ಕರಾವಳಿ

ಕೃತಕವಾಗಿ ಹಣ್ಣಾಗಿಸುವ ಹಣ್ಣು ತರಕಾರಿಗಳಿಂದ ಆಗುವ ತೊಂದರೆಗಳ ಬಗ್ಗೆ ತಿಳಿಯಿರಿ..?

Pinterest LinkedIn Tumblr

ಗಿಡದಲ್ಲಿ ಸಹಜವಾಗಿ ಮಾಗಿದ ಹಣ್ಣುಗಳನ್ನೇ ತಿನ್ನಬೇಕು, ರಾಸಾಯನಿಕಗಳನ್ನು ಸಿಂಪಡಿಸಿ ಮಾಗಿಸಿದ ಹಣ್ಣುಗಳನ್ನು ತಿನ್ನಬಾರದು. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂಬುದು ನಮಗೆ ಗೊತ್ತಿರುವ ಸಂಗತಿ. ಆದರೆ ಗಿಡದಲ್ಲಿ ಮಾಗಿರುವ ಹಣ್ಣುಗಳನ್ನು ಎಲ್ಲಿಗೆ ಹುಡುಕಿಕೊಂಡು ಹೋಗುವುದೂ ಅನ್ನುವುದೂ ಒಂದು ಪ್ರಶ್ನೆ. ಅಷ್ಟೇ ಅಲ್ಲ, ಈ ವ್ಯತ್ಯಾಸವನ್ನು ಖರೀದಿಸುವ ಮೊದಲು ಹೇಗೆ ಕಂಡುಹಿಡಿಯುವುದು ಎಂದೂ ನಮಗೆ ಗೊತ್ತಿರುವುದಿಲ್ಲ.

ಸೀಸನ್‌ನಲ್ಲಿ ಬರುತ್ತಿರುವ ಮಾವಿನ ಹಣ್ಣಷ್ಟೇ ಅಲ್ಲ, ಸೇಬು, ಬಾಳೆಹಣ್ಣು, ಅವಕಾಡೋ (ಬೆಣ್ಣೆಹಣ್ಣು), ಕಿತ್ತಳೆ, ಪಪ್ಪಾಯ, ಸೀಬೆ, ಪೈನಾಪಲ್ ನಂತಹ ಅನೇಕ ಹಣ್ಣುಗಳಿಗೆ ರಾಸಾಯನಿಕಗಳನ್ನು ಸೇರಿಸಿ ಕೃತಕವಾಗಿ ಹಣ್ಣಾಗಿಸುತ್ತಿದ್ದಾರೆ. ಇದರ ಜತೆಗೆ ಟೊಮೊಟೋಗಳಂತಹ ತರಕಾರಿಗಳಿಗೂ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈ ವಿಷಯ ಬಹಳಷ್ಟು ಮಂದಿಗೆ ಗೊತ್ತು.

ಆದರೆ ಇದು ಸಹಜವಾಗಿ ಮಾಗಿದ್ದೇ ಅಥವಾ ರಾಸಾಯನಿಕ ಬಳಸಿದ್ದ ಹಣ್ಣು ಅಥವಾ ತರಕಾರಿ ಎಂದು ತಿಳಿಯುವುದು ಹೇಗೆ? ಅದರಿಂದ ಆಗುವ ತೊಂದರೆಗಳು ಏನು? ಎಂಬ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

ಮಾಗಿಸಲು ಬಳಸುವ ರಾಸಾಯನಿಕಗಳು:
ಕ್ಯಾಲ್ಸಿಯಂ ಕಾರ್ಬೈಡ್, ಎಥಿಲಿಲ್, ಎಥಿಪಾನ್‌ ಮುಂತಾದವುಗಳು.

