ಕರಾವಳಿ

ಆನ್‌ಲೈನ್ ತಂತ್ರಜ್ಞಾನದಡಿ ವಿದ್ಯುತ್ ಬಿಲ್ ಪಾವತಿಗೆ ಅವಕಾಶ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ ಪೋಸ್ಟ್ ಮಾಸ್ಟರ್ ಜೆನರಲ್, ದಕ್ಷಿಣ ಕರ್ನಾಟಕ ವಲಯ ಮತ್ತು ಮೆಸ್ಕಾಂನೊಂದಿಗಿನ ಒಡಂಬಡಿಕೆಯಂತೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಂಚೆ ಕಚೇರಿಯ ಮೂಲಕ ಆನ್‌ಲೈನ್ ತಂತ್ರಜ್ಞಾನದಡಿಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

ಇದುವರೆಗೆ ಮೆಸ್ಕಾಂ ಬಿಲ್ಲುಗಳನ್ನು ಮಂಗಳೂರು, ಪುತ್ತೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಅಂಚೆ ಕಚೇರಿಗಳಲ್ಲಿ ಆಫ್‌ಲೈನ್ ಮುಖಾಂತರ ಆರ್.ಆರ್ ಸಂಖ್ಯೆ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಆಧಾರದಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಲು ಮಂಗಳೂರು ಅಂಚೆ ವಿಭಾಗವು ಮುಂದಾಗಿದ್ದು, ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಸ್ವೀಕರಿಸಲಾಗುವ ವಿದ್ಯುತ್ ಬಿಲ್‌ಗಳನ್ನು / ಎಎಸ್‌ಡಿ ಬಿಲ್‌ಗಳನ್ನು ಎಪಿಐ ತಂತ್ರಜ್ಞಾನವನ್ನು ಅಳವಡಿಸಿ, ಆನ್‌ಲೈನ್ ಮೂಲಕ ಸ್ವೀಕರಿಸಲಾಗುತ್ತದೆ. ಸ್ವೀಕರಿಸಲಾದ ಮೆಸ್ಕಾಂ / ಎಎಸ್‌ಡಿ ಬಿಲ್‌ನ ಮಾಹಿತಿಯು ತಕ್ಷಣದಲ್ಲಿ ಮೆಸ್ಕಾಂ ಸರ್ವರ್‌ಗೆ ತಲುಪಿ ಆಯಾಯಾ ಆರ್.ಆರ್ ಸಂಖ್ಯೆಗೆ ಕೂಡಲೇ ಅಪ್‌ಡೇಟ್‌ಗೊಳ್ಳುತ್ತದೆ.

ಆದ್ದರಿಂದ ಗ್ರಾಹಕರು ಇನ್ನು ಮುಂದೆ ತಮ್ಮ ವಿದ್ಯುತ್ ಬಿಲ್/ ಎಎಸ್‌ಡಿ ಬಿಲ್‌ಗಳನ್ನು ಯಾವುದೇ ಇಲಾಖಾ ಅಂಚೆ ಕಚೇರಿಗಳಲ್ಲಿ ಪಾವತಿಸಬಹುದು. ಈ ಮೊದಲು ಉಡುಪಿ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟ ಬಿಲ್‌ಗಳನ್ನು ಉಡುಪಿ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿದ್ದು, ಬೇರೆ ಅಂಚೆ ಕಚೇರಿಗಳಲ್ಲಿ ಪಾವತಿಸಲಾಗುತ್ತಿರಲಿಲ್ಲ. ಆದರೆ, ಈಗ ಯಾವುದೇ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟ ಬಿಲ್‌ಗಳನ್ನು ರಾಜ್ಯದ ಯಾವುದೇ ಇಲಾಖಾ ಅಂಚೆ ಕಚೇರಿಗಳಲ್ಲಿ, ಹೆಚ್ಚುವರಿ ಶುಲ್ಕವಿಲ್ಲದೆ ಪಾವತಿಸಬಹುದು.

ಈ ಸೇವೆಯು ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಮೆಸ್ಕಾಂ ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಈ ಮೊದಲಿನ ಆಫ್‌ಲೈನ್ ತಂತ್ರಜ್ಞಾನದಡಿಯಲ್ಲಿಯೇ ಮೆಸ್ಕಾಂ/ ಎಎಸ್‌ಡಿ ಬಿಲ್‌ಗಳನ್ನು ಸ್ವೀಕರಿಸಲಾಗುತ್ತಿದ್ದು, ಆನ್‌ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲಾ ಶಾಖಾ ಅಂಚೆ ಕಚೇರಿಗಳಲ್ಲೂ ಪ್ರಾರಂಭಿಸಲಾಗುವುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.