ಕರಾವಳಿ

ಕಾಡು ಉಳಿದರೆ ನಾಡು ಉಳಿಯುತ್ತದೆ, ಅರಣ್ಯ ರಕ್ಷಣೆಯ ಹೊಣೆ ನಮ್ಮೆಲ್ಲರದ್ದು : ಪತ್ರಕರ್ತ ಮಹೇಶ್ ನಾಯಕ್

Pinterest LinkedIn Tumblr

ಮಂಗಳೂರು, ಮಾರ್ಚ್. 22 : ಆಂಟಿ ಪೊಲ್ಯೂಷನ್ ಡ್ರೈವ್ ಪ್ರತಿಷ್ಠಾನ (ಎಪಿಡಿ)ವು ರಾಜ್ಯ ಅರಣ್ಯ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಆಂಟನಿ ವೇಸ್ಟ್ ಹ್ಯಾಡ್ಲಿಂಗ್ ಸೆಲ್‌ನ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ 6ನೇ ಅರಣ್ಯ ದಿನವನ್ನು ತಣ್ಣೀರುಬಾವಿ ಟ್ರೀಪಾರ್ಕ್‌ನಲ್ಲಿ ಆಚರಿಸಿತು.

ಪತ್ರಕರ್ತ ಮಹೇಶ್ ನಾಯಕ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, `ಒಂದು ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮಂಗಳೂರು ಇಂದು ಮರಗಳಿಗಿಂತ ಎತ್ತರದ ಕಟ್ಟಡಗಳಿಂದ ತುಂಬಿವೆ. ಇದರಿಂದ ನಗರದ ನೈಸರ್ಗಿಕ ಸೌಂದರ್ಯ ಅಳಿಸಿಹೋಗಿದೆ. ಮಂಗಳೂರು ಇಂದು ಕಾಂಕ್ರೀಟ್ ಕಾಡಾಗಿ, ಇಲ್ಲಿಯ ಸ್ವಚ್ಛ ಮತ್ತು ಹಸಿರು ವಾತಾರಣ ನಾಶವಾಗಿದೆ. ಕಾಡು ಮತ್ತು ನಗರ ಹಸುರೀಕರಣ ಭಿನ್ನವಾಗಿರಬೇಕೆಂದ ಅವರು, ಕಾಡು ನಮ್ಮ ಅಮೂಲ್ಯ ಸಂಪತ್ತು, ಕಾಡು ಉಳಿದರೆ ನಾಡು ಉಳಿಯಬಹುದು. ಆದ್ದರಿಂದ ಅರಣ್ಯ ರಕ್ಷಣೆಯ ಹೊಣೆ ನಮ್ಮೆಲ್ಲರದ್ದು ಎಂದರು.

ಮುಖ್ಯ ಅತಿಥಿ ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ಅರಣ್ಯಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉಳಿದ ದೇಶಗಳು ಅರಣ್ಯನಾಶವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಭಾರತದಲ್ಲಿ ಮೂರ್ಖರಂತೆ ಅರಣ್ಯ ಸಂಪತ್ತನ್ನು ನಾಶ ಮಾಡಲಾಗುತ್ತಿದೆ. ಇದರಿಂದಾಗಿರುವ ಪ್ರತಿಕೂಲ ಪರಿಣಾಮವು ಸರಕಾರ ಮತ್ತು ಜನರಿಗೆ ಅರ್ಥವಾಗಿದೆ. ಅರಣ್ಯ ದಿನವನ್ನು ಆಚರಿಸುವ ಮೂಲಕ ಮರ ಕಡಿಯದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಎಪಿಡಿಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ ಎ. ರೆಹಮಾನ್ ಮಾತನಾಡಿ, ವರ್ಷದ ಎಲ್ಲಾ ಪರಿಸರ ಸ್ನೇಹಿ ದಿನಗಳನ್ನು ಆಚರಿಸುವ ತನ್ನ ನಿರ್ಣಯದಂತೆ ಅರಣ್ಯ ದಿನವನ್ನು ಎಪಿಡಿ ಆಚರಿಸುತ್ತಿದೆ. ಮಂಗಳೂರು ನಗರದಲ್ಲಿ ಹೋರ್ಡಿಂಗ್ಸ್ ಜಾಹೀರಾತುಗಳು ಹೆಚ್ಚುತ್ತಿದ್ದು ಹೋಡಿಂಗ್ಸ್ ಜಾಹೀರಾತುಗಳಿಗಾಗಿ ಮರಗಳನ್ನು ಕಡಿತಗೊಳಿಸದೆ ಜಾಹೀರಾತು ಪ್ರದರ್ಶಿಸುವ ಪ್ರಜ್ಞೆ ಬೆಳೆಯಬೇಕಿದೆ. ಆಗ ನಗರದಲ್ಲಿಯೂ ಮರಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಲಿದೆ ಎಂದರು.

ನಗರದ ಸಂತ ಅಲೋಶಿಯಸ್ ಕಾಲೇಜು, ಎಸ್‌ಡಿ‌ಎಂ ಮತ್ತು ರಥಬೀದಿಯ ದಯಾನಂದ ಪೈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಭವಿಷ್ಯಕ್ಕಾಗಿ ಪ್ರಕೃತಿ ಉಳಿಯಬೇಕೆಂಬ ಕಾಳಜಿಯನ್ನು ವ್ಯಕ್ತಪಡಿಸಿದರು.

ಅರಣ್ಯ ಕುರಿತಂತೆ ಈ ಸಂದರ್ಭ ನಡೆದ ಚರ್ಚಾ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ವಿಶ್ವಜಿತ್ ಬೋಪಣ್ಣ, ಆಕಾಶ್ ಜಿ.ಎಸ್. ಮತ್ತು ರಿಯಾ ಟಾಮಿ ಬಹುಮಾನ ಪಡೆದರೆ, ಕ್ವಿಜ್ ಸ್ಪರ್ಧೆಯಲ್ಲಿ ಅದೇ ಕಾಲೇಜಿ ಪ್ರಿತೇಶ್ ರೇ ಪ್ರಭು ಮತ್ತು ಅನ್ನಮರಿಯಾ ಜಾನಿ ಬಹುಮಾನ ಪಡೆದರು.

ಭಿತ್ತಿ ಪತ್ರ ರಚನೆ ಸ್ಪರ್ಧೆಯಲ್ಲಿ ಎಸ್‌ಡಿ‌ಎಂ ಕಾಲೇಜಿನ ಶ್ರೀಜಿತ್ ಆರ್. ಮತ್ತು ಅಭಿಲಾಷ್ ಶೆಣೈ ಪ್ರಥಮ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ವಿಶ್ವಜಿತ್ ಬೋಪಣ್ಣ, ಲಾಲುಕುರಿಯನ್ ದ್ವಿತೀಯ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರಿಯಾ ಟಾಮಿ ಮತ್ತು ಅಭಿಲಾಷ್ ಶೆಣೈ ಬಹುಮಾನ ಪಡೆದರು.

Comments are closed.