ಕೃತಕವಾಗಿ ಮಾಗಿಸಿದ ಹಣ್ಣು ಗುರುತಿಸುವುದು ಹೇಗೆ?
ಕೃತಕವಾಗಿ ಮಾಗಿಸಿದ ಹಣ್ಣುಗಳೆಲ್ಲಾ ಸರಿಸುಮಾರು ಒಂದೇ ಬಣ್ಣದಲ್ಲಿದ್ದು, ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಅದೇ ಸಹಜವಾಗಿ ಮಾಗಿದ ಹಣ್ಣುಗಳ ಬಣ್ಣಗಳಲ್ಲಿ ವ್ಯತ್ಯಾಸ ಇರುತ್ತದೆ. ಎಲ್ಲಾ ಹಣ್ಣುಗಳು ಒಂದೇ ಬಣ್ಣದಲ್ಲಿ ಇರುವುದಿಲ್ಲ, ಒಂದೇ ಜಾತಿ ಆಗಿದ್ದರೂ ಬೇರೆಬೇರೆ ಬಣ್ಣಗಳಲ್ಲಿರುತ್ತವೆ.
ಕೃತಕವಾಗಿ ಮಾಗಿದ ಹಣ್ಣುಗಳ ಮೇಲೆ ಬೂದಿ ಬಣ್ಣದ ಪ್ಯಾಚ್‌ಗಳು ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ.

ಬಾಳೆಹಣ್ಣು ತೊಟ್ಟು ಹಸಿರು ಬಣ್ಣದಲ್ಲಿದ್ದು ಹಣ್ಣು ಹಳದಿ ಬಣ್ಣದಲ್ಲಿ ಇದ್ದರೆ ಅವನ್ನು ಕೃತಕವಾಗಿ ಮಾಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕು. ಸಹಜವಾಗಿ ಮಾಗಿದ ಹಣ್ಣಾದರೆ ತೊಟ್ಟು ಸಹ ಹಳದಿ ಬಣ್ಣದಲ್ಲಿರುತ್ತದೆ.
ಸಹಜವಾಗಿ ಪಕ್ವವಾದ ತರಕಾರಿಗಳು, ಹಣ್ಣುಗಳು ಆಕರ್ಷಕವಾಗಿ ಇರಲ್ಲ. ಆದರೆ ಕೃತಕವಾಗಿ ಬೆಳೆದ ಹಣ್ಣುಗಳು ಮಾತ್ರ ಹೊಳೆಯುತ್ತಿರುತ್ತವೆ. ಕಣ್ಣಿಗೆ ಆಕರ್ಷಕವಾಗಿ ಕಾಣುತ್ತವೆ.

ಸೀಸನ್ ಆರಂಭವಾಗುವುದಕ್ಕೂ ಮೊದಲೇ ಮಾರುಕಟ್ಟೆಗೆ ಬರುವ ಹಣ್ಣುಗಳನ್ನು ಕೊಳ್ಳಬಾರದು. ಅವುಗಳನ್ನು ಕೃತಕವಾಗಿ ಹಣ್ಣಾಗಿಸಿರುತ್ತಾರೆ.
ಕೃತಕವಾಗಿ ಪಕ್ವವಾದ ಹಣ್ಣುಗಳು ಮೆತ್ತಗೆ, ಮೃದುವಾಗಿ ಇರುತ್ತವೆ. ಸಹಜವಾಗಿ ಪಕ್ವವಾದ ಹಣ್ಣುಗಳು ಸ್ವಲ್ಪ ಗಟ್ಟಿಯಾಗಿ ಇರುತ್ತವೆ.
ಕೃತಕವಾಗಿ ಮಾಗಿದ ಹಣ್ಣು-ತರಕಾರಿಯಿಂದ ಹಾನಿ:

