ಕರಾವಳಿ

ತೆಕ್ಕಟ್ಟೆ ಗ್ರಾಮಪಂಚಾಯತಿಗೆ ಮಮತಾ ದೇವಾಡಿಗ ಅಧ್ಯಕ್ಷೆ, ಸಂಜೀವ ದೇವಾಡಿಗ ಉಪಾಧ್ಯಕ್ಷ

Pinterest LinkedIn Tumblr

ಉಡುಪಿ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಮಮತಾ ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಸಂಜೀವ ದೇವಾಡಿಗ ಆಯ್ಕೆಯಾಗಿದ್ದಾರೆ.

ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಒಟ್ಟು 14 ಸ್ಥಾನಗಳ ಪೈಕಿ 10 ಕಾಂಗ್ರೆಸ್ ಹಾಗೂ 4 ಬಿಜೆಪಿ ಸ್ಥಾನ ಪಡೆದುಕೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮೀಸಲಾತಿ ಘೋಷಣೆಯಾಗಿತ್ತು. ಅದರಂತೆ ಚುನಾವಣಾಧಿಕಾರಿ ಆರ್‌ಎಫ್‌ಒ ಪ್ರಭಾಕರ್ ಕುಲಾಲ್ ಸೋಮವಾರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಅಧ್ಯಕ್ಷ ಸ್ಥಾನಕ್ಕೆ 1 ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೂ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣದಿಂದ ಇರ್ವರನ್ನು ಅವಿರೋಧ ಆಯ್ಕೆಯಾಗಿ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ರಮೇಶ್ ನಾಯ್ಕ್, ಮೋಹನ್ ದಾಸ್ ಶೆಟ್ಟಿ, ವಕ್ವಾಡಿ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ, ದಲಿತ ಸಂಘಟನೆಯ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸತೀಶ್ ತೆಕ್ಕಟ್ಟೆ, ಮಹೇಶ್ ತೆಕ್ಕಟ್ಟೆ ಸೇರಿದಂತೆ, ಪಿಡಿ‌ಒ ಸುನೀಲ್ ನಾಯಕ್, ಅಧಿಕಾರಿಗಳು, ಸಿಬ್ಬಂದಿಗಳು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

Comments are closed.