ಕರಾವಳಿ

ಮಂಗಳೂರಿನಲ್ಲಿ ಮೂರು ದಿನಗಳ ವೈನ್ ಮೇಳಕ್ಕೆ ಚಾಲನೆ : ದೇಶವಿದೇಶಗಳ ವೈನ್ ಆಗಮನ – ವೈನ್ ಪ್ರಿಯರಿಗೆ ಸುಗ್ಗಿ

Pinterest LinkedIn Tumblr

ಮಂಗಳೂರು: ಮಂಗಳೂರಿನಲ್ಲಿ ಮೂರು ದಿನಗಳ ದ್ರಾಕ್ಷಾರಸ ( ವೈನ್ ಉತ್ಸವ) ಉತ್ಸವ-2017 ಶುಕ್ರವಾರ ಆರಂಭಗೊಂಡಿದ್ದು, ವೈನ್ ಪ್ರಿಯರ ಮನತಣಿಸಲಿದೆ.

ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಕದ್ರಿ ಪಾರ್ಕ್‌ನಲ್ಲಿ ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ-2017ಕ್ಕೆ ನಿನ್ನೆ ಸಂಜೆ ಚಾಲನೆ ದೊರೆತಿದ್ದು, ಡಿ.8ರಿಂದ 10ರವರೆಗೆ ಈ ವೈನ್ ಮೇಳ ನಡೆಯಲಿದೆ.ಈ ವೈನ್ ಮೇಳಕ್ಕೆ ರೂ.20 ಪ್ರವೇಶ ದರ ನಿಗದಿಪಡಿಸಲಾಗಿದೆ.

ಉತ್ಸವದಲ್ಲಿ ವಿವಿಧ ಕಂಪೆನಿಗಳ 10ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ವಿವಿಧ ಬ್ರ್ಯಾಂಡ್‌ಗಳ ವೈನ್‌ಗಳನ್ನು ಮಾರಾಟಕ್ಕಿಡಲಾಗಿತ್ತು. ಗ್ರಾಹಕರಿಗೆ ರುಚಿ ನೋಡುವ ಅವಕಾಶಗಳನ್ನು ಕೆಲವು ಮಳಿಗೆಗಳಲ್ಲಿ ಏರ್ಪಡಿಸಲಾಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸುಮಾರು 12ರಿಂದ 15 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಉತ್ಸವದಲ್ಲಿ ಪ್ರದರ್ಶಿಸಿದವು.

ಹಳೆಯ ವೈನ್ ಪ್ರದೇಶಗಳಾದ ಯುರೋಪ್ ಖಂಡ ಮತ್ತು ಹೊಸ ವೈನ್ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೆರಿಕ ಮೊದಲಾದ ದೇಶಗಳ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಉತ್ಸವದಲ್ಲಿ ಎಲ್ಲಾ ವೈನ್ ಬ್ರ್ಯಾಂಡ್ ಮಾರಾಟಗಳ ಮೇಲೆ ಶೇ.10ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.

ವೈನ್ ಉತ್ಸವದಲ್ಲಿ ಮಳಿಗೆಯನ್ನು ಹಾಕಿದ್ದ ಬೆಂಗಳೂರಿನ ಗೌತಮ್ ಎಂಬವರು ಸ್ಪೇನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ ಹತ್ತು ದೇಶಗಳ ಬ್ರ್ಯಾಂಡ್‌ಗಳ ವೈನ್‌ಗಳನ್ನು ಮಾರಾಟಕ್ಕೆ ಇರಿಸಿದ್ದರು.

ಈ ಮಳಿಗೆಯಲ್ಲಿ ರೈಡಿಂಗ್ ಹೈ ಎನ್ನುವ ಬ್ರ್ಯಾಂಡ್‌ನ 2008ರ ವೈನ್ ಹಳೆಯ ವೈನ್ ಆಗಿತ್ತು. ಕಳೆದ ಬಾರಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ವೈನ್ ಮೇಳದಲ್ಲಿ ದೊರೆತ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಈ ಬಾರಿಯೂ ಆಯೋಜಿಸಲಾಗಿದೆ. ಕಳೆದ ಬಾರಿ 20 ಲಕ್ಷ ರೂ. ಆದಾಯವಾಗಿತ್ತು.

ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ್ ಮಿರ್ಜಿ ಅವರು, ಮಂಗಳೂರು ಜನರಿಂದ ಅದ್ಭುತ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಶಾಸಕ ಜೆ.ಆರ್.ಲೋಬೋ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಖಾದರ್ ಈ ವೇಳೆ ಉಪಸ್ಥಿತರಿದ್ದರು.

Comments are closed.