ಕರಾವಳಿ

ರಾಜ್ಯದ ಎಲ್ಲಾ ಅಂಗನವಾಡಿ ಸಹಾಯಕಿ, ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್‍: ಶಶಿಕಲಾ ಜೊಲ್ಲೆ

Pinterest LinkedIn Tumblr

ಉಡುಪಿ: ಕೇಂದ್ರದ ಮಹತ್ವಕಾಂಕ್ಷಿ ಯೋಜನೆಯಾದ ಪೋಷಣ್ ಅಭಿಯಾನದ ಸಾಧನೆಯಲ್ಲಿ ಪ್ರಸ್ತುತ ರಾಜ್ಯವು ಹಿಂದುಳಿದಿದ್ದು, 15 ದಿನಗಳಲ್ಲಿ ರಾಜ್ಯದಾದ್ಯಂತ ಪೋಷಣ್ ಅಭಿಯಾನವನ್ನು ಸಂಪೂರ್ಣವಾಗಿ ಪ್ರಾರಂಭಿಸಲಾಗುವುದು. ಮುಂದಿನ ನಾಲ್ಕರಿಂದ ಐದು ತಿಂಗಳೊಳಗೆ ಈ ಅಭಿಯಾನದಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ನಂಬರ್ ವನ್ ಸ್ಥಾನಕ್ಕೇರಿಸುವ ಗುರಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಅವರು ಗುರುವಾರ ಬ್ರಹ್ಮಗಿರಿಯ ಜಿಲ್ಲಾ ಬಾಲಭವನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಾಣವಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರಾಜ್ಯದ ಎಲ್ಲಾ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್‍ಗಳನ್ನು ನೀಡುವ ಮೂಲಕ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರು ಪ್ರತೀ ತಿಂಗಳು ಮಕ್ಕಳ ಹಾಜರಾತಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸ್ಮಾರ್ಟ್ ಪೋನ್ ಮೂಲಕ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅಂಗನವಾಡಿಗಳಲ್ಲಿ ದಾಖಲಾದ ಮಾಹಿತಿಯನ್ನು ಬೆಂಗಳೂರು ಮತ್ತು ದೆಹಲಿಯಲ್ಲಿ ಕುಳಿತು ನೇರವಾಗಿ ಪಡೆಯಲು ಸಾಧ್ಯವಾಗುವುದು. ಇಲಾಖೆಯಲ್ಲಿರುವ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು. ಈಗಾಗಲೇ ಅಂಗನವಾಡಿ ಸಹಾಯಕಿಯರ ಗೌರವಧನ 2 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಸಹಾಯಕರಿಗೆ ನೀಡುವ ಗೌರವಧನವನ್ನು ಪ್ರತಿ ತಿಂಗಳ 10 ನೇ ತಾರೀಕಿನ ಒಳಗಡೆ ಖಾತೆಗೆ ಜಮಾವಣೆ ಮಾಡಲಾಗುವುದು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದು, ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮುಂಬಡ್ತಿ, ವರ್ಗಾವಣೆ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಕಳೆದ ನಾಲ್ಕು ತಿಂಗಳಿನ ಅವಧಿಯಲ್ಲೇ ಕೈಗೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಿ, ಇಲಾಖೆಗೆ ದಕ್ಷತೆಯನ್ನು ಹೆಚ್ಚಿಸಲು ಖಾಲಿ ಇರುವ ಶೇ 60 ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರನ್ನು ಸಂಬೋಧಿಸಲು ಒಳ್ಳೆಯ ಹೆಸರಿನ ಅವಶ್ಯಕತೆ ಇದ್ದು, ಅವರೂ ಕೂಡಾ ಸಮಾಜದಲ್ಲಿ ಗೌರವಯುತ ಹೆಸರಿನಿಂದ ಗುರುತಿಸಿ ಕೊಳ್ಳುವಂತಾಗಬೇಕು. ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುವುದು. ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗಿದ್ದು, ಮುಂದೆ ಅಂಗನವಾಡಿ ಸಹಾಯಕರಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ. ಅಂಗನವಾಡಿಗಳಲ್ಲಿ ನಡೆಯುವ ಅಕ್ರಮ, ಸೋರಿಕೆ, ತಪ್ಪು ಮಾಹಿತಿ ಮತ್ತು ಗೈರು ಹಾಜರಾತಿಗಳನ್ನು ತಡೆಗಟ್ಟಲು ಮಕ್ಕಳ ಮುಖ ಚಹರೆ ಪತ್ತೆ ಹಾಜರಾತಿ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಗಳನ್ನು ಅಳವಡಿಸಿ ಅಂಗನವಾಡಿಗಳ ಮೇಲೆ ಕಣ್ಣಿಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ. ಕೆ. ಶೆಟ್ಟಿ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪನ್ನು ಒತ್ತಿದ್ದಾರೆ, ಆಕೆ ಗೃಹಿಣಿಯಾಗಿ ಮತ್ತು ಉದ್ಯೋಗಸ್ಥೆಯಾಗಿ ಎಲ್ಲಾ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾಳೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಎರಡನೇ ತಾಯಿ ಇದ್ದಂತೆ, ಮಕ್ಕಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಅವರ ಮೇಲೆ ಇದೆ. ಎಂದು ಹೇಳಿದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿಯಲ್ಲಿ ನಡೆಯುವ ಅಕ್ರಮಗಳು ಕಡಿಮೆ ಇದೆ. ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸಲು ಮಹಿಳಾ ಸ್ವಸಹಾಯ ಸಂಘಗಳಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಮುಂದಿನ ಬಜೆಟ್‍ನಲ್ಲಿ ಮಂಡಿಸುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ಶೇಷಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ ಮತ್ತು ಶಿಲ್ಪಾ ಜಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ವೀಣಾ ವಿವೇಕಾನಂದ್ ಸ್ವಾಗತಿಸಿ, ನಿರೂಪಿಸಿದರು. ಪ್ರಭಾರ ಶಿಶು ಅಧಿಕಾರಿ ಶೋಭಾ ಶೆಟ್ಟಿ ವಂದಿಸಿದರು.

Comments are closed.