ಕರಾವಳಿ

ಸಾರ್ವಜನಿಕರು ಚಿನ್ನಾಭರಣ ಹಾಗೂ ನಗದು ಸಾಗಿಸುವಾಗ ದಾಖಲೆ ಪತ್ರ ಕಡ್ಡಾಯ : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿದ್ದ 10,187 ಬ್ಯಾನರ್‌, ಪೋಸ್ಟರ್‌, ಬಂಟಿಂಗ್‌ ಹಾಗೂ ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿದ್ದ 1,901 ಪೋಸ್ಟರ್‌ಗಳು, 4,376 ಬ್ಯಾನರ್‌, 10 ಗೋಡೆ ಬರಹಗಳು ಹಾಗೂ ಇತರ 3,900 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ದ್ದ 156 ಪೋಸ್ಟರ್‌ಗಳು, 65 ಬ್ಯಾನರ್‌ಗಳುಹಾಗೂ ಇತರ 487 ಸೇರಿದಂತೆ ಒಟ್ಟು 708 ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಚಿನ್ನಾಭರಣ ಹಾಗೂ ನಗದನ್ನು ಸಾಗಿಸುವ ಸಂದರ್ಭ ಸಂಬಂಧಿಸಿದ ದಾಖಲೆ ಪತ್ರ ಇರಿಸಿಕೊಂಡಿರಬೇಕು. ಹಾಲ್‌ನೊಳಗೆ ನಡೆಯುವ ಮದುವೆಗಳಿಗೆ ಅನುಮತಿ ಬೇಕಾಗಿಲ್ಲ. ಆದರೆ ಚುನಾವಣಾಧಿಕಾರಿಗಳಿಗೆ ಆಮಂತ್ರಣ ಪತ್ರದೊಂದಿಗೆ ಮಾಹಿತಿ ನೀಡಿದರೆ ಉತ್ತಮ.

ಹೊರಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಅನುಮತಿ ಅಗತ್ಯ. ಯಕ್ಷಗಾನ ಸಹಿತ ಧಾರ್ಮಿಕ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಇಲ್ಲ. ಈ ಬಗ್ಗೆ ಚುನಾವಣಾಧಿಕಾರಿಯವರಿಗೆ ಮಾಹಿತಿ ನೀಡಿ ಅಲ್ಲಿ ಯಾವುದೇ ರೀತಿಯ ರಾಜಕೀಯ ಸಂಬಂಧಿ ಚಟುವಟಿಕೆಗಳು ನಡೆಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಾಜಕೀಯೇತರ ಸಭೆ, ಸಮಾರಂಭಗಳಿಗೆ ನಿಯಂತ್ರಣ ಇಲ್ಲವಾದರೂ ಸಹಾಯಕ ಚುನಾವಣ ಅಧಿಕಾರಿಯಿಂದ ಲಿಖೀತ ಅನುಮತಿ ಪಡೆಯಬೇಕು. ಪ್ರಚಾರಕ್ಕಾಗಿ ಬಳಸುವ ವಾಹನಗಳ ಕುರಿತು ಲಿಖೀತ ಅನುಮತಿ ಪಡೆದು ವಾಹನದಲ್ಲಿ ಪ್ರದರ್ಶಿಸಿ ಬಳಸಬಹುದು.ಧಾರ್ಮಿಕ ಇಲಾಖೆಗೆ ಸೇರಿದ ಕಟ್ಟಡ ಅಥವಾ ಮೈದಾನಗಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಎ.16ರ ಬೆಳಗ್ಗೆ 7ರಿಂದ ಧ್ವನಿವರ್ಧಕ ಗಳ ಬಳಕೆ ಮತ್ತು ಪ್ರಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Comments are closed.