ಕರಾವಳಿ

ಸಿಎಂ ಸಿದ್ದರಾಮಯ್ಯ ಅವರದ್ದು ‘ಐರನ್ ಲೆಗ್’: ಬಿಜೆಪಿ ಸುರಕ್ಷಾ ಪಾದ ಯಾತ್ರೆಯಲ್ಲಿ ಮುರಳೀಧರ ರಾವ್

Pinterest LinkedIn Tumblr

ಕುಂದಾಪುರ: ರಾಜ್ಯದ ಜನರು ಕಾಂಗ್ರೆಸ್ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಜನವಿರೋಧಿ ನೀತಿಯಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ಸರ್ಕಾರ ಬಿಜೆಪಿಯದ್ದಾಗಿದ್ದು, ಹಿಂದೂ ವಿರೋಧಿ, ಓಲೈಕೆ ರಾಜಕಾರಣಕ್ಕೆ ರಾಜ್ಯದ ಜನ ತಕ್ಕ ಉತ್ತರ ಕೊಡಲಿದ್ದಾರೆ. ರಾಹುಲ್ ಗಾಂಧಿ ಹೋದೆಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ. ಸಿದ್ದರಾಮಯ್ಯ ರಾಹುಲ್ ಜತೆ ಹೋಗುತ್ತಿದ್ದು, ಅವರದ್ದು ಐರನ್ ಲೆಗ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಕುಂದಾಪುರ ಶಾಸ್ತ್ರಿ ಪಾರ್ಕ್ ಬಳಿ ನಡೆದ ಬಿಜೆಪಿ ಜನ ಸುರಕ್ಷಾ ಪಾದಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಬ್ಯಾನರ್ ಹಾಗೂ ಕಟೌಟುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಂಬರ್ ಒನ್ ಎಂದು ಸಿದ್ದರಾಮಯ್ಯ ಹಾಕಿಸಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ಕೇಡಿ ನಂಬರ್ ಒನ್ ಸಿದ್ದರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಹಗಲು ಮುಖ್ಯಮಂತ್ರಿಯಾದರೆ ರಾತ್ರಿ ಕರ್ನಾಟಕದ ನಂಬರ್ ಒನ್ ಡಾನ್ ಎಂದು ಆರೋಪಿಸಿದರು. ಸಿಎಂ ಅವರಿಗೆ ಸರ್ದಾರ್ ವಲ್ಲಬಾಯಿ ಪಟೇಲ್ ಜಯಂತಿ ಮಾಡಲು ಆಗಲ್ಲ. ಆದರೇ ಟಿಪ್ಪುವಿನ ಜಯಂತಿ ಮಾಡುತ್ತಾರೆ. ರಾಜ್ಯದಲ್ಲಿ ಎಲ್ಲಾ ವಿಚಾರದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಎಂದರು.

ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ದೇಶ, ರಾಜ್ಯ, ಧರ್ಮಕ್ಕೆ ಮಡಿದವರ ಬಗ್ಗೆ ಸಿಎಂ ಏನು ಮಾತನಾಡಲ್ಲ. ಈ ಕೊಲೆಗಳ ಬಗ್ಗೆ ಅವರಿಗ್ಯಾಕೆ ಅಸಡ್ಡೆ? ಕೊಲೆಯಾದವರು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇ ತಪ್ಪೇ? ಒಂದೊಮ್ಮೆ ಸಿಎಂ ಮಗ ಹೀಗೆ ಕೊಲೆಯಾದವರ ಸಾಲಿನಲ್ಲಿದ್ದರೇ ಏನು ಮಾಡುತ್ತಿದ್ದರು? ಫೋಟೋಗೆ ಹಾರ ಹಾಕಿದ್ದರೇ ಸಿಎಂ ಏನು ಮಾಡ್ತಿದ್ದರು? ಎಂದು ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ಕೇವಲ ಚುನಾವಣೆ ರಾಜಕಾರಣವನ್ನು ಸಿದ್ದರಾಮಯ್ಯ ಮಾಡ್ತಾ ಇದ್ದಾರೆ. ಅವರೊಬ್ಬ ಅಯೋಗ್ಯ ಮುಖ್ಯಮಂತ್ರಿ ಅನ್ನೊದ್ರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಪಿಸಿದ್ದಾರೆ.

ಮಾಜಿ ಸಂದದ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್‍ಯಕಾರಿಣಿ ಸದಸ್ಯ ಉದಯ ಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಮೀನುಗಾರಿಕಾ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು, ರಾಜ್ಯ ಬಿಜೆಪಿ ಕಾರ್‍ಯಕಾರಿಣಿ ಸದಸ್ಯ ಕಿರಣ್ ಕುಮಾರ್ ಕೊಡ್ಗಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಯುವ ಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ, ಜ್ಯೋತಿ ಉದಯ ಪೂಜಾರಿ, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ನವೀನ್ ಶೆಟ್ಟಿ ಕುತ್ಯಾರು ಇದ್ದರು.

ಕುಂದಾಪುರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್‍ಯದರ್ಶಿ ಶ್ಯಾಮಲಾ ಕುಂದರ್ ವಂದೇ ಮಾತರಂ ಹಾಡಿದರು. ಸದಾನಂದ ಬಳ್ಕೂರು ವಂದಿಸಿದರು.

ಹಾಲಾಡಿ ಜೈಕಾರ..ಅಭಿಮಾನಿಗಳ ಉತ್ಸಾಹ
ಸೋಮವಾರ ಬೆಳಿಗ್ಗೆ ಕುಂದಾಪುರದ ಸಂಗಂ ಜಂಕ್ಷನ್ ಬಳಿ ಜನ ಸುರಕ್ಷಾ ಯಾತ್ರೆಯ ಪಾದಯಾತ್ರೆಗೆ ಕೇಂದ್ರ ಸಚಿವೆ ಮೇನಕಾ ಗಾಂಧಿಚಾಲನೆ ನೀಡಿದರು. ಸುಮಾರು ೮ ಸಾವಿರದಷ್ಟು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಸಂಗಮ್ ಜಂಕ್ಷನ್ ನಿಂದ ಚಿಕ್ಕನ್ಸಾಲ್ ರಸ್ತೆ ಮೂಲಕ ಸಾಗಿದ ಪಾದಯಾತ್ರೆ ಕುಂದಾಪುರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ಶಾಸ್ತ್ರಿ ಸರ್ಕಲ್ ನಲ್ಲಿ ಸಮಾಪನಗೊಂಡಿತು. ಐದು ವರ್ಷಗಳಬಳಿಕ ಕಳೆದ ತಿಂಗಳು ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆಯಾದ ನಂತರ ಬಿಜೆಪಿ ಕಾರ್‍ಯಕ್ರಮದಲ್ಲಿ ಕುಂದಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಣಿಸಿಕೊಂಡು ಅಭಿಮಾನಿಗಳ ಮತ್ತು ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದರು. ಅಲ್ಲದೇ ಸಭೆಯಲ್ಲಿಯು ಕೂಡ ಬಿಜೆಪಿ ನಾಯಕರ ಜತೆ ವೇದಿಕೆಯಲ್ಲಿದ್ದರು.

Comments are closed.