ಇಂತಹ ಹಣ್ಣು- ತರಕಾರಿಗಳಲ್ಲಿನ ಪೋಷಕಾಂಶಗಳು ನಾಶವಾಗಿರುತ್ತವೆ ಮತ್ತು ಅವುಗಳನ್ನು ತಿಂದರೂ ನಮಗೆ ಪ್ರಯೋಜನಕ್ಕಿಂತ ಅಪಾಯ ಹೆಚ್ಚು.
ರಾಸಾಯನಿಕಗಳಲ್ಲಿರುವ ವಿಷ ಪದಾರ್ಥಗಳು ನಮ್ಮ ದೇಹವನ್ನು ಸೇರಿ ಅನಾರೋಗ್ಯ ಹೆಚ್ಚಿಸುತ್ತದೆ.
ಕಾರ್ಸಿನೋಜನ್‌ ಎಂಬ ಕ್ಯಾನ್ಸರ್ ಗೆ ಕಾರಣವಾಗುವ ವಿಷ ನಮ್ಮ ದೇಹ ಸೇರುತ್ತದೆ.
ವಾಂತಿ, ಬೇಧಿ, ಅಸಿಡಿಟಿ, ಗ್ಯಾಸ್, ಅಜೀರ್ಣ ಸಮಸ್ಯೆಗಳು ಬರಬಹುದು. ಚರ್ಮದ ಮೇಲೆ ನವೆ, ದದ್ದುಗಳು ಆಗುತ್ತವೆ.

ನಿಧಾನವಾಗಿ ಬರುವ ರೋಗಗಳಾದ, ದೃಷ್ಟಿ ಕ್ಷೀಣಿಸುವುದು, ವಿಪರೀತವಾದ ದಾಹ, ಬಾಯಿ, ಮೂಗು, ಗಂಟಲು ಸೋಂಕು ಉಂಟಾಗುವ ಸಾಧ್ಯತೆಗಳಿವೆ.
ನೆಗಡಿ, ಕೆಮ್ಮು, ಉಸಿರಾಟ ತೊಂದರೆಗಳು, ಕರುಳಿನ ಅಲ್ಸರ್ , ಶ್ವಾಸಕೋಶಗಳಲ್ಲಿ ನೀರು ಸೇರಿಕೊಳ್ಳುವಂತಹ ತೊಂದರೆಗಳೂ ಉಂಟಾಗಬಹುದು.
ತಲೆನೋವು, ಜ್ಞಾಪಕಶಕ್ತಿ ಕಡಿಮೆಯಾಗುವುದು, ನಿದ್ರಾಹೀನತೆ, ಫಿಟ್ಸ್ ಸಹ ಬರಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಬಿಪಿ ಹೆಚ್ಚುತ್ತದೆ. ಇದರ ಜತೆಗೆ ಕೈ, ಕಾಲುಗಳು ಸ್ಪರ್ಶವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಗರ್ಭಿಣಿಯರು ಇಂಥ ಹಣ್ಣುಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಮಗುವಿನ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಈ ರೀತಿ ಕೃತಕವಾಗಿ ಹಣ್ಣುಗಳನ್ನು ಮಾಗಿಸುವುದನ್ನು ಅನೇಕ ದೇಶಗಳು ನಿಷೇಧಿಸಿವೆ. ನಮ್ಮ ದೇಶದಲ್ಲೂ ಈ ರೀತಿ ಮಾಡುವುದರ ಬಗ್ಗೆ ನಿಷೇಧವಿದೆ. ಆದರೂ ಕೆಲವು ವ್ಯಾಪಾರಿಗಳು ಲಾಭಾಪೇಕ್ಷೆಯಿಂದ ಆ ರೀತಿ ಹಣ್ಣುಗಳನ್ನು ಪಕ್ವವಾಗಿಸಿ ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಏನೇ ಆಗಲಿ ನೀವು ಮಾತ್ರ ಹಣ್ಣು, ತರಕಾರಿಗಳನ್ನು ಕೊಳ್ಳುವ ಮುನ್ನ ಒಂದೆರಡು ಬಾರಿ ಪರೀಕ್ಷಿಸಿ ಕೊಂಡುಕೊಳ್ಳಿ. ಇಲ್ಲದಿದ್ದರೆ ಗೊತ್ತಲ್ಲವೇ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ.

Comments are closed.