ಕರಾವಳಿ

ಸದಾ ಹೊಟ್ಟೆಯುಬ್ಬರ ಸಮಸ್ಯೆ ಕಾಡಲು ಕೆಲವು ಸಾಮಾನ್ಯ ಕಾರಣಗಳು.

Pinterest LinkedIn Tumblr

ಸಿಕ್ಕಿದ್ದನ್ನು ತಿನ್ನುವುದು ಮತ್ತು ಸುದೀರ್ಘ ಸಮಯ ಕುಳಿತುಕೊಂಡೇ ಇರುವುದು ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಕೆಲವು ಜನರಂತೂ ವಾಯು ಸಮಸ್ಯೆ ಮತ್ತು ಹೊಟ್ಟೆಯುಬ್ಬರದೊಂದಿಗೆ ಸದಾ ನರಳುತ್ತಲೇ ಇರುತ್ತಾರೆ. ಈ ಎಲ್ಲ ಸಮಸ್ಯೆಗಳು ನೀವು ಸೇವಿಸುವ ಆಹಾರದೊಂದಿಗೆ ತಳುಕು ಹಾಕಿಕೊಂಡಿವೆ. ಆದರೆ ನೀವು ಆಹಾರ ಪದ್ಧತಿಯನ್ನು ಉತ್ತಮಗೊಳಿಸಿಕೊಂಡರೂ ಈ ಸಮಸ್ಯೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು. ನಿಮಗೆ ಹೊಟ್ಟೆಯುಬ್ಬರ ಕಾಡಲು ಕೆಲವು ಸಾಮಾನ್ಯ ಕಾರಣಗಳಿಲ್ಲಿವೆ……

ಅತಿಯಾದ ಹಸಿ ಆಹಾರ ಸೇವನೆ
ಹೆಚ್ಚಿನ ಸಂದರ್ಭಗಳಲ್ಲಿ ಆಹಾರವನ್ನು ಬೇಯಿಸುವಾಗ ಅದರಲ್ಲಿಯ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಹೀಗಾಗಿ ಹಸಿಯಾದ ಆಹಾರವನ್ನು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಆಹಾರವನ್ನು ಬೇಯಿಸುವುದರಿಂದ ಅದು ಸುಲಭವಾಗಿ ಜೀರ್ಣಗೊಳ್ಳುತ್ತದೆ ಮತ್ತು ಕೆಲವು ಪೌಷ್ಟಿಕಾಂಶಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ. ಹಸಿಯಾದ ಆಹಾರದಲ್ಲಿ ಪಚನಗೊಳ್ಳದ ನಾರು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ನಮ್ಮ ಶರೀರಕ್ಕೆ ಆರೋಗ್ಯಕಾರವಾದ ನಾರು ಸಹ ಇರುತ್ತದೆ. ಹೀಗಾಗಿ ಅತಿಯಾಗಿ ಹಸಿ ಆಹಾರವನ್ನೇ ಸೇವಿಸುವುದು ಅಜೀರ್ಣ ಮತ್ತು ಹೆೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಹೊಟ್ಟೆಯುಬ್ಬರದಿಂದ ಪಾರಾಗಲು ನಾವು ಸೇವಿಸುವ ಹಸಿಯಾದ ಆಹಾರ ಮತ್ತು ಬೇಯಿಸಿದ ಆಹಾರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯ.

ಲ್ಯಾಕ್ಟೋಸ್ ಅಸಹಿಷ್ಣುತೆ
ನಮ್ಮ ಶರೀರದ ರಚನೆ ಹೇಗಿರುತ್ತದೆ ಎಂದರೆ 4-5 ವರ್ಷ ಪ್ರಾಯದ ಬಳಿಕ ಹಾಲನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದ ಹೆಚ್ಚಿನವರು ಸ್ವಲ್ಪ ಮಟ್ಟಿಗೆ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿರುತ್ತಾರೆ. ಹಲವಾರು ಜನರು ಹೈನು ಉತ್ಪನ್ನಗಳ ಸೇವನೆಯಿದಾಗಿ ಹೊಟ್ಟೆಯುಬ್ಬರದಿಂದ ಬಳಲುತ್ತಿರುತ್ತಾರೆ,ಆದರೆ ಅದಕ್ಕೆ ಮೂಲಕಾರಣ ಅವರಿಗೆ ತಿಳಿದಿರುವುದಿಲ್ಲ.

ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್
ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್(ಐಬಿಎಸ್) ಅಥವಾ ಕೆರಳಿಸುವ ಕರುಳಿನ ಲಕ್ಷಣವು ದೊಡ್ಡಕರುಳು ಕೆಲವು ಆಹಾರಗಳಿಗೆ ಅತಿಯಾಗಿ ಸ್ಪಂದಿಸಿ ಹೊಟ್ಟೆಯುಬ್ಬರ, ವಾಯು ಮತ್ತು ಅತಿಸಾರದಂತಹ ಲಕ್ಷಣಗಳಿಗೆ ಕಾರಣವಾಗುವ ಸ್ಥಿತಿಯಾಗಿದೆ. ಐಬಿಎಸ್‌ಗೆ ಚಿಕಿತ್ಸೆ ಇಲ್ಲ, ಆದರೆ ಗ್ಲುಟೆನ್ ಮತ್ತು ಡೇರಿ ಉತ್ಪನ್ನಗಳಂತಹ ಕೆಲವು ಆಹಾರಗಳಿಂದ ದೂರವಿರುವ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಹಾರ್ಮೋನ್ ಏರಿಳಿತಗಳು
ಹೆಚ್ಚಿನ ಮಹಿಳೆಯರು ತಮ್ಮ ಋತುಚಕ್ರದ ಕೆಲವು ಹಂತಗಳಲ್ಲಿ ಹೊಟ್ಟೆಯುಬ್ಬರದಿಂದ ಬಳಲುತ್ತಿರುತ್ತಾರೆ. ರಜಸ್ವಲೆಯಾಗುವ ಮುನ್ನ ಹಾರ್ಮೋನ್‌ಗಳಲ್ಲಿ ಉಂಟಾಗುವ ಏರಿಳಿತಗಳು ಚಯಾಪಚಯದಲ್ಲಿ ಬದಲಾವಣೆಗಳನ್ನುಂಟು ಮಾಡುತ್ತವೆ ಮತ್ತು ಹೊಟ್ಟೆಯುಬ್ಬರ ಹಾಗೂ ನೋವನ್ನುಂಟು ಮಾಡುತ್ತವೆ. ಋತುಬಂಧ ಸನ್ನಿಹಿತವಾಗಿರುವ ಮಹಿಳೆಯರು ಮತ್ತು ಗರ್ಭಿಣಿಯರಲ್ಲಿ ಹೊಟ್ಟೆಯುಬ್ಬರ ಮತ್ತು ಮಲಬದ್ಧತೆ ಸಾಮಾನ್ಯ ಲಕ್ಷಣಗಳಾಗಿವೆ.

ಆಹಾರದಲ್ಲಿ ಅತಿಯಾದ ಸೋಡಿಯಂ
ನಾವು ಸೇವಿಸುವ ಆಹಾರದಲ್ಲಿ ಅತಿಯಾದ ಉಪ್ಪಿದ್ದರೆ ಅದೂ ಕೂಡ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ. ಸೋಡಿಯಂ ದ್ರವಗಳ ಸಂಗ್ರಹಕ್ಕೆ ಕಾರಣವಾಗುವ ಮೂಲಕ ಹೊಟ್ಟೆಯುಬ್ಬರ ಮತ್ತು ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುತ್ತದೆ. ಇಂದಿನ ಸಂಸ್ಕರಿತ ಆಹಾರಗಳ ಯುಗದಲ್ಲಿ ಉಪ್ಪಿನ ಸೇವನೆಯ ಮೇಲೆ ನಿಗಾ ಇರಿಸುವುದು ಕಷ್ಟ. ಹೆಚ್ಚಿನ ಸಂಸ್ಕರಿತ ಆಹಾರಗಳು ಅತಿಯಾದ ಉಪ್ಪನ್ನು ಒಳಗೊಂಡಿರುತ್ತವೆ.

