ಕರಾವಳಿ

ಕೊರೋನಾ ನಿಯಂತ್ರಣದಲ್ಲಿ ಸರಕಾರ ವಿಫಲ ಆರೋಪ: ಕುಂದಾಪುರ ಶಾಸಕರ ಕಚೇರಿ‌ ಬಳಿ ಕಾಂಗ್ರೆಸ್, ಸಮಾನ ಮನಸ್ಕರ ಜನಾಗ್ರಹ

Pinterest LinkedIn Tumblr

ಕುಂದಾಪುರ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಮಾನ ಮನಸ್ಕರಾದ ಕಾಂಗ್ರೆಸ್, ಜಾತ್ಯಾತೀತ ಜನತಾ ದಳ, ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಕುಂದಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿರುವ ಕುಂದಾಪುರ ಶಾಸಕರ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಬಿಜೆಪಿಯವರದ್ದು ಪ್ರಚಾರ ಮೇಳಗಳ ಆಯೋಜನೆ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಬಿಜೆಪಿ ಸರಕಾರ ಕೇವಲ ಹೆಡ್ ಲೈನ್ ಸರಕಾರ ಮಾತ್ರವೇ ಹೊರತು ಡೆಡ್ ಲೈನ್ ಇಲ್ಲ. ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮಾಡಿ ತಾರತಮ್ಯ ಧೋರಣೆಯನ್ನು ಅನುಸರಿಸಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ. ಪ್ಯಾಕೇಜ್ ನಿಂದ ಕೈಬಿಡಲಾಗಿದ್ದ ಇತರ ಹಲವು ಶ್ರಮಿಕ ವರ್ಗ ಮತ್ತು ಕುಲ ಕಸುಬಾಧಾರಿತ ವೃತ್ತಿಯವರಿಗೆ ಪ್ಯಾಕೇಜ್ ನೀಡುವಂತೆ ಈಗಾಗಲೇ ಆಗ್ರಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಕಡೆಗಣಿಸಿರುವುದು ಈ ವರ್ಗದ ಜನರಿಗೆ ಮಾಡಿದ ವಂಚನೆಯಾಗಿದೆ. ಸರ್ಕಾರದ ಈ ಎಲ್ಲ ವೈಫಲ್ಯದ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಶಶಿಧರ್ ಹೆಮ್ಮಾಡಿ ಮಾತನಾಡಿ, ಉಡುಪಿ ಶಾಸಕ ರಘುಪತಿ ಭಟ್ ಹೊರತುಪಡಿಸಿ ಕರಾವಳಿಯ ಬೇರ್ಯಾವುದೇ ಬಿಜೆಪಿ ಶಾಸಕರು ಲಾಕ್ಡೌನ್ ವಿಚಾರದಲ್ಲಿ ಜನಸಾಮಾನ್ಯರ ಪರವಾಗಿ ಮಾತನಾಡದಿರುವುದು ದುರಂತ. ಸಂಸದರು ಕೇವಲ ಪ್ರಚಾರಕ್ಕಾಗಿ ಮಾತ್ರ ಬಂದು ಹೋಗುತ್ತಾರೆ. ರಾಜ್ಯ ಸರ್ಕಾರವು ಲಾಕ್ದೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು ವಿಧಿಸಲಾಗಿರುವ ಕಠಿಣ ಷರತ್ತುಗಳು ಮತ್ತು ನಿಯಮಗಳಿಂದಾಗಿ ಅರ್ಹರ ಕೈಸೇರಿಲ್ಲ. ಲಾಕ್ಡೌನ್ ಮಾಡುವ ಮೊದಲು ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕಿತ್ತು. ಸರಕಾರದ ಕೋವಿಡ್ ನಿಯಮಾವಳಿಯಲ್ಲಿಯೇ ಅಸ್ಪಷ್ಟತೆ ಇದೆ. ಕೊರೋನಾ ಮೂರನೇ ಅಲೆ ಬರುವ ಬಗ್ಗೆಯೂ ತಜ್ಞರು ಹೇಳುತ್ತಿದ್ದು ಮುಂದೆ ಮತ್ತೆ ಲಾಕ್ಡೌನ್ ಮಾಡುವುದಾದರೆ ಜನರ ದೈನಂದಿನ ಬದುಕಿಗೆ ಬೇಕಾದ ಅಗತ್ಯತೆಗಳು, ಆರೋಗ್ಯ ಸಂಬಂಧಿ ಸುರಕ್ಷತೆಗಳನ್ನು ಗಮನದಲ್ಲಿರಿಸಿಕೊಂಡು ಲಾಕ್ಡೌನ್ ಬಗ್ಗೆ ಮುಂದುವರಿಯಬೇಕು. ಮಾತ್ರವಲ್ಲ ಈ ಹಿಂದಿನ ಎರಡು ಲಾಕ್ಡೌನ್ ಸಂದರ್ಭದಲ್ಲಿ ಅನ್ಯಾಯವಾಗಿದ್ದು ಅದಕ್ಕಾಗಿ ಮುಂದಿನ ದಿನಗಳಲ್ಲಿ ಗಣನೀಯ ಮೊತ್ತದ ಪರಿಹಾರ ನೀಡುವ ಕೆಲಸವಾಗಬೇಕು ಎಂದರು.

ಜೆಡಿಎಸ್ ಮುಖಂಡ ಮನ್ಸೂರ್ ಇಬ್ರಾಹಿಂ, ಅಶ್ವಥ್ ಕುಮಾರ್ ಈ ಸಂದರ್ಭ ಮಾತನಾಡಿದರು.

ಪ್ರತಿಭಟನೆ ವೇಳೆ ವಿವಿಧ ಪಕ್ಷ ಹಾಗೂ ಸಂಘಟನೆಯ ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ರಫೀಕ್ ಬಿ.ಎಸ್.ಎಫ್, ಎಚ್. ಶಾಬಾನ್ ಹಂಗಳೂರು, ಎಸ್.ಎಸ್. ಹನೀಫ್, ಆಶಾ ಕರವೆಲ್ಲೋ, ಶೋಭಾ ಸಚ್ಚಿದಾನಂದ, ರೋಶನಿ ವಲಿವೆರಾ, ಮಂಜುನಾಥ್, ಚಂದ್ರಶೇಖರ ಖಾರ್ವಿ, ಅಶ್ಪಕ್ ಕೋಡಿ, ಅಬು ಮಹಮ್ಮದ್, ದೇವಕಿ ಸಣ್ಣಯ್ಯ, ಚಂದ್ರ ಅಮೀನ್, ಕೇಶವ ಭಟ್, ಅಬ್ದುಲ್ಲಾ, ರೋಶನ್ ಶೆಟ್ಟಿ, ಶಶಿರಾಜ್, ಗಣೇಶ್ ಶೇರಿಗಾರ, ಕುಮಾರ ಖಾರ್ವಿ, ಅಶೋಕ್ ಸುವರ್ಣ, ಪ್ರಭಾಕರ ಕಡ್ಗಿಮನೆ, ಅರುಣ್ ಪಟೇಲ್, ಅಭಿ ಹೇರಿಕುದ್ರು, ಗಂಗಾಧರ ಶೆಟ್ಟಿ, ದೀಪಕ್ ನಾವುಂದ, ಸುರೇಶ್ ಕೆ., ಡೋಲ್ಫಿ ಡಿಕೋಸ್ಟಾ, ನಕಾಶ್ ಕಂಡ್ಲೂರು ಮೊದಲಾದವರು ಇದ್ದರು.

Comments are closed.