ಕರಾವಳಿ

ಒಣಹಣ್ಣು(ಡ್ರೈ ಫೂಟ್ )ನ್ನು ಯಾವ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

ಕುರುಕುಲು ತಿಂಡಿ ತಿನ್ನುವ ಬದಲು ಒಣಹಣ್ಣು, ಬೀಜಗಳನ್ನು ತಿನ್ನುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಫಲವಸ್ತುಗಳಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದ ಆ್ಯಂಟಿ ಒಕ್ಸಿಡೆಂಟ್ ಗಳು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳಲ್ಲಿ ಇರುತ್ತವೆ. ಈ ಆ್ಯಂಟಿ ಒಕ್ಸಿಡೆಂಟ್ ಗಳು ಉರಿಯೂತ ತಡೆಯಲು ಮತ್ತು ದೇಹಕ್ಕೆ ಉಂಟಾಗುವ ಹಾನಿಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಒಣ ಬೀಜಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ನಾರಿನಂಶ, ಆರೋಗ್ಯಕರ ಕೊಬ್ಬು, ವಿಟಮಿನ್ಸ್ ಮತ್ತು ಖನಿಜಾಂಶಗಳಿರುತ್ತವೆ. ಇವುಗಳ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ, ರಕ್ತನಾಳಗಳ ಕಾರ್ಯವನ್ನು ಉತ್ತಮಗೊಳಿಸಿ ಕೀಲುಗಳು ಮತ್ತು ಮಾಂಸಖಂಡಗಳನ್ನು ಧೃಢವಾಗಿಸುತ್ತದೆ.

ಆದರೆ ಕೆಲವು ಒಣ ಬೀಜಗಳಲ್ಲಿ ಕೊಬ್ಬಿನಂಶ ಅಧಿಕವಾಗಿರುವುದರಿಂದ ಅದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಾರದೆಂದರೆ ಅದನ್ನು ಕೆಲವು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕಾಗುತ್ತದೆ.

‘ನಟ್ಸ್ ಗಳಲ್ಲಿ ಕಬ್ಬಿಣಾಂಶ, ವಿಟಮಿನ್ಸ್, ಖನಿಜಾಂಶಗಳು, ಕ್ಯಾಲ್ಶಿಯಂ, ಒಮೆಗಾ 3 ಎಂಬ ಪೋಷಕಾಂಶಗಳು ಮಾತ್ರವಲ್ಲದೆ, ತಾಮ್ರ, ಮ್ಯಾಂಗನೀಸ್, ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಝಿಂಕ್ ಅಂಶಗಳೂ ಹೇರಳವಾಗಿವೆ. ಇವನ್ನೆಲ್ಲಾ ದೇಹದ ಶಕ್ತಿ ವರ್ಧಕಗಳೆಂದು ಕರೆಯುತ್ತೇವೆ. ಇವು ನಮ್ಮ ಆರೋಗ್ಯಕ್ಕೆ ಗರಿಷ್ಠ ಮಟ್ಟದ ಲಾಭ ದೊರಕಿಸಿ ಕೊಡಬೇಕಾದರೆ ದಿನದ ಯಾವ ಸಮಯದಲ್ಲಿ ಸೇವಿಸಬೇಕೆಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ’. ಎನ್ನುತ್ತಾರೆ ನ್ಯೂಟ್ರಿಷನಿಸ್ಟ್ ಮೆಹರ್ ರಾಜ್ ಪೂತ್.

