ಕರಾವಳಿ

ಡಿಸೆಂಬರ್ ಅಂತ್ಯದೊಳಗೆ ಪ್ರತೀ ಗ್ರಾ.ಪಂ.ಗಳಲ್ಲಿ ತ್ಯಾಜ್ಯ ಘಟಕ ಕಡ್ಡಾಯಗೊಳಿಸಲು ಸೂಚನೆ

Pinterest LinkedIn Tumblr

ಉಡುಪಿ: ಡಿಸೆಂಬರ್ ಅಂತ್ಯದೊಳಗೆ ಉಡುಪಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‍ನಲ್ಲೂ ತ್ಯಾಜ್ಯ ಘಟಕ ಕಡ್ಡಾಯವಾಗಿ ಸ್ಥಾಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್‍ಗಳಲ್ಲಿ ಈಗಾಗಲೇ ಇದರ ಅನುಷ್ಠಾನ ಆಗಿದೆ. ಆದರೆ, ಉಡುಪಿ ತಾಲೂಕಿನ ಗ್ರಾಮ ಪಂಚಾಯತ್‍ಗಳಲ್ಲಿ ಇದು ಹಿನ್ನಡೆಯಾಗಿದ್ದು, ಇದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅವರು ಸೂಚಿಸಿದರು.

ಗ್ರಾಮೀಣ ನೈರ್ಮಲ್ಯಕ್ಕಾಗಿ ಆದ್ಯತೆಯನ್ನು ಕೊಟ್ಟು ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯದ ಬಳಕೆ ಆಗದೆ ಇದ್ದಲ್ಲಿ ಅದನ್ನು ಪರಿಶೀಲನೆ ಮಾಡಬೇಕು. ಶೌಚಾಲಯ ವ್ಯವಸ್ಥೆ ಇದ್ದು ಅದನ್ನು ಬಳಕೆ ಮಾಡುವುದು ಮುಖ್ಯವಾದುದು. ಸಿಂಗಲ್ ಪಿಟ್ ಟಾಯ್ಲೆಟ್‍ನಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಡಬಲ್ ಪಿಟ್ ಟಾಯ್ಲೆಟ್‍ಗೆ ಆದ್ಯತೆ ನೀಡಲು ಅವರು ಸೂಚಿಸಿದರು. ಹೊಸ ಮನೆ ಕಟ್ಟುವಾಗ ಡಬಲ್ ಪಿಟ್ ಟಾಯ್ಲೆಟ್‍ನ್ನು ತಯಾರಿಸುವಂತೆ ಷರತ್ತನ್ನು ಹಾಕಬೇಕು. ಡೋರ್ ನಂಬರ್ ಕೊಡುವಾಗ ಖಾತ್ರಿ ಪಡಿಸಿಕೊಳ್ಳಬೇಕು. ಜನರಿಗೆ ಇದರ ಬಗ್ಗೆ ಅರಿವಿಲ್ಲದಿರುವುದರಿಂದ ಜನರಿಗೆ ಪ್ರಚಾರ ನೀಡಿ ಅರಿವನ್ನು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ಶ್ರೀನಿವಾಸ್‍ರಾವ್ ತಿಳಿಸಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಲ್ಲ ತಾಲೂಕುಗಳಲ್ಲಿ ಪ್ರೇರಣಾ ಶಿಬಿರಗಳನ್ನು ಆರಂಭ ಮಾಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂತಹ ಶಿಬಿರಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಸಭೆಗೆ ಡಿಡಿಪಿಐ ಮಾಹಿತಿ ನೀಡಿದರು. ಆರೋಗ್ಯ ವಿಚಾರದಲ್ಲಿ ಮಲೇರಿಯಾದಲ್ಲಿ 6, ಚಿಕನ್‍ಗುನ್ಯಾ 5 ಪ್ರಕರಣಗಳು ಕಂಡುಬಂದಿದೆ. ಈ ಪ್ರದೇಶದ ಪಂಚಾಯತ್‍ಗಳಲ್ಲಿ ರೋಗ ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ತೋಟಗಾರಿಕೆ ಇಲಾಖೆಯಡಿ ಹಣ್ಣು ಸಸಿಗಳ ವಿತರಣೆ 90% ಅಷ್ಟು ಆಗಿದ್ದು, 150 ರಷ್ಟು ಹೆಕ್ಟೇರ್ ಅಭಿವೃದ್ದಿ ಆಗಿದೆ ಎಂದರು.

ಕುಂದಾಪುರ ತಾಲೂಕಿನ ಹೆಮ್ಮಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ರೈತರು ಸೇವಂತಿಗೆ ಬೆಳೆಯುತ್ತಿದ್ದು, ಈ ವರ್ಷ ಇಳುವರಿ ಸಾಕಷ್ಟು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಪರಿಹಾರ ನೀಡಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್ ಆಗ್ರಹಿಸಿದರು.
ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್‍ಗಳು ವಿದ್ಯುತ್ ಬಳಕೆಯ ಶುಲ್ಕ ಲಕ್ಷಾಂತರ ರೂ. ಮೆಸ್ಕಾಂಗೆ ಬಾಕಿ ಇರಿಸಿವೆ. ಇದನ್ನು ಕೂಡಲೇ ಪಾವತಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. ಗ್ರಾಮ ಪಂಚಾಯತ್‍ಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇದ್ದು, ಇದನ್ನು ಪರಿಶೀಲಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಗುರುದತ್ತ್ ಹಾಜರಿದ್ದರು.

Comments are closed.