ಕರಾವಳಿ

ಕುಂತ್ರೆ ನಿಂತ್ರೆ ನಿಂದೆ ಧ್ಯಾನ.. ಹಾಡು ಖ್ಯಾತಿಯ ಹಿರಿಯ ಹಿನ್ನೆಲೆ ಗಾಯಕಿ ಆರೂರು ಸರೋಜಿನಿ ಪಟ್ಟಾಭಿ ನಿಧನ

Pinterest LinkedIn Tumblr

ಮಂಗಳೂರು, ಜೂನ್.21 : ಕನ್ನಡ,ತುಳು,ಚಿತ್ರರಂಗದಲ್ಲಿ 8 ದಶಕಗಳ ಕಾಲ ನಿರ್ದೇಶಕರಾಗಿ ಹೆಸರುವಾಸಿಯಾಗಿದ್ದ ದಿ| ಆರೂರು ಪಟ್ಟಾಭಿ ಅವರ ಪತ್ನಿ ಖ್ಯಾತ ಹಾಡುಗಾರ್ತಿ ಆರೂರು ಸರೋಜಿನಿ ಪಟ್ಟಾಭಿ ( 95) ವಯೋಸಹಜತೆಯಿಂದ ಜೂ.21ರಂದು, ಚೆನ್ನೈನ ಮಂದವಳ್ಳಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

ವಿವಾಹ ಪೂರ್ವದಲ್ಲಿ “ಜಿನ್ನಿ” ಎಂದೇ ಖ್ಯಾತರಾಗಿದ್ದ ಅವರು ತುಳು ಚಿತ್ರ ಬಿಸತ್ತಿ ಬಾಬು ನ , ಓ ಲೀಲಾ, ಶಶಿಕಲಾ,ಮಾಲಾ ಓ ಚಂದ್ರಕಲಾ, ಕರಿಯಣಿ ಕಟ್ಟಂದಿ ಕಂಡನಿ ಯ ನಂದನ ತನಯ ಗೋವಿಂದನ ಸುಗಿಪು , ದಾರೆದ ಬುಡೆದಿ ಚಿತ್ರದ ಓ ಮಂಜುನಾಥ ಉಂದು ನ್ಯಾಯನಾ , ಕನ್ನಡ ಚಿತ್ರದಲ್ಲಿನ ಕುಂತ್ರೆ ನಿಂತ್ರೆ ನಿಂದೆ ಧ್ಯಾನ ಹಾಡುಗಳ ಮೂಲಕ ಮನೆಮಾತಾಗಿದ್ದರು. ಪ್ರಸಿದ್ದ ನೃತ್ಯಗಾರ್ತಿ ವೈಜಯಂತಿಮಾಲಾ ಬಳಗದಲ್ಲಿ ನಟುವಾಂಗ ಕಲಾವಿದೆಯಾಗಿ ವಿಶ್ವದಾದ್ಯಂತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು “ನೈಟಿಂಗೇಲ್” ಎಂದು ಕರೆಸಿಕೊಂಡಿದ್ದರು.

ತನ್ನ ಕೊನೆಯ ದಿನಗಳ ವರೆಗೂ ಮನೆಯಲ್ಲೇ ಶಾಸ್ತ್ರೀಯ ಸಂಗೀತ, ಭಾವ ಗೀತೆ,ಭಕ್ತಿಗೀತೆಗಳ ಪಾಠ ನೀಡುತ್ತಿದ್ದು ” ವಿಶ್ವ ಸಂಗೀತ ದಿನ “ದಂದೇ ನಿಧನ ಹೊಂದಿರುವುದು ವಿಪರ್ಯಾಸವಾಗಿದೆ.

ಮೂಡುಬಿದಿರೆ ಯಲ್ಲಿ ಜರಗಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ದಲ್ಲಿ ಅವರು ಸನ್ಮಾನಿತರಾಗಿದ್ದು , ಮದ್ರಾಸ್ ನ ಕನ್ನಡ ಸಂಘ, ಚೆನ್ನೈ ನ ಮ್ಯೂಸಿಕ್ ಅಕಾಡಮಿಯಿಂದಲೂ ಪ್ರಶಸ್ತಿಗೆ ಪಾತ್ರರಾಗಿದ್ದರು.

 ಗಣ್ಯರಿಂದ ಸಂತಾಪ ಸೂಚನೆ:

ಸರೋಜಿನಿ ಪಟ್ಟಾಭಿಯವರ ನಿಧನಕ್ಕೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ , ಉಡುಪಿ ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್, ಡಾ|ಆರೂರು ವೆಂಕಟಗಿರಿ ರಾವ್, ಸಾಹಿತಿ ಡಾ| ಮಾಧವ ಉಡುಪ ಬೆಂಗಳೂರು, ಚೆನ್ನೈ ಕನ್ನಡ ಸಂಘ ಹಾಗೂ ಎಸ್.ಕೆ.ಡಿ.ಬಿ. ಎಸೋಸಿಯೇಶನ್ ನ ಅಧ್ಯಕ್ಷ ಮುರಳಿ ರಾವ್ ಕಡಂದಲೆ, ಹಿರಿಯ ಸಾಹಿತಿ ವ್ಯಾಸ ರಾವ್ ನಿಂಜೂರು ಮುಂಬೈ, ಕಲಾವಿದರಾದ ತಮ್ಮ ಲಕ್ಷ್ಮಣ, ನವನೀತ ಶೆಟ್ಟಿ ಕದ್ರಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Comments are closed.