ಕರಾವಳಿ

ಎನ್‌ಆರ್‌ಸಿ, ಸಿಎಎ ಸಮಸ್ಯೆ ದೇಶದ ಬಹುಜನರ ವಿರೋಧಿಯಾಗಿದೆ: ಪ್ರೊ.ವಿಲಾಸ ಖಾರಾತ್

Pinterest LinkedIn Tumblr

ಉಡುಪಿ: ಸಿ‌ಎ‌ಎ, ಎನ್‌ಆರ್‌ಸಿ ಬಗ್ಗೆ ದಲಿತರು, ಹಿಂದುಳಿದ ವರ್ಗದವರಿಗೆ ಸರಿಯಾದ ಮಾಹಿತಿಯೇ ಇಲ್ಲ. ಇದು ಕೇವಲ ಮುಸ್ಲಿಮರಿಗೆ ಸಂಬಂಧಟ್ಟ ಸಮಸ್ಯೆ ಆಗಿದೆ ಎಂಬುದಾಗಿ ಇವರೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಸಿ‌ಎ‌ಎ, ಎನ್‌ಆರ್‌ಸಿ, ಎನ್‌ಪಿ‌ಆರ್ ಈ ದೇಶದ ಬಹುಜನರ ವಿರೋಧಿಯಾಗಿದೆ. ದಾಖಲೆಗಳಿಂದ ನಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದುದರಿಂದ ಇದು ಕೇವಲ ಮುಸ್ಲಿಮರದ್ದು ಮಾತ್ರವಲ್ಲ ದೇಶದ ಬಹುಜನರ ಸಮಸ್ಯೆಯಾಗಿದೆ ಎಂದು ಭಾರತೀಯ ಮುಕ್ತಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ.ವಿಲಾಸ ಖಾರಾತ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ರಾಜ್ಯ ಸಮಿತಿಯ ವತಿಯಿಂದ ಅಂಬೇಡ್ಕರ್ ಮಂಡಿಸಿದ ಸಂವಿಧಾನವು ಜಾರಿಯಾದ ೭೧ನೇ ವರ್ಷಾಚರಣೆಯ ಪ್ರಯುಕ್ತ ಭಾನುವಾರ ಉಡುಪಿ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಲಾದ ಏಕತೆಗಾಗಿ ಸ್ವಾಭಿಮಾನದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

 

ಎನ್‌ಆರ್‌ಸಿ ಕಾಯಿದೆ ಮೂಲಕ ವಿದೇಶದಿಂದ ಬಂದಿ ರುವ ಬ್ರಾಹ್ಮಣರು ಇಲ್ಲಿನ ಮೂಲನಿವಾಸಿಗಳನ್ನೇ ವಿದೇಶಿಯನ್ನರಾಗಿಸುವ ಷಡ್ಯಂತರ ಮಾಡುತ್ತಿದ್ದಾರೆ. ಇಂತಹ ಕಾಯಿದೆಗಳ ಮೂಲಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಈ ದೇಶದ ಸಂವಿಧಾನವನ್ನೇ ನಾಶ ಮಾಡುವ ಹುನ್ನಾರ ನಡೆಸುತ್ತಿದೆ. ೧೯೪೭ರ ಸ್ವಾತಂತ್ರವು ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ದೌರ್ಜನ್ಯ, ಅನ್ಯಾಯ ಎಸಗುತ್ತಿರುವರಿಗೆ ದೊರೆತಿದೆಯೇ ಹೊರತು ಈ ದೇಶದ ಬಹು ಸಂಖ್ಯಾತರಾದ ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರಿಗೆ ಇನ್ನು ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರು ಸಂಘಟಿತರಾಗ ಬೇಕಾದ ಅವಶ್ಯಕತೆ ಎದುರಾಗಿದೆ. ದಲಿತರು ಕೇವಲ ಜೈ ಭೀಮ್ ಘೋಷಣೆಗಳನ್ನು ಹಾಕುವುದರಿಂದ ಯಾವುದೇ ಕ್ರಾಂತಿ ಮಾಡಲು ಸಾಧ್ಯವಿಲ್ಲ. ಆದುದರಿಂದ ಅಂಬೇಡ್ಕರ್ ಆದರ್ಶ ಪಾಲನೆ ಮಾಡಬೇಕು. ಅಂಬೇಡ್ಕರ್ ರಚಿಸಿದ ಸಂವಿ ಧಾನ ಉಳಿಸಲು ನಾವೆಲ್ಲ ಒಂದಾಗಬೇಕು ಎಂದ ಅವರು, ಇವಿ‌ಎಂ ಷಡ್ಯಂತರ ದಿಂದ ಬಿಜೆಪಿಯು ಈ ಹಿಂದಿನ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದರು. ನಮ್ಮ ಮತವನ್ನು ಕಳವು ಮಾಡುತ್ತಿದ್ದರೂ ನಾವು ಮಾತ್ರ ಎಚ್ಚರಗೊಳ್ಳುತ್ತಿಲ್ಲ ಎಂದರು.

