈ: ಮಂಗಳ ಗ್ರಹ ಪರಿಭ್ರಮಣ ಕಾರ್ಯಾಚರಣೆಯ (ಎಂಒಎಂ) ಕಾರ್ಯಕ್ರಮ ನಿರ್ದೇಶಕರು. 1982ರಲ್ಲಿ ಇಸ್ರೊಗೆ ಸೇರ್ಪಡೆಗೊಂಡಿರುವ ಅವರು, ಹಲವಾರು ದೂರ ಸಂವೇದಿ ಮತ್ತು ವಿಜ್ಞಾನ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಮಂಗಳಯಾನದ ಬಜೆಟ್ ನಿರ್ವಹಣೆ, ಬಾಹ್ಯಾಕಾಶ ನೌಕೆಯ ಜೋಡಣೆ, ಕಾರ್ಯಕ್ರಮ ವೇಳಾಪಟ್ಟಿ ಮತ್ತು ಸಂಪನ್ಮೂಲಗಳಿಗೆ ಅವರು ಜವಾಬ್ದಾರರಾಗಿದ್ದಾರೆ. ಚಂದ್ರಯಾನ-1ರ ಯೋಜನಾ ನಿರ್ದೇಶಕರಾಗಿದ್ದ ಅವರು, ಚಂದ್ರಯಾನ-2ರ ಯೋಜನಾ ನಿರ್ದೇಶಕರೂ ಆಗಿದ್ದಾರೆ.

3. ಎಸ್.ರಾಮಕೃಷ್ಣನ್: ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್‌ನ ನಿರ್ದೇಶಕರಾಗಿರುವ ಎಸ್.ರಾಮಕೃಷ್ಣನ್, ಬಾಹ್ಯಾಕಾಶ ನೌಕೆಯ ಉಡಾವಣಾ ಒಪ್ಪಿಗೆ ಮಂಡಳಿಯ ಸದಸ್ಯರಾಗಿದ್ದಾರೆ. 1972ರಲ್ಲಿ ಇಸ್ರೊಗೆ ಸೇರ್ಪಡೆಗೊಂಡಿರುವ ಅವರು, ಪಿಎಸ್‌ಎಲ್‌ವಿ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ದ್ರವೀಕೃತ ದಹನಶೀಲತೆ ಹಂತಗಳ ಅಭಿವೃದ್ಧಿಗೆ ಜವಾಬ್ದಾರರಾಗಿದ್ದ ರಾಮಕೃಷ್ಣನ್, ಉಡಾವಣಾ ವಾಹನಗಳು ಮತ್ತು ಉಡಾವಣಾ ಕಾರ್ಯಾಚರಣೆಯೊಂದಿಗೆ ಸಂಯೋಜನೆಗೆ ಕಾರಣರಾಗಿದ್ದರು. ಮಂಗಳಯಾನ ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಉಡಾವಣೆ ಮಾಡಿದ ಪಿಎಸ್‌ಎಲ್‌ವಿ ರಾಕೆಟ್ ಹೊಂದಲು ಅವರು ಜವಾಬ್ದಾರರಾಗಿದ್ದರು.

4.ಎಸ್.ಕೆ.ಶಿವಕುಮಾರ್: ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದಾರೆ. 1976ರಲ್ಲಿ ಇಸ್ರೊಗೆ ಸೇರ್ಪಡೆಯಾದರು. ಭಾರತೀಯ ಉಪಗ್ರಹ ಕಾರ್ಯಕ್ರಮದ ಹಲವಾರು ಯೋಜನೆಗಳು ಮತ್ತು ಅದರ ಕಾರ್ಯಾಚರಣೆಗೆ ಹಲವು ಬಗೆಯ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಮೊದಲ ಹಾಗೂ ದೇಶೀಯವಾಗಿ ನಿರ್ಮಿಸಲಾಗಿರುವ ‘ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ’ದ ಯೋಜನಾ ನಿರ್ದೇಶಕರಾಗಿದ್ದರು. ಉಪಗ್ರಹ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವೈಜ್ಞಾನಿಕ ಕಾರ್ಯಾಚರಣೆಗಳಿಗೆ ಉಪಗ್ರಹ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸುವುದು ಅವರ ಜವಾಬ್ದಾರಿಯಾಗಿದೆ.

5. ಪಿ.ಕುಂಞಕೃಷ್ಣನ್: ಪಿಎಸ್‌ಎಲ್‌ವಿ ಕಾರ್ಯಕ್ರಮದ ಯೋಜನಾ ನಿರ್ದೇಶಕರು. ಒಂಬತ್ತನೆ ಬಾರಿಗೆ ಕಾರ್ಯಾಚರಣೆಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 1986ರಲ್ಲಿ ಇಸ್ರೊಗೆ ಸೇರ್ಪಡೆಗೊಂಡಿರುವ ಅವರು, ಎಂಟು ಯಶಸ್ವಿ ಪಿಎಸ್‌ಎಲ್‌ವಿ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದರು. ಮಂಗಳಯಾನ ಕಾರ್ಯಾಚರಣೆಯ ಕಾರ್ಯಾಚರಣೆ ನಿರ್ದೇಶಕರಾಗಿದ್ದಾರೆ.