ಆಹಾರದ ಅಲರ್ಜಿಗಳು
ಲ್ಯಾಕ್ಟೋಸ್ ಅಸಹಿಷ್ಣುತೆಯಂತೆ ಹಲವಾರು ಜನರು ಗ್ಲುಟೆನ್ ಅಥವಾ ನಟ್ ಅಲರ್ಜಿಗಳಂತಹ ಇತರ ಆಹಾರ ಆಲರ್ಜಿಗಳಿಂದ ಬಳಲುತ್ತಿರುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಹೊಂದಿಯೂ ನೀವು ಸದಾ ಹೊಟ್ಟೆಯುಬ್ಬರದಿಂದ ಬಳಲುತ್ತಿದ್ದರೆ ಅದಕ್ಕೆ ಆಹಾರಗಳ ಅಲರ್ಜಿ ಕಾರಣವಾಗಿರಹುದು.

ಇಂಗಾಲೀಕೃತ ಪಾನೀಯಗಳು
ಇಂಗಾಲೀಕೃತ ಪಾನೀಯಗಳು ಅತಿಯಾದ ಪ್ರಮಾಣದಲ್ಲಿ ಕಾರ್ಬನ್ ಡೈಯಾಕ್ಸೈಡ್‌ನ್ನು ಒಳಗೊಂಡಿರುತ್ತವೆ. ಇಂತಹ ಪಾನೀಯಗಳನ್ನು ಅತಿಯಾದ ಸೇವನೆಯು ಜೀರ್ಣಾಂಗದಲ್ಲಿ ಅತಿಯಾದ ವಾಯು ಸಂಗ್ರಹಕ್ಕೆ ಕಾರಣವಾಗುತ್ತದೆ ಮತ್ತು ಹೊಟ್ಟೆಯುಬ್ಬರವನ್ನುಂಟು ಮಾಡುತ್ತದೆ.

ಸಕ್ಕರೆರಹಿತ ಆಹಾರಗಳು
ಸಕ್ಕರೆರಹಿತ ಆಹಾರಗಳು ಪರ್ಯಾಯವಾಗಿ ಕೃತಕ ಸಿಹಿಕಾರಕಗಳನ್ನು ಒಳಗೊಂಡಿರುತ್ತವೆ ಮತ್ತು ಇದು ಶರೀರದಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಅವು ನಮ್ಮ ಕರುಳಿನಲ್ಲಿ ಸಂಗ್ರಹಗೊಳ್ಳುತ್ತವೆ ಮತ್ತು ಸೂಕ್ಷ್ಮಜೀವಿಗಳಿಗೆ ಆಹಾರವಾಗುತ್ತವೆ. ಇದು ಅತಿಯಾದ ವಾಯುವಿನ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಉಬ್ಬರದಿಂದ ನರಳುವಂತಾಗುತ್ತದೆ.

ಚ್ಯೂಯಿಂಗ್ ಗಮ್
ಚ್ಯೂಯಿಂಗ ಗಮ್‌ನ್ನು ಸುದೀರ್ಘ ಕಾಲ ಅಗಿಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯು ಹೊಟ್ಟೆಯನ್ನು ಸೇರಿಕೊಳ್ಳುತ್ತದೆ. ಈ ಗಾಳಿಯು ಜೀರ್ಣಾಂಗದಲ್ಲಿ ಸಿಕ್ಕಿಕೊಳ್ಳುವುದು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

ಅವಸರದ ಆಹಾರ ಸೇವನೆ
ಅವಸರದಿಂದ ಆಹಾರವನ್ನು ಸೇವಿಸಿದರೆ ಅದರೊಂದಿಗೆ ಗಾಳಿಯೂ ಹೊಟ್ಟೆಯನ್ನು ಸೇರುತ್ತದೆ. ಜಠರ ಮತ್ತು ಕರುಳಿನಲ್ಲಿ ಸಿಕ್ಕಿಕೊಳ್ಳುವ ಈ ಗಾಳಿಯು ಹೊಟ್ಟೆಯುಬ್ಬರವನ್ನುಂಟು ಮಾಡುತ್ತದೆ.

Comments are closed.