ಕರಾವಳಿ

ಕೋಟೇಶ್ವರ ಹಳೆಅಳಿವೆಯಲ್ಲಿ ತೀವ್ರಗೊಂಡ ಕಡಲ್ಕೊರೆತ; ಅಪಾಯದಲ್ಲಿದೆ ಮನೆಗಳು, ರಸ್ತೆ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯಿತಿ, ಕೋಡಿ ಹಳೆ‌ಅಳವೆಯಲ್ಲಿ ತೀವ್ರ ಕಡಲ ಕೊರೆತ ಸಂಭವಿಸಿದ್ದು, ಸೋಮವಾರ ಸಂಜೆ ಮನೆ ಅಂಗಳಕ್ಕೂ ಅಲೆ ನುಗ್ಗಿದ್ದು, ಪರಿಸರ ವಾಸಿಗಳು ಆತಂಕ ಮೂಡಿಸಿದೆ.

ಕಳೆದ ಮೂರು ದಿನದಿಂದ ಕೋಡಿ ಪರಿಸರದಲ್ಲಿ ಕಡಲ ಅಬ್ಬರ ಜಾಸ್ತಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಅಲೆಗಳ ಉಕ್ಕಿ ಸಮುದ್ರ ತೀರದಲ್ಲಿ ಹಾಕಿದ ತಡೆ ಗೋಡೆ ದಾಟಿ ಮನೆ ಅಂಗಳಕ್ಕೆ ಅಪ್ಪಳಿಸಿದೆ. ತಡೆಗೋಡೆ ಕಲ್ಲು ಸಮುದ್ರಕ್ಕೆ ಜಾರಿಕೊಂಡಿದೆ. ಅಲೆ ರಭಸಕ್ಕೆ ತಡೆ ಗೋಡೆ ಕಲ್ಲಿನ ಸಂಧುಗಳಲ್ಲಿ ನೀರು ನುಗ್ಗಿ ಹತ್ತಾರು ಮಾರು ಡಾಮರ್ ರಸ್ತೆ ಒಳಭಾಗದಲ್ಲಿ ಟೊಳ್ಳು ಕೊರೆದಿದ್ದು, ರಸ್ತೆ ಕೂಡಾ ಅಪಾಯದಲ್ಲಿದೆ. ಒಂದು ಕಡೆ ಭೂಮಿ ಕೂಡಾ ಹೊಂಡ ಬಿದ್ದು, ತಡೆಗೋಡೆ ಕಲ್ಲು ಮಣ್ಣಲ್ಲಿ ಹೂತು ಹೋಗಿದೆ. ಎಂ.ಕೋಡಿಯಲ್ಲೂ ಅಲೆಗಳ ಅಬ್ಬರವಿದ್ದು, ತಡೆಗೋಡೆ ಒಂದು ಬದಿ ಸಮುದ್ರಕ್ಕೆ ಜಾರಿಕೊಂಡಿದೆ.

ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೂ ಕಡಲು ಕೊರೆತ ಅಪಾಯ ತಂದಿದ್ದು, ಅಲ್ಲೇ ಇರುವ ಟ್ರಾನ್ಸ್‌ಫಾರಮ್ ಕೂಡಾ ಅಪಾಯದಲ್ಲಿದೆ. ಕಳೆದ ಹತ್ತು ವರ್ಷದ ಹಿಂದೆ ಸಮುದ್ರ ಕೊರೆತದ ಬಾಧೆ ತೀವ್ರವಾಗಿ ಕಾಡಿದ್ದು, ತಡೆಗೋಡೆ ನಿರ್ಮಿಸಿದ ನಂತರ ಮೊದಲಬಾರಿ ಅಲೆ ಮನೆ ಅಂಗಳಕ್ಕೆ ಬಂದಿದೆ. ಕಡಲು ಹೀಗೆ ಮುಂದೆ ಬಂದರೆ ಪರಿಸರದಲ್ಲಿ ೬೦ಕ್ಕೂ ಮಿಕ್ಕ ಮನೆಯಿದ್ದು, ಅಪಾಯ ಸಂಭವಿಸಿವ ಆತಂಕವಿದೆ. ತಕ್ಷಣ ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕುಂದಾಪುರ ಇ‌ಒ ಕಿರಣ್ ಫೆಡ್ನೇಕರ್, ಎಡ್ಲ್ಯೂ ನಾಗರಾಜ್, ಕಂದಾಯ ನಿರೀಕ್ಷಕ ನರಸಿಂಹ ಕಾಮತ್, ಕೋಟೇಶ್ವರ ಗ್ರಾಮ ಕರಣಿಕ ದಿನೇಶ್ ಹೂದಾರ್, ಪಿಡಿ‌ಓ ರೇಣುಕಾ ಹೆಗ್ಡೆ, ಕುಂದಾಪುರ ಗ್ರಾಮ ಕರಣಿಕ ಸೋಮಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಳೆ‌ಅಳವೆ ಕಡಲ ಕೊರೆತ ಕಳೆದ ಮೂರು ದಿನದಿಂದ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ಏಕಾ‌ಏಕಿ ನೀರು ರಸ್ತೆ ದಾಟಿ ಮನೆ ಅಂಗಳಕ್ಕೂ ಬಂದಿದ್ದು, ಸ್ಥಳೀಯ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕಡಲ ಕೊರೆತದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಗಮನಕ್ಕೆ ತಂದಿದ್ದು, ತುರ್ತು ಕಲ್ಲು ಹಾಕುವ ಮೂಲಕ ತಾತ್ಕಾಲಿಕ ಪರಿಹಾರ ಮಾಡುವ ಭರವಸೆ ನೀಡಿದ್ದಾರೆ. ಕಲ್ಲು ಹಾಕಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಎಸಿ ಸೂಚಿಸಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹಳೆ‌ಅಳವೆ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರದ ಜರೂರತ್ತಿದೆ.
– ಜಾನಕಿ ಬಿಲ್ಲವ, ಅಧ್ಯಕ್ಷೆ ಗ್ರಾಮ ಪಂಚಾಯಿತಿ ಕೋಟೇಶ್ವರ.

ಕೋಡಿ ಹಳೆ‌ಅಳವೆ ಕಡಲು ಕೊರೆತ ಈಗತಾನೆ ಗಮನಕ್ಕೆ ಬಂದಿದ್ದು, ನಾಳೆ ಬೆಳಗ್ಗೆ ಕಡಲು ಕೊರತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತಾತ್ಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಡಿಸಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ ಕುಂದಾಪುರ.

Comments are closed.