ಭೀಮ ರತ್ನ ರಾಜ್ಯ ಪ್ರಶಸ್ತಿ
ಉಡುಪಿ ಧರ್ಮ ಗುರು ಫಾ.ವಿಲಿಯಂ ಮಾರ್ಟಿಸ್, ಆಳ್ವಾಸ್ ಕಾಲೇಜ್ ಪತ್ರಿಕೋಧ್ಯಮ ವಿದ್ಯಾರ್ಥಿನಿ ಸುಮಲತಾ ಬಜಗೋಳಿ, ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವನಜಾಕ್ಷಿ ಅಶೋಕ್ ಅವರಿಗೆ ಭೀಮ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹ್ಯಾಂಡ್ ಬಾಲ್ ರಾಷ್ಟ್ರಮಟ್ಟದ ಸ್ಪರ್ಧಿ ಶರಣ್ ಅಂಡಾರು, ಮಂಗಳೂರು ವಿಶ್ವವಿದ್ಯಾನಿಲಯದಿಂದ ತಳ ಸಮುದಾಯದ ಕನ್ನಡ ಸಾಹಿತ್ಯ ವಿಚಾರದಲ್ಲಿ ಪಿ.ಎಚ್.ಡಿ ಪಡೆದ ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಭೀಮಘರ್ಜನೆಯ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ವಹಿಸಿದ್ದರು. ಬಿ‌ಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಧರ್ಮ ಗುರು ಫಾ.ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಸುಮಲತಾ ಬಜಗೋಳಿ, ಗುರುಮಿಠಕಲ್, ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವನಜಾಕ್ಷಿ ಅಶೋಕ್, ದಲಿತ ಚಿಂತಕ ನಾರಾಯಣ ಮಣೂರು, ಬಹುಜನ್ ಮುಕ್ತಿ ಮೋರ್ಚಾದ ವಿಭಾಗ ಸಂಯೋಜಕ ತೌಫಿಕ್ ಮುಖ್ಯ ಅತಿಥಿಗಳಾಗಿದ್ದರು. ದಸಂಸ ರಾಜ್ಯ ಖಜಾಂಚಿ ಕೃಷ್ಣಪ್ಪ ಕೋಲಾರ, ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಅಬ್ದುಲ್ ಬಾಶಿತ್ ಗಂಗೊಳ್ಳಿ, ನೀಲಿ ಸೈನ್ಯ ಉಪಾಧ್ಯಕಷ ಸದ್ದಾಂ ಹುಸೇನ್, ದಸಂಸ ಮುಖಂಡರಾದ ಮರಿಯಪ್ಪ ಕನ್ಯೆ, ಮಂಜುನಾಥ್ ತೂದೂರ್, ಪ್ರಭಾಕರ ಮೂಡಬಿದ್ರೆ, ಆರ್.ಮೂರ್ತಿ, ಅಂಬಿಕಾ ಮೊದಲಾದ ವರು ಉಪಸ್ಥಿತರಿದ್ದರು.

ದಸಂಸ ಬೆಂಗಳೂರು ಜಿಲ್ಲಾ ಸಂಚಾಲಕ ಜಿ.ಎ.ನಾಗಪ್ಪ ಸ್ವಾಗತಿಸಿದರು. ಗುಲ್ಬರ್ಗ ವಿಭಾಗದ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನಾ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಹೊರಟು ಕೆ.ಎಂ. ಮಾರ್ಗ, ಹಳೆ ಡಯಾನ ಸರ್ಕಲ್, ಕೋರ್ಟ್ ರಸ್ತೆ, ಮಿಷನ್ ಆಸ್ಪತ್ರೆ ಮಾರ್ಗ ವಾಗಿ ಸಭಾಂಗಣದವರೆಗೆ ನಡೆದ ನೀಲಿ ಸೈನ್ಯದ ಪಥ ಸಂಚಲನಕ್ಕೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಚಾಲನೆ ನೀಡಿದರು.

Comments are closed.