ಕರಾವಳಿ

ಕರ್ಕಷ ಸೈಲೆನ್ಸರ್ ಹಾಕಿದ್ರೆ ಹುಷಾರು; ಬುಲೆಟ್ ಸವಾರರಿಗೆ ಎಚ್ಚರಿಕೆ ನೀಡಿದ್ರು ಕುಂದಾಪುರ ಪೊಲೀಸರು!

Pinterest LinkedIn Tumblr

ಕುಂದಾಪುರ: ನೋಡ್ರಪ್ಪಾ… ಇಂತಹ ಕರ್ಕಷ ಸೈಲೆನ್ಸರ್ ಹಾಕೋ ಹಾಗಿಲ್ಲ. ನಾವು ಈ ಬಗ್ಗೆ ಕಾರ್ಯಾಚರಣೆಗಿಳಿದಾಗಿದೆ. ಇದು ನಿಮಗೆ ಕಿರುಕುಳ ಕೊಡಲು ಮಾಡಿದ್ದಲ್ಲ. ಮರ್‍ಯಾದೆಯಿಂದ ಬುಲೇಟ್ ತರಿಸಿಕೊಂಡು ಸೈಲೆನ್ಸರ್ ನಿಮ್ಮಿಂದಲೇ ತೆರವು ಮಾಡಿ ಹಳೆ ಸೈಲೆನ್ಸರ್ ಹಾಕಿ. ಮತ್ತೆ ಇದು ಪುನರಾವರ್ತನೆಯಾದ್ರೆ ನಿಮ್ಮ ಬೈಕ್ ವಶಕ್ಕೆ ಪಡೆಯೋದು ಖಚಿತ………

ಹೀಗೆ ಯುವಕರಿಗೆ ಖಡಕ್ ಎಚ್ಚರಿಕೆ ನೀಡಿದ್ದು ಕುಂದಾಪುರ ಪೊಲೀಸ್ ಠಾಣೆ ಎಸ್‌ಐ ಹರೀಶ್ ನಾಯ್ಕ್. ತಮ್ಮ ಬುಲೆಟ್ ಬೈಕ್ ಸೈಲೆನ್ಸರ್‌ಗಳನ್ನು ಬದಲಾಯಿಸಿಕೊಂಡು ಕರ್ಕಷ ಶಬ್ದದ ಮೂಲಕ ಸಾರ್ವಜನಿಕರಿಗೆ ಸಮಸ್ಯೆಯುಂಟು ಮಾಡುತ್ತಿದ್ದ ಬುಲೆಟ್‌ಗಳನ್ನು ಕುಂದಾಪುರ ಪೊಲೀಸರು ಸೋಮವಾರ ಬೆಳಿಗ್ಗೆ ದಿಢೀರ್ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಠಾಣೆಗೆ ತಂದು ಬೈಕ್ ಓಡಿಸುತ್ತಿದ್ದ ಯುವಕರಿಗೆ ಕ್ಲಾಸ್ ತೆಗೆದುಕೊಂಡ ಪರಿಯಿದು.

ಕುಂದಾಪುರ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿರುವ ಬುಲೆಟ್‌ಗಳು ಹಾಗೂ ಕೆಲವು ದುಬಾರಿ ಬೆಲೆಯ ಬೈಕ್‌ಗಳು ಅತಿ ಹೆಚ್ಚು ಪ್ರಮಾಣದಲ್ಲಿ ಕರ್ಕಶ ಶಬ್ದ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಈ ಹಿಂದೆ ಹಲವು ದೂರುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಸಿಪಿ‌ಐ ಮಂಜಪ್ಪ ನೇತೃತ್ವದಲ್ಲಿ ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಬೈಕ್‌ಗಳ ಸವಾರರು ಸೈಲೆನ್ಸರ್‌ಗಳನ್ನು ಮಾರ್ಪಡಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕಾರ್ಯಾಚರಣೆಗಿಳಿದ ಪೊಲೀಸರು ನಾಲ್ಕು ಬುಲೆಟ್ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ತಂದು ಬೈಕ್‌ಗೆ ಅಳವಡಿಸಿರುವ ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ಸವಾರರಿಂದಲೇ ತೆಗೆಸಿ ಕಂಪೆನಿ ಸೈಲೆನ್ಸರ್‌ಗಳನ್ನು ಅಳವಡಿಸಿದ ಬಳಿಕ ಅವರಿಗೆ ದಂಡ ವಿಧಿಸಿ ಬೈಕ್ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ..
ಕುಂದಾಪುರ ಪೊಲೀಸರ ಈ ಕಾರ್ಯ ಜನರ ಶ್ಲಾಘನೆಗೆ ಪಾತ್ರವಾಗಿದೆ. ಇನ್ನು ತಾಲೂಕಿನ ಕೆಲವೆಡೆ ನಾಗರಿಕರ ನೆಮ್ಮದಿಗೆ ಭಂಗ ತರುತ್ತಿರುವ ಬೈಕ್‌ಗಳ ಕರ್ಕಶ ಶಬ್ದಗಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕಿದೆ. ಕರ್ಕಶ ಹಾರ್ನ್ ಗಳನ್ನು ಹೊಂದಿರುವ ವಾಹನಗಳನ್ನೂ ಜಪ್ತಿ ಮಾಡಬೇಕು. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಬೇಕು ಎಂದು ಸಾರ್ವಜನಿಕರು ಇಲಾಖೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಿಪಿ‌ಐ ಮಂಜಪ್ಪ ಹಾಗೂ ಉಪನಿರೀಕ್ಷ ಹರೀಶ್ ಆಶ್ವಾಸನೆ ನೀಡಿದ್ದಾರೆ.

ಪೊಲೀಸರಿಂದ ಇನ್ನೇನು ಆಗಬೇಕು..?
ಕುಂದಾಪುರ-ಕೋಟೇಶ್ವರ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಬಹುತೇಕ ಸಭಾಂಗಣ, ಹೊಟೇಲ್, ಆಸ್ಪತ್ರೆ, ಗ್ಯಾರೆಜ್, ದೇವಸ್ಥಾನಗಳಿರುವ ಭಾಗದಲ್ಲಿ ಸರ್ವೀಸ್ ರಸ್ತೆಗಳಲ್ಲಿ ತಮ್ಮ ವಾಹನ ನಿಲ್ಲಿಸಿ ಹೋಗುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನು ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ಕುಂದಾಪುರ-ಭಟ್ಕಳ ಬಸ್ಸುಗಳನ್ನು ಬಹಳಷ್ಟು ಸಮಯ ನಿಲ್ಲಿಸಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಕುಂದಾಪುರ ಪೇಟೆಯಲ್ಲಿ ಏಕಮುಖ ಸಂಚಾರದ ನಿಯಮ ಉಲ್ಲಂಘನೆ, ಕರ್ಕಷ ಹಾರ್ನ್, ಬಸ್ಸಿನ ಪೂಟ್ ಬೋರ್ಡ್ ಭಾಗದಲ್ಲಿ ಜನ ನಿಲ್ಲುವುದು, ರ್‍ಯಾಶ್ ಡ್ರೈವ್, ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗ್ಗೆ ದೂರುಗಳಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕಿದೆ.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.