6. ಚಂದ್ರನಾಥನ್: ದ್ರವಇಂಧನ ದಹನಶೀಲನಾ ವ್ಯವಸ್ಥೆಯ ನಿರ್ದೇಶಕರಾಗಿದ್ದಾರೆ. 1972ರಲ್ಲಿ ಇಸ್ರೊಗೆ ಸೇರ್ಪಡೆಗೊಂಡಿರುವ ಅವರು, ಎಸ್‌ಎಲ್‌ವಿ-2 ಯೋಜನೆಯ ವಿನ್ಯಾಸ ಹಂತದಲ್ಲಿ ಕೆಲಸ ಮಾಡಿದ್ದರು. ನಂತರ ಎಸ್‌ಎಲ್‌ವಿ-3ಯ ಘನೀಕೃತ ದಹನ ಅಭಿವೃದ್ಧಿಯಲ್ಲಿ ತೊಡಗಿದ್ದರು. ಎಸ್‌ಎಲ್‌ವಿ-3, ಎಎಸ್‌ಎಲ್‌ವಿ ಮತ್ತು ಪಿಎಸ್‌ಎಲ್‌ವಿ ರಾಕೆಟ್‌ಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ.

7.ಎ.ಎಸ್.ಕಿರಣ್‌ಕುಮಾರ್: ಇಸ್ರೊ ಉಪಗ್ರಹ ಅನ್ವಯಿಕ ಕೇಂದ್ರದ ನಿರ್ದೇಶಕರಾಗಿರುವ ಕಿರಣ್‌ಕುಮಾರ್ ಅವರು 1975ರಲ್ಲಿ ಇಸ್ರೊ ಸೇವೆಗೆ ಸೇರಿದರು. ಭಾಸ್ಕರ ಟಿವಿ ಪೇಲೋಡ್‌ನಿಂದ ಹಿಡಿದು ಇತ್ತೀಚೆಗಿನ ಚಂದ್ರಯಾನ-1ರ ತನಕ ಇಲೆಕ್ಟ್ರೋ-ಆಪ್ಟಿಕಲ್ ಇಮೇಜಿಂಗ್ ಸೆನ್ಸಾರ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮಂಗಳಯಾನದ ಮೂರು ಮಹತ್ವದ ಉಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಜವಾಬ್ದಾರರಾಗಿದ್ದರು.

8.ಎಂ.ವೈ.ಎಸ್.ಪ್ರಸಾದ್: ಸತೀಶ್ ಧವನ್ ಸ್ಪೇಸ್ ಸೆಂಟರ್‌ನ ನಿರ್ದೇಶಕರಾಗಿರುವ ಪ್ರಸಾದ್ ಅವರು ರಾಕೆಟ್ ಉಡಾವಣಾ ಒಪ್ಪಿಗೆ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. 1975ರಿಂದ 1994ರ ತನಕ ಅವರು ಇಸ್ರೊದ ಉಡಾವಣಾ ವಾಹನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಎಸ್‌ಎಲ್‌ವಿ-3 ರಾಕೆಟ್‌ನ ಅಭಿವೃದ್ಧಿ ಯೋಜನೆಯಲ್ಲಿದ್ದರು. 1998ರಿಂದ 2005ರ ತನಕ ಇಸ್ರೊದ ಮಾಸ್ಟರ್ ಕಂಟ್ರೋಲ್ ಸೌಲಭ್ಯದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

9.ಎಸ್.ಅರುಣನ್: ಮಂಗಳ ಗ್ರಹ ಪರಿಭ್ರಮಣ ಕಾರ್ಯಾಚರಣೆಯ ಯೋಜನಾ ನಿರ್ದೇಶಕರು. ಬಾಹ್ಯಾಕಾಶ ನೌಕೆಯನ್ನು ನಿರ್ಮಾಣ ಮಾಡಿದ ತಂಡದ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ ನೌಕೆಯ ಹೊಸ ಸಂಪರ್ಕ ವ್ಯವಸ್ಥೆಗಳು, ದ್ರವೀಕೃತ ಎಂಜಿನ್, ಸೋಲಾರ್ ವಿದ್ಯುತ್ ಕೋಶಗಳು ಮತ್ತು ನೆವೀಗೇಶನ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಸವಾಲುಗಳು ಅವರ ತಂಡದ ಮುಂದೆ ಇದ್ದವು.

10. ಬಿ.ಜಯಕುಮಾರ್: ಪಿಎಸ್‌ಎಲ್‌ವಿ ಯೋಜನೆಯ ಸಹಯೋಜನಾ ನಿರ್ದೇಶಕರು. ರಾಕೆಟ್ ವ್ಯವಸ್ಥೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು.

11. ಎಂ.ಎಸ್.ಪನ್ನೀರಸೆಲ್ವಂ: ಶ್ರೀಹರಿಕೋಟಾದಲ್ಲಿರುವ ರಾಕೆಟ್ ಬಂದರಿನ ಮುಖ್ಯ ಜನರಲ್ ಮ್ಯಾನೇಜರ್ . ರಾಕೆಟ್ ಉಡಾವಣಾ ಕಾರ್ಯಕ್ರಮ ವೇಳಾಪಟ್ಟಿಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದರು.

12.ಎಸ್.ಅರುಣನ್: ಇಸ್ರೊದ ಮಂಗಳಯಾನ ಕಾರ್ಯಾಚರಣೆಯ ಯೋಜನಾ ನಿರ್ದೇಶಕರು.

13.ವಿ.ಕೇಶವರಾಜು: ಮಂಗಳಯಾನದ ಕಾರ್ಯಾಚರಣೆ ನಿರ್ದೇಶಕರು.

14.ವಿ.ಕೋಟೇಶ್ವರ ರಾವ್: ಇಸ್ರೊದ ವೈಜ್ಞಾನಿಕ ಕಾರ್ಯದರ್ಶಿ.

Write A Comment