ನಿಮಗೆ ಒಣಹಣ್ಣುಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಪೋಷಕಾಂಶಗಳು ದೇಹ ಸೇರಬೇಕೆಂದಾದರೆ ಅವುಗಳನ್ನು ಬೆಳಗ್ಗಿನ ಸಮಯದಲ್ಲಿ ಸೇವಿಸಬೇಕು. ಬೆಳಗ್ಗಿನ ಉಪಹಾರದ ಜೊತೆಯಲ್ಲಿ ಇವುಗಳನ್ನು ತಿನ್ನುವುದರಿಂದ ಬಳಲಿಕೆ ಕಡಿಮೆಯಾಗಿ ರಕ್ತದೊತ್ತಡದ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಹೊರಹಾಕುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಯಾವ ಒಣಹಣ್ಣುಗಳನ್ನು ಯಾವ ಸಮಯದಲ್ಲಿ ಸೇವಿಸಬೇಕೆಂದು ತಿಳಿದುಕೊಳ್ಳೋಣ ಬನ್ನಿ;
ಬೆಳಿಗ್ಗೆ:
ಬಾದಾಮಿಯನ್ನು ಬೆಳಗ್ಗೆ ತಿಂದರೆ ಅದು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹಲವು ಪೋಷಕಾಂಶಗಳಿಂದ ಶ್ರೀಮಂತವಾಗಿರುವ ಬಾದಾಮಿ ದಿನವನ್ನು ಪ್ರಾರಂಭ ಮಾಡಲು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.

ಸಂಜೆ:
ಪಿಸ್ತಾ, ಗೋಡಂಬಿಯನ್ನು ಸಂಜೆ ತಿಂದರೆ ಒಳ್ಳೆಯದು. ಯಾಕೆಂದರೆ ಇಡೀ ದಿನ ದಣಿದ ದೇಹಕ್ಕೆ ಇಮ್ಯುನಿಟಿ ಒದಗಿಸಿ ಶಕ್ತಿ, ಚೈತನ್ಯವನ್ನು ವರ್ಧಿಸುತ್ತದೆ. ಸಂಜೆ ಕುರುಕುಲು ತಿನ್ನಬೇಕೆನಿಸಿದರೆ ಈ ಒಣಬೀಜಗಳು ಒಂದು ಅತ್ಯುತ್ತಮ ಆಯ್ಕೆ.

ರಾತ್ರಿ:
ವಾಲ್ನಟ್ ಅಥವಾ ಆಕ್ರೋಟ್ , ಒಣದ್ರಾಕ್ಷಿ ಮತ್ತು ಖರ್ಜೂರ ರಾತ್ರಿ ತಿಂದರೆ ಉತ್ತಮ. ಇವುಗಳಲ್ಲಿ ಅಧಿಕವಾಗಿರುವ ನಾರಿನಂಶ ನಿಮ್ಮ ಜೀರ್ಣಕ್ರೀಯೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ನೀವು ರಾತ್ರಿ ಸೇವಿಸಿ ಮಲಗುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಯಾವುದನ್ನು ಯಾವ ಸಮಯದಲ್ಲಿ ಸೇವಿಸಲೇಬಾರದು?
ಗೋಡಂಬಿಯನ್ನು ರಾತ್ರಿ ತಿನ್ನಲೇಬಾರದು. ಇದನ್ನು ತಿಂದು ಮಲಗಿದರೆ ಹೊಟ್ಟೆ ಉಬ್ಬರಗೊಂಡು ಅಜೀರ್ಣದ ಸಮಸ್ಯೆ ಕಾಡಬಹುದು. ಇದು ನಿಮ್ಮ ನಿದ್ದೆಯ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ, ಎಣ್ಣೆಯಲ್ಲಿ ಕರಿದ ಅಥವಾ ಚಾಕೋಲೇಟ್ ಗಳಿಂದ ಕೂಡಿರುವ ಒಣಬೀಜಗಳನ್ನು ಅಪ್ಪಿತಪ್ಪಿಯೂ ರಾತ್ರಿ ವೇಳೆ ಸೇವಿಸಬಾರದು.

ದಿನಕ್ಕೆ ಎಷ್ಟು ಒಣಬೀಜಗಳನ್ನು ಸೇವಿಸಬಹುದು?
ಒಬ್ಬರು ಒಂದು ದಿನಕ್ಕೆ ಒಂದು ಮುಷ್ಟಿ ಅಂದರೆ ಸುಮಾರು 20 ರಿಂದ 25 ಒಣಬೀಜಗಳನ್ನು ಸೇವಿಸಬಹುದು. ಇದು ಮೇಲೆ ತಿಳಿಸಿದ ಸಮಯದಲ್ಲಿಯೇ ತಿನ್ನಬೇಕು.

Comments are closed.