ಕರಾವಳಿ

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ದಲಿತರಿಗೆ ಸಾಲ ನೀಡುತ್ತಿಲ್ಲ ಯಾಕೆ?- ಡಿಸಿ ಸಭೆಯಲ್ಲಿ ದಲಿತರ ಆಕ್ರೋಷ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಡಿಸಿ ಮನ್ನಾ ಭೂಮಿಯನ್ನು ಕೂಡಲೆ ತೆರವುಗೊಳಿಸುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ. ಅವರು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಪ.ಜಾತಿ ಪಂಗಡದವರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ಹಲವು ಕಡೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡರು ದೂರಿದ ಹಿನ್ನಲೆಯಲ್ಲಿ, ಡಿಸಿ ಮನ್ನಾ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಕೂಡಲೇ ತೆರವುಗೊಳಿಸುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದ ಡಿಸಿ, ಡಿಸಿ ಮನ್ನಾ ಭೂಮಿ ಬೇರೆಯವರ ಪಾಲಾಗಲು ಬಿಡುವುದಿಲ್ಲ , ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ದಲಿತರಿಗೆ ಸಾಲ ನೀಡುತ್ತಿಲ್ಲ ಎಂಬ ಮುಖಂಡರ ದೂರಿಗೆ ಸಂಬಂದಿಸಿದಂತೆ, ಲೀಡ್ ಬ್ಯಾಂಕ್ ಮೂಲಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚನೆ ನೀಡುವುದಾಗಿ ಮತ್ತು ಲೀಡ್ ಬ್ಯಾಂಕ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ಜಿಲ್ಲಾ ಪಂಚಾಯತ್ ಸಿಇಓ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಸಂದರ್ಭದಲ್ಲಿ , ಸಾಂಪ್ರದಾಯಿಕ ಮರಳು ತೆಗೆಯುವವರಿಗೆ ಮತ್ತು ಪಂಗಡಕ್ಕೆ ಮೀಸಲಾತಿ ನೀಡುವಂತೆ ಕುರಿತಂತೆ, ಈಗಾಗಲೇ ಜಿಲ್ಲೆಯಲ್ಲಿ 170 ಮಂದಿಗೆ ಪರವಾನಗಿ ನೀಡಿದ್ದು ಅದರಲ್ಲಿ 16 ಮಂದಿ ಪ.ಜಾತಿ ಪಂಗಡಕ್ಕೆ ಸೇರಿದವರಿದ್ದು, ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹೆಸರಿನಲ್ಲಿ ಬೇರೆಯವರು ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಈ ಬಗ್ಗೆ ತನಿಖೆ ನಡೆಸಿ, ಪರವಾನಗಿಯನ್ನು ರದ್ದುಪಡಿಸುವುದಾಗಿ ಡಿಸಿ ಹೇಳಿದರು. ಪ.ಜಾತಿ ಪಂಗಡ ದವರಿಗೆ ಮೀಸಲಿಟ್ಟ ಅನುದಾನ ದುರುಪಯೋಗವಾಗಿರುವ ಕುರಿತು ಕೇಳಿ ಬಂದು ದೂರುಗಳ ಬಗ್ಗೆ ಪ್ರತಿಕ್ರ್ರಿಯಿಸಿದ ಜಿಲ್ಲಾಧಿಕಾರಿ ಅಂತಹ ದೂರುಗಳನ್ನು ಪಟ್ಟಿ ಮಾಡಿಕೊಂಡು ಸಂಬಂದಪ್ಟ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ತಾಲೂಕು ಮತ್ತು ಗ್ರಾಮ ಪಂಚಾಯತ್ ನಲ್ಲಿ ನಡೆಯುವ ಕಾಮಗಾರಿಗಳಲ್ಲಿ ಪ.ಜಾತಿ ಪಂಗಡದ ಗುತ್ತಿಗೆದಾರರಿಗೆ ಮೀಸಲು ದೊರೆಯುತ್ತಿಲ್ಲ ಅಲ್ಲದೇ ಕಾಮಗಾರಿಗಳ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಹಾಗೂ ಪ.ಜಾತಿ ಪಂಗಡದವರ ಹೆಸರಿನಲ್ಲಿ ಬೇರೆಯವರಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂಬ ದೂರಿನ ಕುರಿತಂತೆ, ಕಾಮಗಾರಿಗಳ ಅನುಷ್ಠಾನದಲ್ಲಿ ಸರ್ಕಾರಿ ಆದೇಶಗಳನ್ವಯ ಸೂಕ್ತ ಮೀಸಲಾತಿ ಪಾಲಿಸುವಂತೆ ಹಾಗೂ ಪ.ಜಾತಿ ಪಂಗಡದವರ ಹೆಸರಿನಲ್ಲಿ ಗುತ್ತಿಗೆ ನಿರ್ವಹಿಸುವವರ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ಕುಂದಾಪುರ ಎಸಿ ಅವರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ.ಜಾತಿ ಪಂಗಡದವರ ಕುಂದುಕೊರತೆ ಸಭೆಯನ್ನು ನಡೆಸುವಂತೆ ಡಿಸಿ ಸೂಚಿಸಿದರು.

