ಕರಾವಳಿ

ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭ : ಜಿಲ್ಲಾದ್ಯಂತ ವ್ಯಾಪಕ ಬಂದೋಬಸ್ತ್

Pinterest LinkedIn Tumblr

ಮಂಗಳೂರು ಮಾರ್ಚ್ 22 : 2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದ್ದು. ಪ್ರಸಕ್ತ ವರ್ಷದ ಪರೀಕ್ಷೆಯು ನಾಳೆ ರಾಜ್ಯಾದ್ಯಂತ ಪ್ರಾರಂಭವಾಗಿ, ಏಪ್ರಿಲ್ 6ರವರೆಗೆ ನಡೆಯಲಿದೆ.

ಜಿಲ್ಲೆಯಲ್ಲಿ ಈ ವರ್ಷ ಪರೀಕ್ಷೆಗೆ ಒಟ್ಟು 32786 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಅದರಲ್ಲಿ 17364 ಗಂಡು ಮಕ್ಕಳು ಹಾಗೂ 15422 ಹೆಣ್ಣು ಮಕ್ಕಳು ಸೇರಿದ್ದಾರೆ. ಈ ಪೈಕಿ 28966 ಶಾಲಾ ವಿದ್ಯಾರ್ಥಿಗಳು, 2263 ಶಾಲಾ ಪುನರಾವರ್ತಿತ ಅಭ್ಯರ್ಥಿಗಳು, 1215 ಖಾಸಗಿ ಅಭ್ಯರ್ಥಿಗಳು ಹಾಗೂ 342 ಖಾಸಗಿ ಪುನಾರವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 94 ಪರೀಕ್ಷಾ ಕೇಂದ್ರಗಳಿದ್ದು ಅವುಗಳ ತಾಲೂಕುವಾರು ಬಂಟ್ವಾಳ 17, ಬೆಳ್ತಂಗಡಿ 13 , ಮಂಗಳೂರು ಉತ್ತರ 21, ಮಂಗಳೂರು ದಕ್ಷಿಣ 20, ಮೂಡಬಿದ್ರೆ 4, ಪುತ್ತೂರು 12, ಸುಳ್ಯ 7 ಕೇಂದ್ರಗಳಿವೆ. ಖಾಸಗಿ ಅಭ್ಯರ್ಥಿಗಳಿಗೆ 4 ಪರೀಕ್ಷಾ ಕೇಂದ್ರಗಳು ಮಂಗಳೂರು ಉತ್ತರ ವ್ಯಾಪ್ತಿಯಲ್ಲಿದೆ.

2018ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ಹಾಜರಾಗಲಿದ್ದು ಇದಕ್ಕಾಗಿ ಎಲ್ಲಾ 7 ವಲಯಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಆಸನಗಳ ಲಭ್ಯತೆಯಿರುವ 94 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು ಒಟ್ಟು 1448 ಪರೀಕ್ಷಾ ಕೊಠಡಿಗಳು ಲಭ್ಯವಿರುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಪೂರ್ವಭಾವಿ ಸಭೆ ನಡೆದಿದ್ದು, ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಚಕ್ಷಣ ಜಾಗೃತ ದಳ :

ಜಿಲ್ಲೆಯ 7 ವಲಯಗಳ 94 ಪರೀಕ್ಷಾ ಕೇಂದ್ರಗಳ ಪರೀಕ್ಷಾ ಪ್ರಕ್ರಿಯೆ ವೀಕ್ಷಣೆಗೆ ಅಗತ್ಯವಿರುವಷ್ಟು ಜಿಲ್ಲಾ ಹಂತದ ವಿಚಕ್ಷಣಾ ದಳವನ್ನು ನೇಮಿಸಲಾಗಿದೆ. ಅಲ್ಲದೇ 94 ಮುಖ್ಯ ಅಧೀಕ್ಷಕರು, 31 ಉಪ ಮುಖ್ಯ ಅಧೀಕ್ಷಕರು ಹಾಗೂ 94 ಕಸ್ಟೋಡಿಯನ್‍ಗಳನ್ನು ನೇಮಿಸಲಾಗಿದೆ.

ಮುದ್ರಕರಿಂದ ಗೌಪ್ಯವಾಗಿ ಸರಬರಾಜಾಗುವ ಜಿಲ್ಲೆಗೆ ಸಂಬಂಧಿಸಿದ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್‍ಗಳನ್ನು ಮಂಗಳೂರಿನಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವೀಕರಿಸಲಿದ್ದು, ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್‍ಗಳನ್ನು ಜಿಲ್ಲಾ ಖಜಾನೆಯಲ್ಲಿ ಹಾಗೂ ಉಳಿದ 5 ವಲಯಗಳ ಗೌಪ್ಯ ಪ್ರಶ್ನೆ ಪತ್ರಿಕೆ ಬಂಡಲ್‍ಗಳನ್ನು ಆಯಾ ತಾಲೂಕಿನ ಉಪಖಜಾನೆಯಲ್ಲಿ ಸಂರಕ್ಷಿಸಿಡಲಾಗಿದೆ.

ಈ ಬಗ್ಗೆ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಾಗಾಟದ ವಾಹನದಲ್ಲಿ ಖುದ್ಧು ಉಪಸ್ಥಿತರಿದ್ದು ಸುರಕ್ಷಿತ ಸಾಗಾಟಕ್ಕೆ ಕ್ರಮವಹಿಸಲಿದ್ದಾರೆ. ಇದರ ಜೊತೆಗೆ ಪೊಲೀಸ್ ಗಾರ್ಡ್‍ಗಳನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಆಯಾ ಪರೀಕ್ಷಾ ದಿನದಂದು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಭದ್ರತಾ ಕೊಠಡಿಯಲ್ಲಿಡಲಾಗುತ್ತದೆ.

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರಮುಖ ವಿಷಯಗಳ ವೇಳಾಪಟ್ಟಿ: 

ಮಾರ್ಚ್ 23 ಪ್ರಥಮ ಭಾಷೆ, ಮಾರ್ಚ್ 26 ಗಣಿತ, ಮಾರ್ಚ್ 28 ಇಂಗ್ಲೀಷ್, ಏಪ್ರಿಲ್ 2 ವಿಜ್ಞಾನ, ಏಪ್ರಿಲ್ 4 ತೃತೀಯ ಭಾಷೆ , ಏಪ್ರಿಲ್ 6 ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಒಟ್ಟು 2 ಗಂಟೆ 45 ನಿಮಿಷ ಇರಲಿದೆ. ಇದಲ್ಲದೇ, ಪ್ರತೀ ಪರೀಕ್ಷೆಯ ಆರಂಭದಲ್ಲಿ 15 ನಿಮಿಷ ಪ್ರಶ್ನೆ ಪತ್ರಿಕೆಗಳನ್ನು ಓದಲು ಮೀಸಲಿರಿಸಲಾಗಿದೆ.

Comments are closed.