ಕರಾವಳಿ

ಉಡುಪಿ ಜಿಲ್ಲೆಯಲ್ಲಿನ ನೆರೆ/ ಪ್ರವಾಹ ಹಾನಿ ಬಗ್ಗೆ ಕೇಂದ್ರ ತಂಡದಿಂದ ಸಮೀಕ್ಷೆ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ನೆರೆ/ಪ್ರವಾಹ ಹಾನಿಯ ಕುರಿತು ಸಮೀಕ್ಷೆ ನಡೆಸಲು ಕೇಂದ್ರದಿಂದ ಆಗಮಿಸಿದ ತಂಡವು, ಜಿಲ್ಲೆಯ ವಿವಿಧ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಮತ್ತು ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು. ಉಡುಪಿ ತಾಲೂಕು ಶಿವಳ್ಳಿಯ ಪಾಸ್ ಕುದ್ರು ಪ್ರದೇಶಕ್ಕೆ ಭೇಟಿ ನೀಡಿದ ತಂಡವು ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿತು. ನಂತರ ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂ ಗೆ ಬೇಟಿ ನೀಡಿದ ತಂಡವು, ನೆರೆ ಸಂಧರ್ಭದಲ್ಲಿ ಬಜೆ ಡ್ಯಾಂ ನ ಪಂಪಿಂಗ್ ಸ್ಟೇಶನ್ ನೀರಿನಿಂದ ಮುಳುಗಿ, ನೀರು ಸರಬರಾಜು ಮಾಡಲು ವ್ಯತ್ಯಯವಾಗಿದ್ದುದದರ ಬಗ್ಗೆ ಪರಿಶೀಲಿಸಿ, ಡ್ಯಾಂ ನ ಎತ್ತರ ಮತ್ತು ನೀರಿನ ಹರಿವಿನ ಪ್ರಮಾಣ ಕುರಿತಂತೆ ಪರಿಶೀಲನೆ ನಡೆಸಿತು.

ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಾಯಿ ಎಂಬಲ್ಲಿಗೆ ಬೇಟಿ ನೀಡಿ , ಅಲ್ಲಿ ನೆರೆಯಿಂದ 3 ಮನೆಗಳು ಸಂಪೂರ್ಣ ಹಾಳಾಗಿದ್ದ ಪ್ರದೇಶವನ್ನು ವೀಕ್ಷಿಸಿ, ಅಲ್ಲಿನ ಸ್ಥಳೀಯರೊಂದಿಗೆ ನೆರೆ ಬಂದ ದಿನದ ಪರಿಸ್ಥಿತಿಯ ಬಗ್ಗೆ ವಿವರ ಸಂಗ್ರಹಿಸಿ, ತಾತ್ಕಾಲಿಕ ಪರಿಹಾರ ದೊರೆತಿರುವ ಬಗ್ಗೆ ಮತ್ತು ಸೂಕ್ತ ಸಮಯದಲ್ಲಿ ಜಿಲ್ಲಾಡಳಿತದಿಂದ ಅಗತ್ಯ ನೆರವು ದೊರೆತಿರುವ ಬಗ್ಗೆ ಮಾಹಿತಿ ಪಡೆಯಿತು. ಸ್ಥಳೀಯ ಕೃಷಿ ಜಮೀನಿಗೆ ಹಾನಿಯಾಗಿರುವ ಬಗ್ಗೆ ವಿವರ ಪಡೆಯಿತು. ನಂತರ ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದಲ್ಲಿ ಹಾನಿಯಾಗಿರುವ ವೆಂಟೆಂಡ್ ಡ್ಯಾಂ, ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ಬಳಿಯ ಸೇತುವೆ ಹಾನಿ, ಬ್ರಹ್ಮಾವರ ಜನ್ನಾಡಿ ರಸ್ತೆ ಹಾನಿ ಹಾಗೂ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿನ ಸೈಕ್ಲೋನ್ ಶೆಲ್ಟರ್ ಪರಿಶೀಲನೆ ನಡೆಸಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಜಿಲ್ಲೆಯಲ್ಲಿ ನೆರೆ/ಪ್ರವಾಹ ದಿಂದ ಇದುವರೆಗೆ ಆಗಿರುವ ಹಾನಿಯ ಕುರಿತು ಸಮಗ್ರ ವಿವರಗಗಳನ್ನು ಪಡೆದ ತಂಡ, ನೆರೆ/ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲ ಸೂಕ್ತ ನೆರವು ನೀಡಿರುವ ಕಾರಣ ಜೀವ ಹಾನಿಯಾಗುವುದನ್ನು ತಡೆದಿರುವ ಕುರಿತು ಗಮನಿಸಿದ ತಂಡ, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಮಧ್ಯರಾತ್ರಿಯಲ್ಲಿ ನೆರೆ/ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ತೋರಿದ ದೈರ್ಯ ಎಲ್ಲಾ ವಿಕೋಪ ಸಂದರ್ಭದಲ್ಲೂ ಮಾದರಿ ಎಂದರು.

ಸೆಪ್ಟಂಬರ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ 405 ಮಿಮಿ ಆಗಿದ್ದು, 1022 ಮಿಮಿ ಮಳೆ ಆಗಿದೆ,152% ಅಧಿಕ ಮಳೆ ಆಗಿದೆ, ಅಕ್ಟೋಬರ್ 10 ರಿಂದ 15 ರವರೆಗೆ ಸಾಮಾನ್ಯ ಮಳೆ 40 ಮಿಮಿ ಆಗಿದ್ದು, 263 ಮಿಮಿ ಮಳೆ ಆಗಿದೆ,553% ಅಧಿಕ ಮಳೆ ಆಗಿದೆ ಇದರಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ, ಒಟ್ಟು 77 ಗ್ರಾಮಗಳಲ್ಲಿ ಹಾನಿಯಾಗಿದ್ದು, 827 ಕುಟುಂಬಗಳ 2874 ಜನರನ್ನು ರಕ್ಷಿಸಿದ್ದು, 31 ಕಾಳಜಿ ಕೇಂದ್ರ ತೆರೆದಿದ್ದು 1201 ಮಂದಿಗೆ ಆಶ್ರಯ ನೀಡಲಾಗಿತ್ತು, 3694 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 32370.39 ಲಕ್ಷ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಕೇಂದ್ರ ತಂಡದ , ಸದಾನಂದ ಬಾಬು, ಪ್ರಾದೇಶಿಕ ಮುಖ್ಯ ಇಂಜನಿಯರ್ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ , ಭಾರತ ಸರ್ಕಾರ, ದೀಪ್ ಶೇಖರ್ ಸಿಂಘ್ವಾಲ್, ಡಾ.ಸಿ.ಎನ್.ಪ್ರಭು, ಹಿರಿಯ ವಿಜ್ಞಾನಿ, ಕೆ.ಎಸ್.ಎನ್.ಡಿ.ಎಂ.ಸಿ. ಕಂದಾಯ ಇಲಾಖೆ, ಜಿ.ಪಂ. ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.