ಕರಾವಳಿ

ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಸರಿಯಾಗಿದೆಯೇ ಎಂದು ಅ.15ರೊಳಗೆ ಪರಿಶೀಲನೆ ಮಾಡಿಕೊಳ್ಳಬೇಕು: ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು: ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರ ಪಟ್ಟಿ ಪರಿಶೀಲನೆ ನಡೆಯುತ್ತಿದೆ. ಅ.15ರೊಳಗೆ ಮತದಾರರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಸೆಪ್ಟೆಂಬರ್ ಒಂದರಿಂದ ನಡೆಯುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಶೇ 10.38 ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಲಾಗಿದೆ.

ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,24,458 ಮತದಾರರಿದ್ದು, ಈ ಪೈಕಿ ಇದುವರೆಗೆ 1,79,034 ಮಂದಿ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಇದಕ್ಕಾಗಿ ಮೊಬೈಲ್ ಆಯಪ್ (voter help line), ವೆಬ್ ಪೋರ್ಟಲ್ ( www.nvsp.in ) ಅಥವಾ ಸಹಾಯವಾಣಿ (1950 ಉಚಿತ)ಗೆ ಕರೆ ಮಾಡುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಮತದಾರರ ಪಟ್ಟಿ ಪರಿಶೀಲನೆ ಮತ್ತು ದೃಢೀಕರಣ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಪರಿಶೀಲನೆಗೆ ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಆಧಾರ್ ಕಾರ್ಡ್, ಸರಕಾರಿ, ಅರೆಸರಕಾರಿ ಅಧಿಕಾರಿಗಳ ಗುರುತಿನ ಪತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಆಯೋಗ ಅನು ಮೋದಿಸಿದ ಯಾವುದೇ ದಾಖಲೆ ಹಾಜರುಪಡಿಸಿ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

”ಮತದಾರರ ಪಟ್ಟಿಯ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಪಡಿತರ ಚೀಟಿಯ ಝೆರಾಕ್ಸ್ ಪ್ರತಿ, ಆಧಾರ್ ಗುರಿತಿನ ಚೀಟಿಯ ಝೆರಾಕ್ಸ್ ಪ್ರತಿ ಮತ್ತು ಮೊಬೈಲ್ ಸಂಖ್ಯೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಅಥವಾ ಪಂಚಾಯತ್ ನೌಕರರಿಗೆ ಎರಡು ದಿನಗಳ ಒಳಗೆ ನಿಡಬೇಕು.

ಇಲ್ಲದಿದ್ದಲ್ಲಿ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗಬಹುದು” ಎಂದು ಸಂದೇಶ ಹರಡಲಾಗುತ್ತಿದೆ. ಇದು ತಪ್ಪು ಸಂದೇಶವಾಗಿದೆ. ಈ ಬಗ್ಗೆ ಜನರಿಗೆ ಗೊಂದಲ ಬೇಡ. ಪರಿಶೀಲನೆಯಾಗದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದಿಲ್ಲ. ತಪ್ಪುಗಳಿದ್ದರೆ ಸರಿಪಡಿಸಲು ಇದೊಂದು ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

Comments are closed.