ಸಭೆಯಲ್ಲಿ ಉಡುಪಿ ಇ.ಎಸ್.ಐ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತ ಸರಿಯಾಗಿ ಸ್ಪಂದಿಸದ ಬಗ್ಗೆ, ನಾಲ್ಕೂರು ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಕಲುಷಿತ ನೀರು ಸರಬರಾಜು ಬಗ್ಗೆ, ಕುಂದಾಪುರದ ಖಾಸಗಿ ಶಾಲೆಯಲ್ಲಿ ಡೊನೇಷನ್ ಹಾವಳಿ ಬಗ್ಗೆ, ಆರೂರು ಗ್ರಾ.ಪಂಚಾಯತ್ ನಲ್ಲಿ ಅಕ್ರಮ ಕಲ್ಲುಕೋರೆ ನಡೆಯುತ್ತಿರುವ ಬಗ್ಗೆ, ಜಿಲ್ಲಾ ಅಂಬೇಡ್ಕರ್ ಭವನ ನಿರ್ಮಾಣ ಬಗ್ಗೆ, ಕುಂದಾಪುರದ ಅಂಗಡಿಕೋಣೆ ಏಲಂ ನಲ್ಲಿ ಮೀಸಲಾತಿ ಅನುಸರಿಸದ ಬಗ್ಗೆ, ಮನೆ ನಿವೇಶನ ನೀಡುವ ಬಗ್ಗೆ , ಕುಕ್ಕೆಹಳ್ಳಿಯ ಮೀನು ಸಂಸ್ಕರಣಾ ಘಟಕದಿಂದ ತೊಂದರೆಯಾಗುತ್ತಿರುವ ಬಗ್ಗೆ, ಹಂಗಾರಕಟ್ಟೆಯ ಫಿಶ್ ಕಟಿಂಗ್ ಫ್ಯಾಕ್ಟರಿಯಿಂದ ಪ.ಜಾತಿ ಪಂಗದಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತಂತೆ ವಿಸ್ತøತ ಚರ್ಚೆ ನಡೆಯಿತು.

ಸಭೆಯಲ್ಲಿ ಕೇಳಿಬಂದ ದೂರುಗಳ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ತಮಗೆ ವರದಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ.ಜಾತಿ ಪಂಗಡದವರ ಕುಂದುಕೊರತೆ ಸಭೆಯ ಕಾಟಾಚಾರದ ಸಭೆ ಆಗಬಾರದು, ಅಧಿಕಾರಿಗಳು ಪ.ಜಾತಿ ಪಂಗಡದವರ ದೂರುಗಳಿಗೆ ಕೇವಲ ಹಿಂಬರಹ ನೀಡದೇ , ಕಾಳಜಿಯಿಂದ ಕಾರ್ಯ ನಿರ್ವಹಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹ ಪ್ರತಿ ತಿಂಗಳು ಪ.ಜಾತಿ ಪಂಗಡದವರ ಕುಂದುಕೊರತೆ ಸಭೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಹೇಳಿದರು.

ಸಭೆಯಲ್ಲಿ ಕಾರ್ಕಳ ವಿಭಾಗದ ಎಎಸ್ಪಿ ಕೃಷ್ಣಕಾಂತ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರ ಸ್ವಾಮಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.
ಪ.ಜಾತಿ ಪಂಗಡದ ವಿವಿಧ ಸಂಘಟನೆಗಳ ಪ್ರತಿನಿಧಿಗಳು , ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.