ಕರಾವಳಿ

ಪೊಲೀಸ್ ಫೋನ್ ಇನ್ ಕಾರ್ಯಕ್ರಮ : ನಂತೂರು ವೃತ್ತ ಸೇರಿದಂತೆ ವಿವಿಧ ಸಮಸ್ಯೆಗಳ ನಿವಾರಣೆಗೆ ನಾಗರೀಕರ ಆಗ್ರಹ

Pinterest LinkedIn Tumblr

ಮಂಗಳೂರು, ಡಿಸೆಂಬರ್. 9: ಮಂಗಳೂರಿನ ನಂತೂರು ವೃತ್ತವು ಭಾರೀ ಅಪಾಯಕಾರಿಯಾಗಿದೆ. ಅದನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಜರಗಿಸಬೇಕು. ಈ ಜಂಕ್ಷನ್ನಲ್ಲಿರುವ ಅವೈಜ್ಞಾನಿಕ ವೃತ್ತ ಹಾಗೂ ಅದರಿಂದಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಮಂಗಳೂರಿನ ನಾಗರೀಕರು ಆಗ್ರಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರ ಜೊತೆ ಮಂಗಳೂರಿನ ನಾಗರೀಕರು ನಗರದ ಹಲವಾರು ಸಮಸ್ಯೆಗಳ ಬಗ್ಗೆ ತಮ್ಮ ಅಳಲು ತೋಡಿಕೊಂಡರು.

ಪೋನ್ ಕರೆಗಳನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಂತೂರು ವೃತ್ತದ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಇಂಜಿನಿಯರ್ ಜತೆ ಸಮಾಲೋಚನೆ ನಡೆಸಿ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ನಗರದ ಸಂಚಾರ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಡಿ.12ರಂದು ಸಂಬಂಧ ಪಟ್ಟ ಎಲ್ಲರನ್ನೂ ಸೇರಿಸಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು

ಕುಪ್ಪೆಪದವಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಬೆಳ್ತಂಗಡಿಯಲ್ಲಿ ಗಾಂಜಾ ಮಾರಾಟ, ಮೂಡುಬಿದಿರೆಯಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಬಂದವು. ಮಂಗಳಾದೇವಿ ಮತ್ತು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರು ಕೂಡ ಕೇಳಿ ಬಂತು.

ಪಿವಿಎಸ್ ಜಂಕ್ಷನ್ ಮತ್ತು ಬಂಟ್ಸ್ ಹಾಸ್ಟೆಲ್ ವೃತ್ತ ನಡುವಣ ರಸ್ತೆಯಲ್ಲಿ ದೂರದ ಊರುಗಳಿಗೆ (ಬೆಂಗಳೂರು, ಮುಂಬೈ, ಬೆಳಗಾವಿ ಇತ್ಯಾದಿ) ಹೋಗುವ ಖಾಸಗಿ ಬಸ್ಸುಗಳನ್ನು ಬಹಳಷ್ಟು ಹೊತ್ತು ನಿಲ್ಲಿಸುವುದರಿಂದ ಈ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಈ ಕುರಿತು ತಪಾಸಣೆ ನಡೆಸಿ ಕ್ರಮ ಜರಗಿಸುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದರು.

ಉರ್ವ ಮಾರ್ಕೆಟ್- ಅಶೋಕನಗರ ರಸ್ತೆಯ ಎರಡು ಮದುವೆ ಹಾಲ್ ಗಳ ಬಳಿ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆಯ ಒಂದೇ ಕಡೆ ಪಾರ್ಕ್ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂಬ ಸಲಹೆ ಕೇಳಿ ಬಂತು. ಈ ಕುರಿತು ಹಾಲ್ ಗಳ ಮಾಲಕರಿಗೆ ನೊಟೀಸ್ ನೀಡಲಾಗುವುದು ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ಕಮಿಷನರ್ ಹೇಳಿದರು.

ಕದ್ರಿ ಪರಿಸರದಲ್ಲಿ ಇಡೀ ರಾತ್ರಿ ಯಕ್ಷಗಾನದಿಂದಾಗಿ ಶಬ್ಧ ಮಾಲಿನ್ಯ ಉಂಟಾಗಿ ಸುತ್ತಮುತ್ತಲಿನ ಜನರ ನಿದ್ದೆಗೆ ಅಡ್ಡಿಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು. ಮೈಕ್‌ನ ಶಬ್ದವನ್ನು ಕಡಿಮೆ ಮಾಡುವಂತೆ ಹಾಗೂ ರಾತ್ರಿ 10ರ ಬಳಿಕ ಒಳಾಂಗಣದಲ್ಲಿ ಮಾತ್ರ ಯಕ್ಷಗಾನದಂತಹ ಕಾರ್ಯಕ್ರಮ ನಡೆಸುವಂತೆ ಸಂಬಂಧ ಪಟ್ಟವರಿಗೆ ನೋಟಿಸ್ ನೀಡಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.

64ನೇ ಈ ಫೋನ್ ಇನ್ ಕಾರ್ಯಕ್ರಮದಲ್ಲಿ 25 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ , ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸುರೇಶ್ ಕುಮಾರ್, ಮಂಜುನಾಥ್, ಮೋಹನ್ ಕೊಟ್ಟಾರಿ, ಮುಹಮ್ಮದ್ ಶರೀಫ್, ಎಎಸ್ಸೈ ಯೂಸುಫ್, ಹೆಡ್ ಕಾನ್ಸ್‌ಟೇಬ್‌ಲ್ ಪುರುಷೋತ್ತಮ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.